ಬೆಂಗಳೂರು :
ತಮಗೆ ಝಡ್ ಶ್ರೇಣಿಯ ಭದ್ರತೆ ಒದಗಿಸುವಂತೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನೀಡಿದ್ದ ಪೈಲೆಟ್ ಸೇವೆಯನ್ನು ಸೋಮವಾರ ಬೆಳಗ್ಗಿನಿಂದ ಏಕಾ ಏಕಿ ಗೃಹ ಇಲಾಖೆ ವಾಪಸ್ ಪಡೆದು ಕೇವಲ ಎಸ್ಕಾರ್ಟ್ ಮಾತ್ರ ಮುಂದುವರೆಸಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಿಗೆ ನೀಡಲಾಗಿದ್ದ ಭದ್ರತೆಯನ್ನು ಸರ್ಕಾರ ಹಿಂದಕ್ಕೆ ಪಡೆದಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಬಿ ಭದ್ರತಾ ಶ್ರೇಣಿಯನ್ನು ಹೊಂದಿದ್ದ 27 ಸಚಿವರ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಇದೀಗ ವಿರೋಧ ಪಕ್ಷದ ನಾಯಕರೂ ಹಾಗೂ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ ಅವರಿಗೆ ನೀಡಲಾಗಿದ್ದ ಝೆಡ್ ಪ್ಲಸ್ ಭದ್ರತೆಯನ್ನು ಹಿಂಪಡೆಯಲಾಗಿದೆ.
ವಿವಿಐಪಿ ಭದ್ರತೆ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿಗಳಿಗೆ ವಿಪಕ್ಷ ನಾಯಕರಿಗೆ ಪೈಲೆಟ್ ಹಾಗೂ ಎಸ್ಕಾರ್ಟ್ ಸೇವೆ ನೀಡಲಾಗುತ್ತದೆ.
ಆದರೆ, ಯಾವುದೆ ಕಾರಣ ನೀಡದೆ ಸೋಮವಾರ ಬೆಳಗ್ಗಿನಿಂದ ಪೈಲೆಟ್ ವಾಹನಗಳನ್ನು ವಾಪಾಸ್ ಪಡೆಯಲಾಗಿದೆ. ಆಯಾ ನಾಯಕರುಗಳು ಹೋಗುವ ಸ್ಥಳ ಹಾಗೂ ಸೇರುವ ಜನರಿಗೆ ಅನುಗುಣವಾಗಿ ಅವರ ಭದ್ರತೆಯ ಪ್ರಮಾಣ ನಿರ್ಧಾರವಾಗುತ್ತದೆ.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರಿಗೂ ಅತಿ ಹೆಚ್ಚು ಜನ ಸೇರುವುದರಿಂದ ಅವರಿಗೆ ವಿವಿಐಪಿ ಭದ್ರತೆ ಎಸ್ಕಾರ್ಟ್ ಹಾಗೂ ಪೈಲೆಟ್ ಸೇವೆ ನೀಡಲಾಗುತ್ತಿತ್ತು. ಆದರೆ ಈಗ ಏಕಾಏಕಿ ಪೈಲೆಟ್ ಸೇವೆ ಕಡಿತಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ