ಜಿ ಜನಾರ್ದನ ರೆಡ್ಡಿ ಅವರ ಮಗಳು ಮತ್ತು ಅವರ ನವಜಾತ ಮಗುವನ್ನು ಭೇಟಿ ಮಾಡುವ ಹಿನ್ನೆಲೆಯಲ್ಲಿ ಈ ಹಿಂದೆ ಜಾಮೀನು ಷರತ್ತಿನಲ್ಲಿ ಕೊಂಚ ಸಡಿಲಿಕೆಗೆ ಅವಕಾಶ ನೀಡಲಾಗಿತ್ತು.ಈ ಹಿಂದೆ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಕೋಟ್ಯಾಂತರ ರೂಪಾಯಿಯ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ದಿನನಿತ್ಯದ ಆಧಾರದ ಮೇಲೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು ಮತ್ತು ಗಾಲಿ ಜನಾರ್ದನ ರೆಡ್ಡಿ ಅವರಿಗೆ 2022ರ ನವೆಂಬರ್ 6 ರವರೆಗೆ ಬಳ್ಳಾರಿಯಲ್ಲಿ ಇರಲು ಅವಕಾಶ ನೀಡಿತ್ತು. ಆದರೆ, ನವೆಂಬರ್ 7ರಿಂದ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಅವರು ಬಳ್ಳಾರಿಯಲ್ಲಿ ಉಳಿಯುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.
ಅಲ್ಲದೆ, 2022ರ ನವೆಂಬರ್ 9ರಿಂದ ದೈನಂದಿನ ಆಧಾರದ ಮೇಲೆ ವಿಚಾರಣೆಯನ್ನು ನಡೆಸುವಂತೆ ಮತ್ತು 2022ರ ನವೆಂಬರ್ 9ರಿಂದ ಆರು ತಿಂಗಳ ಅವಧಿಯಲ್ಲಿ ತಪ್ಪದೆ ವಿಚಾರಣೆಯನ್ನು ಮುಕ್ತಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.ಈ ಹಿಂದೆ ತನ್ನ 2015, ಜನವರಿ 20ರ ಜಾಮೀನು ಆದೇಶವನ್ನು ಮಾರ್ಪಡಿಸಿದ್ದ ನ್ಯಾಯಾಲಯ, ಕರ್ನಾಟಕದ ಮಾಜಿ ಸಚಿವ, ಗಣಿ ಉದ್ಯಮಿ ಮತ್ತು ಕೋಟ್ಯಾಂತರ ರೂಪಾಯಿಯ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರಂಗಳಿಗೆ ಭೇಟಿ ನೀಡಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಿತ್ತು.