ಎಲ್ಲಾ ಜಯಂತಿಗಳಲ್ಲೂ ಮುಖ್ಯಮಂತ್ರಿ ಭಾಗವಹಿಸಬೇಕು ಎಂದು ಬಯಸುವುದೂ ಸರಿಯಲ್ಲ

ಬೆಂಗಳೂರು

         ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿಯನ್ನು ನಿರ್ಭಂಧಿಸುವ ಪ್ರಶ್ನೆ ಇಲ್ಲ ಎಂದಿರುವ ಸಿಎಂ ಕುಮಾರಸ್ವಾಮಿ,ಇಷ್ಟಾದರೂ ಸರ್ಕಾರ ನಡೆಸುವ ಎಲ್ಲ ಜಯಂತಿಗಳಲ್ಲಿ ಮುಖ್ಯಮಂತ್ರಿಗಳೇ ಭಾಗವಹಿಸಬೇಕು ಎಂದು ಬಯಸುವುದೂ ಸರಿಯಲ್ಲ ಎಂದು ಟೀಕಾಕಾರರಿಗೆ ಪ್ರತಿಯೇಟು ನೀಡಿದ್ದಾರೆ.

         ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂದಿರುವ ನೆಹರೂ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಅವರು ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

         ನಾನು ಟಿಪ್ಪು ಜಯಂತಿಯಲ್ಲಿ ಭಾಗವಹಿಸದೆ ಇರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೇನೂ ಇಲ್ಲ.ಯಾಕೆಂದರೆ ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂಬ ಸಲಹೆ ಬಂದಿದ್ದರಿಂದ ನಾನು ವಿಶ್ರಾಂತಿಯಲ್ಲಿದ್ದೆ ಅಷ್ಟೇ.

         ಆದರೆ ಅದನ್ನೇ ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ.ಟಿಪ್ಪು ಜಯಂತಿಯಲ್ಲಿ ಮುಖ್ಯಮಂತ್ರಿಗಳು ಉದ್ದೇಶಪೂರ್ವಕವಾಗಿ ಭಾಗವಹಿಸಿಲ್ಲ ಎಂದು ಟೀಕೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

         ಸರ್ಕಾರದ ವತಿಯಿಂದ ಹಲವು ಜಯಂತಿಗಳನ್ನು,ಉತ್ಸವಗಳನ್ನು ನಡೆಸಲಾಗುತ್ತದೆ.ಅಲ್ಲೆಲ್ಲ ಮುಖ್ಯಮಂತ್ರಿಗಳೇ ಭಾಗವಹಿಸಬೇಕು ಎಂಬ ಬಾವನೆ ಸರಿಯಲ್ಲ.ಮಂತ್ರಿಗಳು ಇರುತ್ತಾರೆ.ಅವರೂ ಭಾಗವಹಿಸಬಹುದು ಎಂದು ಹೇಳಿದರು.

          ಅಂದ ಹಾಗೆ ಟಿಪ್ಪು ಜಯಂತಿಯನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ಜಯಂತಿಯನ್ನು ನಿರ್ಭಂಧಿಸುವ ಪ್ರಶ್ನೆಯೇ ಇಲ್ಲ.ಪ್ರತಿ ವರ್ಷದಂತೆ ಅದು ನಡೆಯುತ್ತದೆ ಎಂದರು.

         ಆಂಬಿಡೆಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರನ್ನು ಬಂಧಿಸಲಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಇಡೀ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಮಾಡುವುದೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದರು.

        ನಾವು ಅಧಿಕಾರಿಗಳಿಗೂ ಯಾವ ರೀತಿಯ ಸೂಚನೆ ನೀಡಿಲ್ಲ.ತಮ್ಮ ಪಾಡಿಗೆ ತಾವು ಸ್ವತಂತ್ರವಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.ನಮ್ಮ ಪಾಡಿಗೆ ನಾವಿದ್ದೇವೆ ಎಂದು ವಿವರಿಸಿದರು.

        ಬೆಳಗಾವಿಯ ಆಕ್ಸಿಸ್ ಬ್ಯಾಂಕ್ ರೈತರಿಗೆ ಸಾಲ ಹಿಂತಿರುಗಿಸುವಂತೆ ನೋಟೀಸ್ ನೀಡಿದ ಪ್ರಕರಣದ ಕುರಿತು ಕೇಳಿದಾಗ ಕಿಡಿ ಕಿಡಿಯಾದ ಅವರು, ಇನ್ನು ಮುಂದೆ ಯಾವುದೇ ಬ್ಯಾಂಕುಗಳು ರೈತರಿಗೆ ಸಾಲ ಹಿಂತಿರುಗಿಸುವಂತೆ ನೋಟೀಸ್ ನೀಡಿದರೆ ಸಂಬಂಧಪಟ್ಟ ಬ್ಯಾಂಕುಗಳ ಮ್ಯಾನೇಜರುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

        ಇತ್ತೀಚೆಗೆ ತಾಯಿ,ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ರೈತರ ಕುಟುಂಬದಲ್ಲಿ ನಡೆದಿದೆ.ಹೀಗಾಗಿ ಇದು ಕೂಡಾ ಸಾಲದಿಂದಾದ ಪರಿಣಾಮ ಎಂದು ಹೇಳಲಾಗಿತ್ತು.ಆದರೆ ಈಗಿರುವ ಮಾಹಿತಿಯಂತೆ ಆ ಹೆಣ್ಣು ಮಗಳ ಮಾವ,ಮನೆ ಕಟ್ಟುವ ಸಲುವಾಗಿ ಸಾಲ ಮಾಡಿದ್ದರು.ಅದಕ್ಕೂ ಕೃಷಿ ಸಾಲಕ್ಕೂ ಸಂಬಂಧವಿಲ್ಲ ಎಂದರು.

        ಎಲ್ಲ ಪ್ರಕರಣಗಳನ್ನೂ ರೈತರ ಸಾಲ ಮನ್ನಾ ಪ್ರಕರಣಗಳಿಗೆ ಜೋಡಿಸುವುದು ಸರಿಯಲ್ಲ ಅಂತ ಹೇಳಿದ ಅವರು ,ಸರ್ಕಾರವೂ ಇಂತಹ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ ಎಂದು ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap