ಬೆಂಗಳೂರು
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜಿನ್ ಹೆನ್ರಿ ಡ್ಯೂನಾಂಟ್‍ರವರ ಜನ್ಮ ದಿನವನ್ನು ವಿಶ್ವ ರೆಡ್ ಕ್ರಾಸ್ ದಿನವಾಗಿ ಕರ್ನಾಟಕ ರಾಜ್ಯ ಶಾಖೆಯು ಬೆಂಗಳೂರಿನ ಜೀನ್ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಬುಧವಾರ ಆಚರಿಸಿತು.ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಜಯಕುಮಾರ್‍ವರು ಕಾರ್ಯಕ್ರಮ ಉದ್ಘಾಟಿಸಿ, ಜಗತ್ತಿನ ಅತಿ ವಿಸ್ತಾರವಾದ ಸರ್ವತಂತ್ರ ಸ್ವತಂತ್ರ ಸೇವಾ ಸಂಸ್ಥೆಯೇಂದೇ ಗುರುತಿಸಿಕೊಂಡಿರುವ ಈ ಸಂಸ್ಥೆ ಇತರ ಸ್ವಯಂಸೇವಾಸಂಸ್ಥೆಗಳಿಗಿಂತ ಭಿನ್ನವಾಗಿ ಗರಿಷ್ಠ ಸ್ಥಾನಮಾನಗಳನ್ನು ಉಳಿಸಿಕೊಂಡು ವಿಶಾಲವಾಗಿ ಬೆಳೆದುನಿಂತಿದೆ ಎಂದು ಶ್ಲಾಘಿಸಿದರು.
ಕುಮಾರ್ ವಿ.ಎಲ್.ಎಸ್. ರವರು ವಿಶ್ವ ರೆಡ್ ಕ್ರಾಸ್ ದಿನದ ಮಹತ್ವವನ್ನು ಕುರಿತು ಮಾತನಾಡಿದರು.ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮೃತ್ಯುಂಜಯ ಮಹಾಪಾತ್ರರವರು ರೆಡ್ ಕ್ರಾಸ್ ರಕ್ತನಿಧಿಗೆ 16.4 ಲಕ್ಷದ ರಕ್ತನಿಧಿ ಉಪಕರಣಗಳನ್ನು ನೀಡಿದ ವಿಶೇಷ ಸಂದರ್ಭದಲ್ಲಿ ಮಾತನಾಡಿ, ಮನುಕುಲದ ಸೇವೆಯೇ ಪರಮ ಧರ್ಮ ಎಂದರು. ಮಾನವೀಯತೆಯ ಪರಮ ಮೌಲ್ಯಗಳನ್ನು ಬದುಕಿನ ಉಸಿರಿನಲ್ಲಿ ಅಡಗಿಸಿಕೊಂಡು ಸೇವಾನಿಷ್ಠ ಸ್ವಯಂಸೇವಕರ ನಿಸ್ವಾರ್ಥ ಕಾಯಕವನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವ ಈ ರೆಡ್ ಕ್ರಾಸ್ ಸಂಸ್ಥೆ ಇಡೀ ಭಾರತದಾದ್ಯಂತ ತನ್ನ 700 ಶಾಖೆಗಳನ್ನು ಸಂಸ್ಥಾಪಿಸಿ ಬಹುಶಾಖೀ ವಟವೃಕ್ಷದಂತೆ ಹಬ್ಬಿನಿಂತು ಸೇವಾನಿರತವಾಗಿದೆ ಎಂದು ಅಭಿನಂದಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ಉಪಾಧ್ಯಕ್ಷರಾದ ಡಾ. ಎಂ ಕೆ ಶ್ರೀಧರ್‍ರವರು ಮಾತನಾಡಿ, ವಿಪತ್ತು ನಿರ್ವಹಣೆ ಮತ್ತು ವಿಕೋಪ ಸಂದರ್ಭಗಳಲ್ಲಿ ಯುವ ರೆಡ್ ಕ್ರಾಸ್ ಸ್ವಯಂಸೇವಕರ ಪಾತ್ರ ಮಹತ್ವವಾದದ್ದು, ಈ ನಿಟ್ಟಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ವತಿಯಿಂದ ಪ್ರತ್ಯೇಕವಾದ ಪಠ್ಯಕ್ರಮವನ್ನು ರಚಿಸಿ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿಗಳಾದ ಎಸ್ ನಾಗಣ್ಣನವರು ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ರೆಡ್ ಕ್ರಾಸ್ ತತ್ವಗಳು, ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಸುಸ್ಥಿರ ಸಮುದಾಯಗಳ ನಿರ್ಮಾಣದಲ್ಲಿ ನಿರತರಾಗಿರುವ ಎಲ್ಲಾ ಸ್ವಯಂಸೇವಕರನ್ನು ಅಭಿನಂದಿಸಿದರು.
“ರೆಡ್ ಕ್ರಾಸ್ ಬಗ್ಗೆ ನಿಮ್ಮ ಒಲವು ಮತ್ತು ಪ್ರೀತಿ” ಎಂಬ ವಿಷಯಕ್ಕೆ ಅನುಗುಣವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಲೇಖನ ಸ್ಫರ್ಧೆಯಲ್ಲಿ ವಿಜೇತರಾದ ಶಿವಪ್ಪ ಉಮೇಶ್ ಗೊಡ್ಡೆಮ್ಮಿ ಹುಬ್ಬಳ್ಳಿ, ಪ್ರಥಮ ಬಹುಮಾನ, ಕುಮಾರಿ ನಿಂಗಮ್ಮ ಚಿನ್ಕಮದ್ದಿನಿ, ಗದಗ, ದ್ವೀತಿಯ ಬಹುಮಾನ, ಕುಮಾರಿ ಕೃಷ್ಣವೇಣಿ, ಬೆಂಗಳೂರು, ತೃತೀಯ ಬಹುಮಾನವನ್ನು ಪಡೆದ ವಿದ್ಯಾರ್ಥಿಗಳನ್ನು “ವಿಶ್ವ ರೆಡ್ ಕ್ರಾಸ್” ದಿನದ ವಿಶೇಷ ದಿನದಂದು ಗುರುತಿಸಿ ಗೌರವಿಸಲಾಯಿತು.
ಡಾ. ಕುಮಾರ್ ವಿ.ಎಲ್.ಎಸ್ ರವರು ಮಾನ್ಸೂನ್ ಸನಿಹವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅವರ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಸ್ವಯಂಸೇವಕರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಸಮಯವನ್ನು ಕಳೆದರು. ಅವರ ಅಗತ್ಯತೆಗಳಾದ ದಿನಸಿ ಪದಾರ್ಥಗಳನ್ನು ನೀಡಲಾಯಿತು. ಅಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಶಾಲಾ ಬ್ಯಾಗುಗಳನ್ನು ದಾನವಾಗಿ ನೀಡಲಾಯಿತು.