ಬೆಂಗಳೂರು
ನಗರ ಪ್ರದೇಶಗಳ ಮಾದರಿಯಲ್ಲಿ ಹಳ್ಳಿಗಳಲ್ಲೂ ಒಣ ಕಸ ಸಂಗ್ರಹಿಸುವ ಪದ್ಧತಿ ಆರಂಭಿಸಲು ನಿರ್ಧರಿಸಿದ್ದು, ಆರಂಭಿಕವಾಗಿ ಈ ವರ್ಷ 500 ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಿಸುವ ವ್ಯವಸ್ಥೆ ಆರಂಭಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ನಗರದಲ್ಲಿಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಸಭೆ ನಡೆಸಿದ ಅವರು, ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಜಿಲ್ಲೆಯ ಕೆಲ ಗ್ರಾಮ ಪಂಚಾಯತ್ ಗಳಲ್ಲಿ ಒಣ ಕಸ ಸಂಗ್ರಹಿಸುವ ಪದ್ಧತಿ ಇದೆ. ಇದನ್ನು ಬರುವ ಮಾರ್ಚ್ ಅಂತ್ಯದ ವೇಳೆಗೆ ಇತರೆ ನಗರ ಪ್ರದೇಶಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದರು.
ಅಭಾವ ಪರಿಸ್ಥಿತಿ ಇರುವ 100 ತಾಲೂಕುಗಳಿಗೆ ತಕ್ಷಣ ಪರಿಹಾರ ಕೈಗೊಳ್ಳಲು ತಲಾ 50 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ವಾರ್ಷಿಕ ಕುಡಿಯುವ ನೀರಿನ ಯೋಜನೆಗಾಗಿ ಜಿಲ್ಲಾ ಪಂಚಾಯ್ತಿಗಳಿಗೆ ಒಟ್ಟು 1700 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಒಟ್ಟು 27 ಸಾವಿರ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸರ್ಕಾರದ ಒಪ್ಪಿಗೆ ದೊರೆತಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ 10 ಕೋಟಿಗಿಂತ ಅಧಿಕ ಮಾನವ ದಿನಗಳನ್ನು ಸೃಜಿಸಲು ಗುರಿ ಹಾಕಿಕೊಳ್ಳಲಾಗಿದೆ. ಕಳೆದ 2 ತಿಂಗಳಲ್ಲಿ 2 ಕೋಟಿ ಮಾನವ ದಿನಗಳ ಸೃಜನೆ ಆಗಿದೆ. ನರೇಗಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 943 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು ಈ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಪ್ರಧಾನಿ ಅವರಿಗೆ ಈ ವಾರದಲ್ಲಿ ಪತ್ರ ಬರೆಯಲಿದ್ದಾರೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಇರುವ ಕಾಮಗಾರಿಗಳ ಬಿಲ್ಗಳನ್ನು ಪಾವತಿಸುವಂತೆ ಸೂಚನೆ ನೀಡಿದ ಅವರು, ಬಿಲ್ ಬಾಕಿ ಉಳಿಸಿಕೊಂಡು ಸರ್ಕಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಬೇಡ ಎಂದು ಹೇಳಿದರು.ಬೃಹತ್ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಆದಷ್ಟು ಶೀಘ್ರ ಮಂಜೂರು ಮಾಡುವಂತೆಯೂ ಅವರು ಸೂಚಿಸಿದರು.
ರಾಜ್ಯದಲ್ಲಿ ನೂರುಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಇದೆ. ಸಮರ್ಪಕ ಕುಡಿಯುವ ನೀರು ಒದಗಿಸುವುದು ಗ್ರಾಮೀಣಾಭಿವೃದ್ಧಿಯ ಇಲಾಖೆಯ ಜವಾಬ್ದಾರಿ. ಮುಂದಿನ ದಿನಗಳು ಸವಾಲಿನ ದಿನಗಳು. ಹಾಗಾಗಿ ಈಗಿನಿಂದಲೇ ಸವಾಲನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಿ. ಎಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಸಚಿವ ಕೃಷ್ಣಭೇರೈಗೌಡ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.