ಬೆಂಗಳೂರು :
ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತಸಹಾಯಕ ರಮೇಶ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಅಕ್ಟೋಬರ್ 10ರಂದು ರಮೇಶ್ ಅವರ ನಿವಾಸಕ್ಕೆ ಐಟಿ ಅಧಿಕಾರಿಗಳು ಧಾವಿಸಿದ್ದರು. ಆದರೆ, ಅವರು ಮನೆಯಲ್ಲಿರಲಿಲ್ಲ. ಆಗ ಅವರು ಕೊರಟಗೆರೆಯಲ್ಲಿದ್ದರು. ಅಲ್ಲಿಗೆ ತೆರಳಿದ ಐಟಿ ಅಧಿಕಾರಿಗಳು ಪರಮೇಶ್ವರ್ ಅವರೊಂದಿಗೆ ರಮೇಶ್ ರನ್ನು ಒಟ್ಟಿಗೆ ಬೆಂಗಳೂರಿನ ಪರಮೇಶ್ವರ್ ಅವರ ನಿವಾಸಕ್ಕೆ ಕರೆತರಲಾಗಿತ್ತು. ಇಂದು ಮುಂಜಾನೆ 2.45ಕ್ಕೆ ಪರಮೇಶ್ವರ್ ಅವರ ಮನೆಯಲ್ಲಿ ತಪಾಸಣೆ ಮುಕ್ತಾಯವಾಗಿತ್ತು.
ಈ ವೇಳೆ, ರಮೇಶ್ ಕೂಡ ಪರಮೇಶ್ವರ್ ಅವರ ಮನೆಯಲ್ಲೇ ಇದ್ದರು. ಆಗಲೂ ಅವರಿಂದ ಯಾವುದೇ ಹೇಳಿಕೆಯನ್ನು ಪಡೆದಿರಲಿಲ್ಲ. ಇನ್ನು ದಾಳಿ ಹಿನ್ನೆಲೆಯಲ್ಲಿ ಎಲ್ಲರ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಂತೆಯೇ ರಮೇಶ್ ಅವರ ಮೊಬೈಲ್ ನ್ನು ಪಡೆಯಲಾಗಿತ್ತು. ಮೊಬೈಲ್ ನಲ್ಲಿದ್ದ ಮಾಹಿತಿಯನ್ನಷ್ಟೇ ಸಾಕ್ಷಿಗಳಿಗಾಗಿ ಪಡೆಯಲಾಗಿತ್ತು. ಆ ಬಳಿಕ ಅದನ್ನು ಹಿಂತಿರುಗಿಸಲಾಗಿತ್ತು ಎಂದು ಐಟಿ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪರಮೇಶ್ವರ್ ಶಿಕ್ಷಣ ಸಂಸ್ಥೆ, ಸಿದ್ಧಾರ್ಥ ಆಸ್ಪತ್ರೆ ಮೇಲೆ ಐಟಿ ದಾಳಿ ಮುಂದುವರಿದ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕರಾಗಿದ್ದ ರಮೇಶ್ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
