ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯವು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಸಮನ್ಸ್ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಸಮನ್ಸ್ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠ, ಈ ಹಿಂದೆ ಪ್ರಕರಣದ ಮತ್ತೊರ್ವ ಆರೋಪಿ ಆಪ್ ಸಂಸದ ಸಂಜಯ್ ಸಿಂಗ್ ಅರ್ಜಿಯನ್ನು ಏಪ್ರಿಲ್ 8, 2024ರಂದು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದನ್ನು ಗಮನಿಸಿದೆ. ಇದನ್ನು ಪ್ರಸ್ತಾಪಿಸಿದ ಕೋರ್ಟ್, ಕೇಜ್ರಿವಾಲ್ ಅರ್ಜಿಯನ್ನು ತಿರಸ್ಕರಿಸಿದೆ.
ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅರ್ಜಿದಾರರ ಪ್ರಕರಣವು ಸಂಜಯ್ ಸಿಂಗ್ ಅವರ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂದು ವಾದಿಸಿದರು. ಕೇಜ್ರಿವಾಲ್ ಅವರ ಹೇಳಿಕೆ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಹೊಂದಿರಲಿಲ್ಲ. ಪ್ರಧಾನಿ ಮೋದಿಯವರ ಶೈಕ್ಷಣಿಕ ಪದವಿಯನ್ನು ಮುಚ್ಚಿಡಲು ಕಾರಣ ಏನೆಂಬುದಷ್ಟೇ ಅವರ ಪ್ರಶ್ನೆಯಾಗಿತ್ತು ಎಂದು ಸಿಂಘ್ವಿ ಕೋರ್ಟ್‌ಗೆ ತಿಳಿಸಿದರು.
ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪಿಯೂಷ್ ಪಟೇಲ್ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಿ ಮೋದಿಯ ಪದವಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಪದವಿ ನೀಡಲು ಕೇಂದ್ರ ಮಾಹಿತಿ ಆಯೋಗವು ಹೊರಡಿಸಿದ ಸಂಬಂಧಿತ ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದೆ ಎಂದು ತಿಳಿಸಿದರು.
‘ಗುಜರಾತ್ ವಿಶ್ವವಿದ್ಯಾಲಯ ಮೋದಿಗೆ ನಿಜವಾಗಿಯೂ ಪದವಿ ನೀಡಿದ್ದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಅದನ್ನು ಯಾಕೆ ನೀಡುತ್ತಿಲ್ಲ? ಯಾಕೆಂದರೆ ಅದು ನಕಲಿ. ದೆಹಲಿ ಮತ್ತು ಗುಜರಾತ್ ವಿಶ್ವವಿದ್ಯಾಲಯಗಳಲ್ಲಿ ಪ್ರಧಾನಿ ವ್ಯಾಸಂಗ ಮಾಡಿದ್ದಲ್ಲಿ, ನಮ್ಮ ಹಳೆಯ ವಿದ್ಯಾರ್ಥಿಯೊಬ್ಬ ದೇಶದ ಪ್ರಧಾನಿಯಾಗಿದ್ದಾರೆ ಎಂದು ವಿಶ್ವವಿದ್ಯಾಲಯಗಳು ಹೇಳಿಕೊಂಡು ಸಂಭ್ರಮಿಸುತ್ತಿದ್ದವು…’ ಎಂದು ವ್ಯಂಗ್ಯಭರಿತವಾಗಿ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿ ಹಾಗೂ ತಮ್ಮ ಟ್ವಿಟರ್ ಖಾತೆಯಲ್ಲಿ ಇಂತಹ ಹಲವು ಹೇಳಿಕೆ ಉಲ್ಲೇಖಿಸಿದ್ದರು.
ಇವರಿಬ್ಬರ ಹೇಳಿಕೆಗಳು ಗುಜರಾತ್ ವಿಶ್ವವಿದ್ಯಾಲಯದ ಹೆಸರು ಕೆಡಿಸುವ ಉದ್ದೇಶ ಹೊಂದಿವೆ. ಇದರೊಟ್ಟಿಗೆ ಮಾನನಷ್ಟಕ್ಕೂ ಕಾರಣವಾಗಿವೆ ಎಂದು ವಿ.ವಿ.ಯ ಕುಲಸಚಿವ ಪಿಯೂಷ್ ಪಟೇಲ್ ದೂರು ನೀಡಿದ್ದರು. ಇದೇ ವಿಚಾರ ಇದೀಗ ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ.