ತುಮಕೂರು:
ಜಿಪಂ ಲಿಂಕ್ ಡಾಕ್ಯೂಮೆಂಟ್ ಸೇರಿ 545.70ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಕೊಡದಿದ್ದರೆ, ಅನುದಾನ ವಾಪಸ್ ಹೋಗಲಿದೆ. ಹೀಗಾಗಿ ನ.20ರ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು, ಶಾಸಕರು, ಸಂಸದರು ಸಹಕರಿಸಿ ಯೋಜನೆಗೆ ಅನುಮೋದಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಪಂಚಾಯತ್ ಅನ್ನು ಸೂಪರ್‍ಸೀಡ್ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ. ಆದರೆ ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು. ಈ ಸಂಬಂಧ ವೈಯಕ್ತಿಕವಾಗಿ ನಾನು ಸಹ ಸಭೆಗೆ ಹಾಜರಾಗುವಂತೆ ಶಾಸಕರು, ಸದಸ್ಯರಿಗೆ ಪತ್ರ ಬರೆದಿದ್ದು, ಕೋರಂ ಲಭ್ಯವಾಗಿ ಅನುಮೋದನೆ ಸಿಗದಿದ್ದರೆ ಅನುದಾನವೇ ರದ್ದಾಗಲಿದೆ. ಅನುಮೋದನೆ ನೀಡಬೇಕಾದ್ದು ಜಿಪಂಸದಸ್ಯರ ಕರ್ತವ್ಯ. ಇದನ್ನು ನಾವು ಒತ್ತಿ ಹೇಳಬೇಕಿಲ್ಲ. ಮಾಧ್ಯಮಗಳ ಮುಖೇನ ಮತ್ತೊಮ್ಮೆ ಸದಸ್ಯರಿಗೆ ಆಗಮಿಸುವಂತೆ ಕೋರುತ್ತಿದ್ದೇನೆ ಎಂದರು.
ಎತ್ತಿನಹೊಳೆ, ರೈಲು ಯೋಜನೆ ಭೂ ಸರ್ವೆಗೆ ಗಡುವು:
ಸಭೆಯ ಆರಂಭದಲ್ಲೇ ಎತ್ತಿನಹೊಳೆ, ತುಮಕೂರು ರಾಯದುರ್ಗ-ತುಮಕೂರು ದಾವಣೆಗೆರೆ ರೈಲ್ವೆ ಮಾರ್ಗ ಯೋಜನೆ ಅನುಷ್ಟಾನ ವಿಳಂಬಕ್ಕೆ ¸ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜನವರಿ ವೇಳೆಗೆ ಎತ್ತಿನಹೊಳೆ ಭೂಸ್ವಾಧೀನ ಸರ್ವೆ ಕಾರ್ಯ ಮುಗಿದು ಅಧಿಸೂಚನೆ ಹೊರಡಿಸಬೇಕು. ತಿಪಟೂರು ತಾಲ್ಲೂಕಿನ ನಾಲ್ಕು ಹಳ್ಳಿಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆಯಿದೆ. ಇದನ್ನು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
2011ರಿಂದ ಕುಂಟುತ್ತಾ ಸಾಗಿರುವ ತುಮಕೂರು ರಾಯದುರ್ಗ ರೈಲ್ವೆ ಯೋಜನೆ ಹಾಗೂ ತುಮಕೂರು- ದಾವಣೆಗೆರೆ ರೈಲ್ವೆ ಸರ್ವೆ ಕಾರ್ಯವನ್ನು ಡಿಸೆಂಬರ್‍ವೇಳೆಗೆ ಪೂರ್ಣಗೊಳಿಸಬೇಕು ಎಂದು ಭೂಸ್ವಾಧೀನಾಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು ಶಿರಾ ಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ 90 ಎಕರೆ ಜಾಗವನ್ನು ರೈಲ್ವೆ ಯೋಜನೆಗೆ ಬಿಟ್ಟುಕೊಡುವಲ್ಲಿ ಆಗಿರುವ ಅನಗತ್ಯ ವಿಳಂಬವನ್ನು ತಪ್ಪಿಸಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ತೋಟಕಾರಿಕಾ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಕುಮಾರ್ ಅವರು ಪ್ರತಿಕ್ರಿಯಿಸಿ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯನ್ನು ಕೇಂದ್ರ ಸರಕಾರದ ಆದ್ಯತಾ ಯೋಜನೆಯಾಗಿ ಪರಿಗಣಿಸಿ ಒತ್ತು ಕೊಡಲಾಗುತ್ತಿದೆ. ತುಮಕೂರು-ರಾಯದುರ್ಗದ ಯೋಜನೆಯನ್ನು ಎರಡು ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡಿದ್ದು, ತುಮಕೂರು ಹಾಗೂ ಪಾವಗಡ ಭಾಗದಲ್ಲಿ ಕಾಮಗಾರಿ ಶುರುವಾಗಿದೆ ಎಂದು ಉತ್ತರಿಸಿದರು.
ಹಳ್ಳಿಗಳಲ್ಲಿ ಮದ್ಯ, ಅಬ್ಕಾರಿ ಅಧಿಕಾರಿಗಳೇ ಶಾಮೀಲು :
ಹಳ್ಳಿಗಳಲ್ಲಿ ಕುಡುಕರ ಹಾವಳಿ ವಿಪರೀತವಾಗಿದ್ದು, ಬೈಕ್‍ಗಳಲ್ಲಿ ಮದ್ಯದ ಬಾಟೆಲ್‍ಗಳನ್ನು ಹಳ್ಳಿಗೆ ಸಾಗಿಸಿ, ಮನೆ ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ನೆಪ ಮಾತ್ರಕ್ಕೆ ದಾಳಿ ಮಾಡುತ್ತಿದ್ದು, ದಾಳಿ ವೇಳೆ ನಿಗದಿಗಿಂತ ಹೆಚ್ಚು ಪತ್ತೆಯಾದರೂ ಅದನ್ನು ಮರೆಮಾಚುವ ಕೆಲಸ ಮಾಡಲಾಗುತ್ತಿದೆ ಎಂದರು. ಅಬ್ಕಾರಿ ಉಪಾಧೀಕ್ಷಕರು 892 ಕೇಸ್ ದಾಖಲಿಸಿದ್ದೇವೆಂದು ಸಮಜಾಯಿಷಿ ನೀಡಲೆತ್ನಿಸಿದರೂ ಒಪ್ಪದ ಸಚಿವರು ನನಗೆಲ್ಲ ಗೊತ್ತಿದೆ. ಮೊದಲು ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ ಎಂದು ಸೂಚಿಸಿದರು. ತುರುವೇಕೆರೆ ಶಾಸಕ ಮಸಾಲೆ ಜಯರಾಂ ದನಿಗೂಡಿಸಿದರು.
ಒಬ್ಬರಿಗೆ ಮಾತ್ರ ಡೀಮ್ಡ್ ಫಾರೆಸ್ಟ್ ಅನ್ವಯವೇ?:
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಒಂದೇ ಸ್ಥಳದಲ್ಲಿ ಐದು ಸಂಸ್ಥೆಗಳಿಗೆ ಗಣಿಗಾರಿಕೆಗೆ ಅನುಮತಿ ಕೊಟ್ಟು, ಒಂದು ಸಂಸ್ಥೆಗೆ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ ತಡೆ ನೀಡಿರುವ ಹಿಂದಿನ ಉದ್ದೇಶವಾದರೂ ಎಂದು ಡಿಎಫ್‍ಓ ಅವರನ್ನು ಪ್ರಶ್ನಿಸಿದ ಸಚಿವರು, ಬಂಡೆ ಸ್ಥಳದಲ್ಲಿ ಐವರಿಗೆ ಅನುಮತಿ ನೀಡಿರುವಾಗ ಒಬ್ಬರಿಗೆ ಮಾತ್ರ ಡೀಮ್ಡ್ ಫಾರೆಸ್ಟ್ ಅನ್ವಯಿಸುತ್ತದೆಯೇ? ಕಾನೂನುಬದ್ಧ ಅನುಮತಿ ಪಡೆದವರನ್ನು ಗಣಿಗಾರಿಕೆ ನಡೆಸಲು ಅವಕಾಶ ಕೊಡಿ ಎಂದು ಸೂಚಿಸಿದರು.
ಪ್ರಸೂತಿ ಮತ್ತು ಕಣ್ಣಿನ ಚಿಕಿತ್ಸೆ ಎಲ್ಲೆಡೆ ಸಿಗಬೇಕು:
ಪ್ರಸೂತಿ ಹಾಗೂ ಕಣ್ಣಿನ ಚಿಕಿತ್ಸೆ ಕೋವಿಡ್ ಕಾರಣಕ್ಕೆ ಎಲ್ಲಾ ಆಸ್ಪತ್ರೆಗಳಲ್ಲಿ ಸಿಗುತ್ತಿರಲಿಲ್ಲ. ಮುಂದೆ ಹೀಗಾಗಬರದು. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಹೆರಿಗೆ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆಗಳು ನಡೆಯುವಂತೆ ವ್ಯವಸ್ಥೆ ಆಗಬೇಕು ಎಂದು ಡಿಎಚ್‍ಒಗೆ ಸೂಚಿಸಿದ ಸಚಿವರು ಸಾವಿರಕ್ಕೂ ಹೆಚ್ಚು ಹೆರಿಗೆ ನಡೆಯುವ ಆಸ್ಪತ್ರೆಗಳಲ್ಲಿ ಲಕ್ಷ್ಯ ಯೋಜನೆ ವಿಸ್ತರಿಸಲು ಸೂಚಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕುಣಿಗಲ್ ಶಾಸಕ ಡಾ.ರಂಗನಾಥ್ ಸರಕಾರಿ ಆಸ್ಪತ್ರೆಯಿಂದ ಆರೋಗ್ಯ ಭಾಗ್ಯದಡಿ ಶಿಫಾರಸ್ಸು ಪಡೆದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರಿಗೆ ಉಚಿತ ಚಿಕಿತ್ಸೆ ನೀಡಬೇಕೆಂಬ ನಿಯಮವಿದ್ದರೂ ರೋಗಿಗಳಿಂದ ಸಾವಿರಾರು ರೂಪಾಯಿ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಇಂತಹವರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯವನ್ನು ಡಿಎಚ್‍ಒ ಪ್ರದರ್ಶಿಸುತ್ತಿಲ್ಲ. ಬರೀ ನೋಟಿಸ್ ನೀಡಿ ಸುಮ್ಮನಾಗುತ್ತಿದ್ದಾರೆ. ಬೇಕಾದರೆ ದಾಖಲೆ ಸಹಿತ ಬಹಿರಂಗಪಡಿಸುವೆ ಎಂದರು. ಸಚಿವರು ಪ್ರತಿಕ್ರಿಯಿಸಿ ಒಂದು ವೇಳೆ ಹಾಗೇ ಕಟ್ಟಿಸಿಕೊಂಡಿದ್ದರೆ ವಾಪಸ್ ಕೊಡಿಸಲು ಕ್ರಮವಹಿಸಿ ಎಂದು ಡಿಎಚ್‍ಒಗೆ ಸೂಚಿಸಿದರು. ಪ್ರತಿ ತಾಲ್ಲೂಕಿನಲ್ಲಿ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸುವಂತೆ ಪರಿಷತ್ ಶಾಸಕ ತಿಪ್ಪೇಸ್ವಾಮಿ ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಬಾಬೂಜೀ, ಜಗಜೀವನರಾಂ ಅವರ ಹೆಸರಿನ ಭವನ ನಿರ್ಮಾಣ ನನೆಗುದಿಗೆ ಬಿದ್ದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಜಾಗ ಇಲ್ಲದಿದ್ದರೆ ಪಂಚಾಯ್ತಿ ಜಾಗ ಒದಗಿಸಿಲ್ಲ ಎಂದು ಸರಕಾರಕ್ಕೆ ತಿಂಗಳೊಳಗೆ ವರದಿ ಕೊಡಿ. ಸುಮ್ಮನೇ ವರ್ಷಾನುಗಟ್ಟಲೇ ಎಳೆಯಬೇಡಿ ಎಂದರು.
60:40 ಅನುಪಾತದಲ್ಲಿ ಕಾಮಗಾರಿ:
ಮನರೇಗಾ ಯೋಜನೆಯಡಿ ಕಾಮಗಾರಿಯನ್ನು ಕೈಗೊಂಡು ಹಣ ಖರ್ಚು ಮಾಡಲು ಯಾವುದೇ ಮಿತಿಯಿಲ್ಲ. 60ಃ40 ಪ್ರಮಾಣದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ರೂಪಿಸಲು ಪಿಡಿಒಗಳಿಗೆ ಸೂಚನೆ ನೀಡುವಂತೆ ಸಚಿವರು ಸಿಇಓ ಶುಭಾ ಕಲ್ಯಾಣ್‍ಗೆ ಸೂಚನೆ ನೀಡಿದರು.
ಜಲಜೀವನ್ ಮಿಷನ್ ಕಾರ್ಯಕ್ರಮದಡಿ ಮೊದಲ ಹಂತವಾಗಿ ಓವರ್ ಹೆಡ್ ಟ್ಯಾಂಕ್ ಇರುವ ಹಳ್ಳಿಗಳ ಪ್ರತಿಯೊಂದು ಮನೆ-ಮನೆಗೂ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡಲಾಗುವುದು. ಇಂತಹ ಹಳ್ಳಿಗಳನ್ನು ಗುರುತಿಸುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಸತಿ ಯೊಜನೆಗೆ ಸಂಬಂಧಿಸಿದಂತೆ 28ಸಾವಿರ ಮನೆಗಳು ಬಾಕಿ ಇದ್ದು, ನಿರ್ಮಾಣವೇ ಆಗದಿರುವ 3040 ಮನೆಗಳನ್ನು ಪಟ್ಟಿಯಿಂದ ಕೈ ಬಿಟ್ಟು ಲಿಂಟಲ್ ಹಾಗೂ ರೂಫ್ ಹಂತದ ಮನೆಗಳನ್ನು ಬೇಗ ಪೂರ್ಣಗೊಳಿಸಲು ಸಿಇಗೆ ಸೂಚಿಸಿದರು. ಬಹುಗ್ರಾಮ ಯೋಜನೆಯೂ ನಿರರ್ಥಕವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಚಾರ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೊಷಿಸುವ ಕುರಿತು ಮಾಹಿತಿ ನೀಡುವಂತೆ ಸಂಸದ ನಾರಾಯಣಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಸಭೆಗೆ ಗೈರಾದ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿಗೆ ಮೆಮೊ ಕಳುಹಿಸಲು ಸಚಿವರು ಸೂಚಿಸಿದರು.
ಕಾರ್ಮಿಕರ ನೋಂದಣಿ ಸಮರ್ಪಕವಾಗಿ ನಡೆದಿಲ್ಲ:
ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಸಚಿವರಿಗೆ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಚಿವರು ಕಾರ್ಮಿಕರ ಕಲ್ಯಾಣ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕಲ್ಲದೆ ನೋಂದಾಯಿತ ಗುತ್ತಿಗೆದಾರರಿಂದ ಕಟ್ಟಡ ಕಾರ್ಮಿಕರು ಹಾಗೂ ಗಾರೆ ಕೆಲಸಗಾರರ ಮಾಹಿತಿ ಪಡೆದು ಕಾರ್ಮಿಕರ ನೋಂದಣಿಗೆ ಕ್ರಮವಹಿಸಬೇಕು. ಜಿಲ್ಲೆಯ ಪ್ರವಾಸ ಮಾಡಿ ಅಭಿಯಾನ ಕೈಗೊಳ್ಳಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸ್ಸಿನ ಸೌಲಭ್ಯ ನೀಡಿದ್ದರೂ ಸಹ ಗಾರ್ಮೆಂಟ್ಸ್‍ನಲ್ಲಿ ದುಡಿಯುತ್ತಿರುವ ಮಹಿಳಾ ನೌಕರರು ಒಂದೇ ಆಟೋದಲ್ಲಿ ಐದಾರು ಮಂದಿ ಪ್ರಯಾಣಿಸುತ್ತಿರುವುದು ನಿಂತಿಲ್ಲ. ಈ ಬಗ್ಗೆ ಮಹಿಳಾ ನೌಕರರಿಗೆ ಅರಿವು ಮೂಡಿಸಲು ಗಾರ್ಮೆಂಟ್ಸ್ ಮಾಲೀಕರೊಂದಿಗೆ ಸಭೆ ನಡೆಸಿ ಎಂದು ತಾಕೀತು ಮಾಡಿದರು.
ಸಾಲ ಅರ್ಜಿಗೆ ನಿರ್ದೇಶಕರ ಸಹಿ ಬೇಕಿಲ್ಲ :
ಬ್ಯಾಂಕಿನಲ್ಲಿ ರೈತರಿಗೆ ಸಾಲ ನೀಡುವಾಗ ಸಾಲದ ಅರ್ಜಿಯ ಮೇಲೆ ನಿರ್ದೇಶಕರ ಸಹಿಯನ್ನು ಪಡೆಯಲೇಬೇಕೆಂಬ ನಿಯಮವನ್ನು ಕೈಬಿಡಲು ಪಿಕಾರ್ಡ್ ಬ್ಯಾಂಕ್‍ಗಳಿಗೆ ಸೂಚನೆ ನೀಡಬೇಕು ಎಂದು ಕಾಸ್ಕರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಿಗೆ ಸಚಿವರು ನಿರ್ದೇಶನ ನೀಡಿದರು. ಕೃಷಿ ಬೆಳೆ ಸಾಲಗಳಿಗೆ ಡಿಸಿಸಿ ಬ್ಯಾಂಕ್‍ನವರು ಕಡ್ಡಾಯ ವಿಮೆ ಮಾಡಬೇಕೆಂದು ಸೂಚಿಸಿ ಸಾಲ ಯೋಜನೆಯಲ್ಲಿ ಪ್ರಗತಿ ಕುಂಠಿತಕ್ಕೂ ಕೆಎಸ್‍ಎಫ್‍ಸಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕ್ರಮಕ್ಕೆ ಸೂಚಿಸಿದರು.
ಅಭಿಯಾನಕ್ಕೆ ಚಾಲನೆ:
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಶಾಲೆ, ಅಂಗನವಾಡಿ, ಆಶ್ರಯ ಮತ್ತು ವಸತಿ ಶಾಲೆಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸುವ ವಿಶೇಷ ಆಂದೋಲನಕ್ಕೆ ಸಚಿವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಅಲ್ಲದೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಹೊರತಂದಿರುವ ಚೈಲ್ಡ್ ಪೋರ್ನೋಗ್ರಾಫಿ ಕುರಿತು ಅರಿವು ಕರಮಪತ್ರವನ್ನು ಬಿಡುಗಡೆ ಮಾಡಿದರು.
ಸಭೆಗೆ ನೂತನ ಶಾಸಕರಾದ ಡಾ.ರಾಜೇಶ್‍ಗೌಡ, ಚಿದಾನಂದಗೌಡ ಎಂ ಅವರನ್ನು ಸ್ವಾಗತಿಸಲಾಯಿತು. ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ ಕೆ. ರಾಕೇಶ್ ಕುಮಾರ್, ಎಸ್ಪಿ ಡಾ|. ಕೋನ ವಂಶಿಕೃಷ್ಣ, ಸ್ಥಾಯಿಸಮಿತಿ ಅಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಚಿರತೆ ಹಾವಳಿ, ಅರಣ್ಯ ಇಲಾಖೆಯವರು ಕ್ರಮವಹಿಸಲು ತಾಕೀತು
‘ಜಿಲ್ಲೆಯಲ್ಲಿ ಚಿರತೆಗಳು ಜನ-ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳ ಬಗ್ಗೆ ಕುಣಿಗಲ್ ಶಾಸಕ ರಂಗನಾಥ್ ಹಾಗೂ ತುರುವೇಕೆರೆ ಶಾಸಕ ಜಯರಾಮ್ ಅವರು ಸಭೆಯಲ್ಲಿ ಸಚಿವರ ಗಮನ ಸೆಳೆದರು. ಪ್ರತಿಕ್ರಿಯಿಸಿದ ಸಚಿವರು ಚಿರತೆ ಹಾವಳಿ ಇರುವ ಪ್ರದೇಶಗಳಲ್ಲಿ ಬೆಳೆದಿರುವ ಪೊದೆ(ಜಂಗಲ್)ಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆ ರೂಪಿಸಬೇಕು. ಅಲ್ಲದೆ ಹಿಡುವಳಿ ಜಮೀನಿನಲ್ಲಿರುವ ಪೊದೆಗಳನ್ನು ಜಮೀನಿನ ಮಾಲೀಕರು ತೆರವುಗೊಳಿಸಬೇಕು. ಒಂದು ವೇಳೆ ತೆರವುಗೊಳಿಸದಿದ್ದಲ್ಲಿ ಪಂಚಾಯಿತಿಯವರೇತೆರವುಗೊಳಿಸಿ ಕಂದಾಯದಲ್ಲಿ ಕಟ್ಟಿಸಿಕೊಳ್ಳಿ ಎಂದು ಹೇಳಿ, ಆಕ್ರಮಣಕಾರಿ ಪ್ರಾಣಿಗಳನ್ನು ಗುರುತಿಸಿ ಅವಕ್ಕೆ ಗುಂಡಿಕ್ಕಿವ ಅಧಿಕಾರ ಡಿಎಫ್‍ಒಗಳಿಗಿದ್ದು, ವಿವೇಚನೆಯಿಂದ ಬಳಸುತ್ತಿಲ್ಲ. ಮನುಷ್ಯರ ಪ್ರಾಣದ ವಿಷಯವನ್ನು ಹಗುರುವಾಗಿ ತೆಗೆದುಕೊಳ್ಳಬೇಡಿ ಎಂದರು.
ಒಂದಿಬ್ಬರ ಮೇಲೆ ಕ್ರಮ ಜರುಗಿಸಿ, ಇಲ್ಲವಾದರೇ ಸರಿಹೋಗಲ್ಲ ಸಚಿವರೇ : ಸಂಸದ
ತಾಂಡಾ, ಕಾಲೋನಿ, ಗೊಲ್ಲರಹಟ್ಟಿಗಳಲ್ಲಿ ಮೂಲಸೌಕರ್ಯಗಳ ಇಲ್ಲದಿರುವ ಕುರಿತು ಪ್ರಸ್ತಾಪಿಸಿದ ಸಂಸದ ನಾರಾಯಣಸ್ವಾಮಿ ಅವರು ನಾದೂರು, ಮದಲೂರಲ್ಲಿ ಗುಡಿಸಲಲ್ಲಿ ಸೀರೆಕಟ್ಟಿಕೊಂಡು ಜನ ವಾಸಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದಾನೆ. ಕಾಲೋನಿಗಳಿಗೆ ಸೂಕ್ತರಸ್ತೆ ಚರಂಡಿಯಿಲ್ಲ. ಇನ್ನೂ ಎಷ್ಟು ವರ್ಷ ಈ ರೀತಿ ಜನ ಬದುಕಬೇಕು. ಒಂದಿಬ್ಬರು ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಿ. ಬರೀ ಎಚ್ಚರಿಕೆಯಿಂದ ಏನೂ ಸರಿಹೋಗಲ್ಲ. ಮುಂದೆ ನನ್ನ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಶಿರಾ, ಪಾವಗಡಕ್ಕೆ ಪ್ರತ್ಯೇಕ ಕೆಡಿಪಿಸಭೆ ವ್ಯವಸ್ಥೆ ಮಾಡಿ ಎಂದು ಗರಂ ಆದರು.
ತುಮಕೂರು ಜಿಲ್ಲಾ ಪಂಚಾಯತ್ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ನಾರಾಯಣಸ್ವಾಮಿ ಹಾಗೂ ಶಾಸಕರುಗಳು ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಶಾಲೆ, ಅಂಗನವಾಡಿ, ಆಶ್ರಯ ಮತ್ತು ವಸತಿ ಶಾಲೆಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸುವ ವಿಶೇಷ ಆಂದೋಲನದ ಕರಪತ್ರ ಬಿಡುಗಡೆಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ