ಬೆಂಗಳೂರು :
ಮಹಾಮಾರಿ ಕೊರೊನಾ ಸಿಲಿಕಾನ್ ಸಿಟಿ ಪೊಲೀಸರಿಗೆ ಹೆಚ್ಚಾಗಿ ವಕ್ಕರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಚಿಕಿತ್ಸೆ ನೀಡಲು ನಗರದಲ್ಲಿ ಪ್ರತ್ಯೇಕ 5 ಖಾಸಗಿ ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿದೆ.
ನಗರದ ವಿಕ್ರಮ್ ಆಸ್ಪತ್ರೆ, ಎಂ.ಎಸ್.ರಾಮಯ್ಯ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಸೇಂಟ್ ಜಾನ್ಸ್ ಆಸ್ಪತ್ರೆ ಸೇರಿ ಮಹಾವೀರ್ ಜೈನ್ ಆಸ್ಪತ್ರೆಯನ್ನು ಪೊಲೀಸರ ಚಿಕಿತ್ಸೆಗಾಗಿ ಸರ್ಕಾರ ಪರಿಗಣಿಸಿದೆ.
ಪ್ರತಿಯೊಂದು ಆಸ್ಪತ್ರೆಯಲ್ಲೂ ಸಾರ್ವಜನಿಕರ ಸಂಪರ್ಕ ಅಧಿಕಾರಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ತಕ್ಷಣವೇ ಪೊಲೀಸರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ ಕಾರ್ಯ ನಡೆಯಲಿದೆ.
ಇತ್ತೀಚೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸರು, ಸಮರ್ಪಕ ಊಟ ಹಾಗೂ ಉತ್ತಮವಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ, ಪೊಲೀಸರಿಗೆ ಪ್ರತ್ಯೇಕ ಆಸ್ಪತ್ರೆ ಕಾಯ್ದಿರಿಸುವ ನಿರ್ಧಾರ ಕೈಗೊಂಡಿತು.
ಸದ್ಯ ಸೋಂಕಿತ ಪೊಲೀಸರಿಗೆ ಗುಣಮಟ್ಟದ ಆಹಾರ ಹಾಗೂ ಮೂಲ ಸೌಕರ್ಯಗಳೊಂದಿಗೆ ಉತ್ತಮ ಚಿಕಿತ್ಸೆ ದೊರಕಲಿದೆ. ಸಿಲಿಕಾನ್ ಸಿಟಿಯ 110 ಜನ ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದರಲ್ಲಿ ನಾಲ್ವರನ್ನು ಕೊರೊನಾ ಬಲಿ ಪಡೆದಿದೆ.
ಇನ್ನು,15 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಉಳಿದ 95 ಸೋಂಕಿತ ಪೊಲೀಸರಿಗೆ ಚಿಕಿತ್ಸೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ