ಬೆಂಗಳೂರು
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ, ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೇ 9.45 ಕೋಟಿ ರೂ. ವೆಚ್ಚವಾಗಲಿದೆ ಎಂದು ವರದಿಯಾಗಿದೆ. ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ 18 ಕಿಮೀ ಸುರಂಗ ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 9.45 ಕೋಟಿ ರೂ. ವ್ಯಯಿಸಲಿದೆ. ಗಮನಾರ್ಹ ಅಂಶವೆಂದರೆ ಸರ್ಜಾಪುರ-ಹೆಬ್ಬಾಳ ನಡುವಣ 37 ಕಿಮೀ ಮಾರ್ಗದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ನಮ್ಮ ಮೆಟ್ರೋ ಕೇವಲ 1.58 ಕೋಟಿ ರೂ. ವ್ಯಯಿಸಿದೆ.
ಕಳೆದ ತಿಂಗಳು, ಸುರಂಗ ಮಾರ್ಗ ರಸ್ತೆ ಯೋಜನೆಗೆ ಡಿಪಿಆರ್ ತಯಾರಿಸಲು ಬಿಬಿಎಂಪಿ ರೋಡಿಕ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ನೇಮಿಸಿಕೊಂಡಿತ್ತು. ಟೆಂಡರ್‌ನಲ್ಲಿ ಇಬ್ಬರು ಬಿಡ್‌ದಾರರು ಮಾತ್ರ ಭಾಗವಹಿಸಿದ್ದರು. ಬಿಬಿಎಂಪಿ ಈಗಾಗಲೇ ಇದೇ ಯೋಜನೆಗೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಅಲ್ಟಿನಾಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಇಂಕ್ ಅನ್ನು ತೊಡಗಿಸಿಕೊಂಡಿರುವುದರಿಂದ, ಎರಡನೇ ಬಿಡ್ ಅನ್ನು ತಿರಸ್ಕರಿಸಿತ್ತು. ರೋಡಿಕ್ ಕನ್ಸಲ್ಟೆಂಟ್ಸ್ ಲಿಮಿಟೆಡ್ ಏಕೈಕ ಬಿಡ್ಡರ್ ಆಗಿ ಹೊರಹೊಮ್ಮಿತ್ತು. ಬಿಬಿಎಂಪಿ ಮೊದಲಿಗೆ ಡಿಪಿಆರ್ ವೆಚ್ಚವನ್ನು 15 ಕೋಟಿ ರೂ. ಎಂದು ಅಂದಾಜಿಸಿತ್ತು. ಹೀಗಾಗಿ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ವರದಿ ಸಿದ್ಧಪಡಿಸಿಕೊಡುವ ಕಂಪನಿಯ ಆಯ್ಕೆಗೆ ಮುಂದಾಯಿತು. ಇದು ಸುರಂಗ ಮಾರ್ಗದ ಒಟ್ಟು ಅಂದಾಜು ಯೋಜನಾ ವೆಚ್ಚದ ಶೇ 0.1 ರಷ್ಟಾಗಿರಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೂಲಸೌಕರ್ಯ ಯೋಜನೆ ತಯಾರಿಸುವುದಕ್ಕಾಗಿ ಈ ವರ್ಷದ ಆರಂಭದಲ್ಲಿ ಬಿಬಿಎಂಪಿ 4.7 ಕೋಟಿ ರೂ. ವ್ಯಯಿಸಿತ್ತು. ಖಾಸಗಿ ಕಂಪನಿ ಅಲ್ಟಿನಾಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಲಿಮಿಟೆಡ್ ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸಲು ಸುರಂಗ ರಸ್ತೆಗಳನ್ನು ನಿರ್ಮಿಸಲು ಸಲಹೆ ನೀಡಿತ್ತು.
ನಮ್ಮ ಮೆಟ್ರೊದ ಡಿಪಿಆರ್ ವೆಚ್ಚವು ಬಿಬಿಎಂಪಿಯ ಅಂದಾಜಿಗಿಂತ ತುಂಬಾ ಕಡಿಮೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಅಗರ, ಕೋರಮಂಗಲ ಮತ್ತು ಡೈರಿ ಸರ್ಕಲ್ ಮೂಲಕ ಹಾದು ಹೋಗುವ 37 ಕಿಮೀ ಸರ್ಜಾಪುರ-ಹೆಬ್ಬಾಳ ಮಾರ್ಗದ ಡಿಪಿಆರ್ ಸಿದ್ಧಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕೇವಲ 1.56 ಕೋಟಿ ರೂ. ವ್ಯಯಿಸಿತ್ತು. ಅದೇ ರೀತಿ ನಮ್ಮ ಮೆಟ್ರೋ ತುಮಕೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಕಾರ್ಯಸಾಧ್ಯತೆಯ ಅಧ್ಯಯನಕ್ಕೆ 1.2 ಕೋಟಿ ರೂ. ವ್ಯಯಿಸಿದೆ. ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ (ರಸ್ತೆ-ಕಮ್-ರೈಲು) ಕಾರಿಡಾರ್‌ಗೆ ಇದೇ ರೀತಿಯ ಕಾರ್ಯಸಾಧ್ಯತೆಯ ಅಧ್ಯಯನಕ್ಕೆ 78 ಲಕ್ಷ ರೂ. ಖರ್ಚು ಮಾಡಲಾಗಿತ್ತು.
ಈ ಮಧ್ಯೆ, ಡಿಪಿಆರ್ಗೆ ದುಬಾರಿ ವೆಚ್ಚ ಮಾಡುತ್ತಿರುವುದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮರ್ಥಿಸಿಕೊಂಡಿದ್ದಾರೆ. ಸುರಂಗ ರಸ್ತೆ ನಿರ್ಮಾಣ ಸಂಕೀರ್ಣವಾದ ಕೆಲಸ ಮಾತ್ರವಲ್ಲದೆ, ಬೆಂಗಳೂರಿನಲ್ಲಿಯೇ ಇಂತಹ ಮೊದಲ ಯೋಜನೆಯಾಗಿದೆ. ಟೆಂಡರ್‌ನಲ್ಲಿ ಹೆಚ್ಚಿನ ಕಂಪನಿಗಳು ಭಾಗವಹಿಸಲಿಲ್ಲ. ಎರಡನೇ ಪ್ರಯತ್ನದಲ್ಲಿ ನಾವು ಕಡಿಮೆ ಮೊತ್ತದಲ್ಲಿ ವರದಿ ಸಿದ್ಧಮಾಡಿಕೊಡುವ ಬಿಡ್‌ದಾರನ್ನೇ ಆಯ್ಕೆ ಮಾಡಿದ್ದೇವೆ. ಬಿಡ್‌ದಾರರು ಉಲ್ಲೇಖಿಸಿರುವುದು ನಮ್ಮ ಅಂದಾಜಿಗಿಂತ ಕಡಿಮೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.