ತುಮಕೂರು :
ಶತಾಯುಷಿ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಇಂದು ಸಂಜೆ 4 ಗಂಟೆ 30 ನಿಮಿಷಕ್ಕೆ ಕ್ರಿಯಾ ಸಮಾಧಿ ನಡೆಯಲಿದೆ.
ಗುರುವಿನಂತೆ ಶಿಷ್ಯನ ಅಂತಿಮ ವಿಧಿ ವಿಧಾನ :
ಶಿವಕುಮಾರ ಸ್ವಾಮೀಜಿಗಳ ಗುರು ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳಿಗೆ ಯಾವ ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತದೋ ಅದೇ ರೀತಿಯಲ್ಲಿ ತಮ್ಮ ಕ್ರಿಯಾ ವಿಧಾನ ಮಾಡಬೇಕೆಂದು ಶ್ರೀಗಳು ಬರೆದಿಟ್ಟಿದ್ದು ಅದೇ ರೀತಿಯಲ್ಲಿ, ಅವರು ಇಚ್ಛೆಪಟ್ಟ ಜಾಗದಲ್ಲಿಯೇ ಅಂತಿಮ ವಿಧಿವಿಧಾನಗಳು ನಡೆಯಲಿವೆ.
ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ 12 ಅಡಿ ಆಳದ ಸಮಾಧಿ ಗುಂಡಿ ತೆಗೆಯಲಾಗಿದೆ. ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿರುವ ಭವನವನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗುತ್ತಿದೆ.
ಹೀಗಿರಲಿದೆ ಕ್ರಿಯಾ ಸಮಾಧಿ:
ಕ್ರಿಯಾ ಸಮಾಧಿಯಲ್ಲಿ ಶ್ರೀಗಳ ಪಾದದ ಅಳತೆಯ 11 ಹೆಜ್ಜೆಗಳಷ್ಟು ಆಳದ ಗುಂಡಿ ತೋಡಲಾಗುತ್ತದೆ. 5 ಮೆಟ್ಟಿಲುಗಳನ್ನು ಮಾಡಲಾಗುತ್ತದೆ. ಅದರ ವಿರುದ್ಧ ಭಾಗದಲ್ಲಿ 3.5 ಅಡಿ ಮತ್ತೆ ಗೂಡು ತೋಡಿ ಅದರ ಸುತ್ತಲೂ ವಿಭೂತಗಳನ್ನು ಜೋಡಿಸಲಾಗುತ್ತದೆ.

ಮೊದಲಿಗೆ ಪಾರ್ಥಿವ ಶರೀರಕ್ಕೆ ಅಂತಿಮಪುಣ್ಯ ಸ್ನಾನ ಮಾಡಿಸಲಾಗುತ್ತದೆ. ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಿ ಹೊಸ ಕಷಾಯ ವಸ್ತ್ರಗಳನ್ನು ಧಾರಣೆ ಮಾಡಿಸಲಾಗುತ್ತದೆ.
ನಂತರ ಆವರನ್ನು ಸಿದ್ದಾಸನ ರೂಪದಲ್ಲಿ ಕೂರಿಸಿ ಎರಡು ಕೈಗಳನ್ನು ಎದೆಯ ಸ್ವಲ್ಪ ಕೆಳ ಭಾಗದಲ್ಲಿ ಜೋಡಿಸಿ ಅಲ್ಲಿ ಅವರ ಇಷ್ಟ ಶಿವಲಿಂಗವನ್ನು ಇಟ್ಟು ಅದಕ್ಕೆ ಪಂಚಾಭಿಷೇಕ ಮಾಡಲಾಗುತ್ತದೆ. ಮತ್ತೆ ಪೂಜೆ ಮಾಡಿ ನಂತರ ದರ್ಶನ ಮಾಡಿಸಲಾಗುತ್ತದೆ
ಬಳಿಕ ಮಹಾ ಮಂಗಳಾರತಿ ಮಾಡಲಾಗುತ್ತದೆ. ಗದ್ದುಗೆಯ ಒಳಗೆ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಗುತ್ತದೆ.
ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಪಾರ್ಥಿವ ಶರೀರವನ್ನು ಮುಚ್ಚಲಾಗುತ್ತದೆ. ಪಾರ್ಥಿವ ಶರೀರದ ಶಿರೋಭಾಗವನ್ನು ಬಿಲ್ವಪತ್ರೆಯಿಂದ ತುಂಬಲಾಗುತ್ತದೆ. ಅದರ ಮೇಲೆ ಮೃತ್ತಿಕೆ ಅಂದರೆ ಮಣ್ಣು ಹಾಕಿ ಕೊನೆಗೆ ಚಪ್ಪಡಿ ಕಲ್ಲನ್ನಿಟ್ಟು ಅದರ ಮೇಲೆ ಗದ್ದುಗೆ ನಿರ್ಮಾಣ ಮಾಡಲಾಗುತ್ತದೆ.
ಗದ್ದುಗೆ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ಚಿತ್ರವನ್ನು ಕೆತ್ತಲಾಗಿದೆ. ಈ ಭವನ ಸಂಪೂರ್ಣ ಅಮೃತಶಿಲೆಯಿಂದ ನಿರ್ಮಾಣಗೊಂಡಿದೆ. ಗರ್ಭಗುಡಿ ಶಿಲಾ ಬಾಗಿಲ ಮೇಲೆ 26 ದೇವರನ್ನು ಕೆತ್ತಲಾಗಿದೆ. ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟ ದಿಕ್ಪಾಲಕರು, ಸಿದ್ದಗಂಗಾ ಮಠದ ದೇವರಾದ ಸಿದ್ದಲಿಂಗೇಶ್ವರ ಸ್ವಾಮೀಜಿ, ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಉದ್ದಾನ ಶಿವಯೋಗಿ, ಯಡಿಯೂರು ಸಿದ್ದಲಿಂಗೇಶ್ವರ, ಅಟವಿ ಶಿವಯೋಗಿ, ಬೇಡರ ಕಣ್ಣಪ್ಪ, ಅಕ್ಕಮಹಾದೇವಿ ಸೇರಿದಂತೆ 26 ಮೂರ್ತಿಗಳನ್ನು ಕೆತ್ತಲಾಗಿದೆ.
ಶ್ರೀಗಳು ಈ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ









