ತುಮಕೂರು :
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 15 ಪಾಸಿಟೀವ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಪಾವಗಡ ಹಾಗೂ ತುಮಕೂರು ತಾಲ್ಲೂಕಿನಲ್ಲಿ ತಲಾ 4, ಶಿರಾ ತಾಲ್ಲೂಕಿನಲ್ಲಿ 3, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ಮಧುಗಿರಿ ತಾಲ್ಲೂಕಿನಲ್ಲಿ ತಲಾ ಒಂದು ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.
ಪಾವಗಡ ತಾಲ್ಲೂಕಿನ ಕನಿವೇನಹಳ್ಳಿಯ 40 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿದೆ. ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಿಂದ ಬಂದಿದ್ದರು, ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪಾವಗಡ ತಾಲ್ಲೂಕಿನ 42, 29 ಹಾಗೂ 45 ವರ್ಷದ ಪುರುಷರಿಗೆ ಕೊರೊನಾ ಪಾಸಿಟೀವ್ ದೃಢಪಟ್ಟಿದೆ. ಪಾವಗಡ ಆಸ್ಪತ್ರೆಯಲ್ಲಿ ಇವರ ಗಂಟಲು ದ್ರವ ಮಾದರಿಯನ್ನು ಪಡೆದು ತುಮಕೂರು ಆಸ್ಪತ್ರೆ ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶ ಕೋವಿಡ್-19 ಪಾಸಿಟೀವ್ ಎಂದು ವರದಿ ಬಂದಿದೆ ಎಂದು ಡಿಹೆಚ್‍ಓ ಹೇಳಿದ್ದಾರೆ.
ಶಿರಾ ತಾಲ್ಲೂಕಿನ ನಾಲ್ವರಿಗೆ ಮತ್ತೆ ಸೋಂಕು ಕಾಣಿಸಿದೆ. 36 ವರ್ಷದ ಮಹಿಳೆ ಈ ತಿಂಗಳ 21ರಂದು ರಾಜಸ್ಥಾನದಿಂದ ಬಂದಿದ್ದರು. ಇವರಿಗೆ ಕೊರೊನಾ ಪಾಸಿಟೀವ್ ಖಚಿತವಾಗಿದೆ. ಇವರನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಶಿರಾದ 55 ವರ್ಷದ ವ್ಯಕ್ತಿ ಹಾಗೂ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ 43 ವರ್ಷದ ಗಂಡಸಿಗೆ ಸೋಂಕು ತಗುಲಿದೆ. ಇವರು ಈ ತಿಂಗಳ 22ರಂದು ಆಂಧ್ರದ ರಾಯದುರ್ಗದಿಂದ ತಮ್ಮ ಮಗನ ಜೊತೆ ಬಂದಿದ್ದರು. ಇವರ ಹೆಂಡತಿ ಹಾಗೂ ಮಗನಿಗೂ ಪಾಸಿಟೀವ್ ಬಂದಿರುವುದು ವರದಿಯಾಗಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಬಂದಿದ್ದ ತುಮಕೂರು ತಾಲ್ಲೂಕಿನ 58 ವರ್ಷದ ವ್ಯಕ್ತಿ ಹಾಗೂ 30 ವರ್ಷದ ಇವರ ಪುತ್ರನಿಗೆ ಸೋಂಕು ಕಾಣಿಸಿದೆ. ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿದೆ.
ತುಮಕೂರು ತಾಲ್ಲೂಕಿನ 31 ವರ್ಷದ ಗಂಡಸಿಗೆ ಕೋವಿಡ್ ಪಾಸಿಟೀವ್ ಖಚಿತವಾಗಿದೆ. ಇವರ ಪ್ರಯಾಣದ ಮಾಹಿತಿ ತಿಳಿದುಬಂದಿಲ್ಲ. ತುಮಕೂರು ತಾಲ್ಲೂಕಿನ 11 ವರ್ಷದ ಬಾಲಕನಿಗೂ ಸೋಂಕು ಬಂದಿದೆ. ಸೋಂಕಿತರನ್ನು ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ತಿಪಟೂರು ತಾಲ್ಲೂಕಿನ 40 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿದೆ. ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ ತಾಲ್ಲೂಕಿನ 22 ವರ್ಷದ ಯುವಕನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಮಾಡಿ, ಬಂದ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಗುಬ್ಬಿ ತಾಲ್ಲೂಕಿನ 48 ವರ್ಷದ ಪುರುಷ, ಮಧುಗಿರಿ ತಾಲ್ಲೂಕು ಭೋವಿಪಾಳ್ಯದ 37 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಪತೆಯಾಗಿರುವ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ವಿವಿಧೆಡೆ ಕ್ವಾರಂಟೈನ್ ಮಾಡಲಾಗಿದೆ. ಪತ್ತೆ ಆಗದವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಡಿಹೆಚ್‍ಓ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 73ಕ್ಕೆ ಏರಿದೆ. ಸೋಂಕಿನಿಂದ ಈವರೆಗೆ ಮೂವರು ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ