ನವದೆಹಲಿ:
ಭಾರತ ಮತ್ತು ಫ್ರಾನ್ಸ್ ನಡುವೆ ಸಹಿ ಹಾಕಲಾಗಿರುವ ರಫೇಲ್ ಒಪ್ಪಂದ ವಿರೋಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 10ರಂದು (ಬುಧವಾರ) ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ರಫೇಲ್ ಒಪ್ಪಂದ ನಡೆಸುವಾಗ ಮತ್ತು ಎನ್‌ಡಿಎ ಸರ್ಕಾರ ಮಾಡಿಕೊಂಡ ಒಪ್ಪಂದದ ವೇಳೆ ಯುದ್ಧ ವಿಮಾನದ ದರಗಳು ಎಷ್ಟಿದ್ದವು ಎಂಬ ಹೋಲಿಕೆಯ ಬೆಲೆಯ ವಿವರವನ್ನು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ವಿನೀತ್ ದಂಡಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
59 ಸಾವಿರ ಕೋಟಿಯ ಈ ಖರೀದಿ ಒಪ್ಪಂದದಲ್ಲಿ ದೇಶೀ ಪಾಲುದಾರ ಕಂಪನಿಯಾಗಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಬದಲಿಗೆ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸುತ್ತಿದೆ.
ಒಪ್ಪಂದದ ಮಾಹಿತಿಯನ್ನು ಕೇಂದ್ರ ಬಹಿರಂಗಪಡಿಸಬೇಕು ಹಾಗೂ ಯುಪಿಎ ಹಾಗೂ ಎನ್‍ಡಿಎ ಸರಕಾರಗಳ ಅವಧಿಯಲ್ಲಿ ನಡೆಸಲಾದ ಎರಡು ವಿಭಿನ್ನ ಒಪ್ಪಂದಗಳ ಪ್ರಕಾರ ವಿಮಾನ ಖರೀದಿ ಮೊತ್ತದ ಕುರಿತ ಮಾಹಿತಿಯನ್ನು ಸೀಲ್ ಮಾಡಲ್ಪಟ್ಟ ಲಕೋಟೆಯಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕೆಂದು ಅಪೀಲುದಾರರು ಕೋರಿದ್ದಾರೆ.
ಈಗಿನ ಸರಕಾರ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಸಲುವಾಗಿ ಮಾಡಿದ ಒಪ್ಪಂದ ಭ್ರಷ್ಟಾಚಾರದ ಫಲವಾಗಿರುವುದರಿಂದ ಅದನ್ನು ರದ್ದು ಪಡಿಸಬೇಕು ಹಾಗೂ ಅದನ್ನು ಸಂವಿಧಾನದ ವಿಧಿ 253 ಅನ್ವಯ ಸಂಸತ್ತು ಅನುಮೋದಿಸಿಲ್ಲ ಎಂದು ಅವರ ಅಪೀಲು ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಪಿಐಎಲ್ ವಿಚಾರಣೆ ನಡೆಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ