ಕತ್ತಲೆಯಾಗಲಿದೆ ಭೂಮಿ: 2027ರಲ್ಲಿ ನಡೆಯಲಿದೆ ಸುದೀರ್ಘ ಸೂರ್ಯ ಗ್ರಹಣ

ನವದೆಹಲಿ: 

    ಹಲವಾರು ತಲೆಮಾರುಗಳವರೆಗೆ ನೆನಪಿನಲ್ಲಿ ಇಡಬಹುದಾದ ಸೂರ್ಯಗ್ರಹಣ  2027ರ ಆಗಸ್ಟ್ 2ರಂದು ನಡೆಯಲಿದೆ. ಇದು 21ನೇ ಶತಮಾನದ ಅತ್ಯಂತ ದೀರ್ಘ ಸೂರ್ಯಗ್ರಹಣ  ವಾಗಲಿದೆ. ಸುಮಾರು 6 ನಿಮಿಷಗಳ ಕಾಲ ನಡೆಯುವ ಈ ಅಪರೂಪದ ವಿದ್ಯಮಾನದಲ್ಲಿ ಹಗಲಿನಲ್ಲೇ ನಕ್ಷತ್ರಗಳು ಗೋಚರಿಸಲಿದೆ, ಭೂಮಿಯ ತಾಪಮಾನ ಕಡಿಮೆಯಾಗಲಿದೆ, ಆರು ನಿಮಿಷಗಳ ಕಾಲ ಭೂಮಿಯ ಕೆಲವು ಭಾಗಗಳಲ್ಲಿ ಸಂಪೂರ್ಣ ಕತ್ತಲು ಆವರಿಸಲಿದೆ. ಕಳೆದ ಶತಮಾನದಲ್ಲಿ ಇಂತಹ ಸೂರ್ಯಗ್ರಹಣ ಕಂಡು ಬಂದಿಲ್ಲ ಎಂದು ವಿಜ್ಞಾನಿಗಳು  ತಿಳಿಸಿದ್ದಾರೆ.

   2027ರ ಆಗಸ್ಟ್ 2ರಂದು ಅಪರೂಪದ ವಿದ್ಯಮಾನಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಈ ಸಂದರ್ಭದಲ್ಲಿ ಅನೇಕ ಪ್ರದೇಶಗಳಲ್ಲಿ ಕತ್ತಲಿನಲ್ಲಿ ಮುಳುಗಲಿದೆ. ಆಕಾಶದಲ್ಲಿ ನಕ್ಷತ್ರಗಳು ಗೋಚರಿಸಲಿದೆ. ಇದು 21ನೇ ಶತಮಾನದ ಅತ್ಯಂತ ಉದ್ದದ ಸೂರ್ಯಗ್ರಹಣವಾಗಿರಲಿದ್ದು, 6 ನಿಮಿಷ 23 ಸೆಕೆಂಡುಗಳ ಕಾಲ ಈ ಘಟನೆ ನಡೆಯಲಿದೆ. 

   ಈ ಸೂರ್ಯಗ್ರಹಣದ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡುತ್ತಾನೆ. ಹಗಲಿನಲ್ಲೇ ಕತ್ತಲೆಯ ವಾತಾವರಣ ಸೃಷ್ಟಿಯಾಗಲಿದೆ. ಭೂಮಿಯ ತಾಪಮಾನ 5 ರಿಂದ 10 ಡಿಗ್ರಿಗಳಿಗೆ ಇಳಿಯಬಹುದು. ಪ್ರಕೃತಿಯ ವಾತಾವರಣದಲ್ಲಿ ವಿಚಿತ್ರ ಸನ್ನಿವೇಶಗಳು ಕಾಣಸಿಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

   ಈ ಸಂದರ್ಭದಲ್ಲಿ ಸೂರ್ಯಗ್ರಹಣದ ವೇಳೆ ಗೋಚರವಾಗುವ ಕರೋನ, ವಜ್ರದ ಉಂಗುರದೊಂದಿಗೆ ಶುಕ್ರ, ಬುಧ ಸೇರಿದಂತೆ ಹಲವು ನಕ್ಷತ್ರಗಳು, ಪ್ರಕಾಶಮಾನವಾದ ಆಕಾಶಕಾಯಗಳನ್ನು ಸಹ ನೋಡಬಹುದು ಎಂದಿದ್ದಾರೆ ವಿಜ್ಞಾನಿಗಳು. 

   ಈ ಸೂರ್ಯಗ್ರಹಣವು ಅಟ್ಲಾಂಟಿಕ್ ಮಹಾಸಾಗರದ ಬಳಿ ಪ್ರಾರಂಭವಾಗಲಿದೆ. ಜಿಬ್ರಾಲ್ಟರ್ ಜಲಸಂಧಿಯ ಬಳಿ ಚಂದ್ರನ ನೆರಳು ಸೂರ್ಯನ ಮೇಲೆ ಬೀಳಲಿದೆ. ಹೀಗಾಗಿ ದಕ್ಷಿಣ ಸ್ಪೇನ್, ಮೊರಾಕೊ, ಅಲ್ಜೀರಿಯಾ, ಟುನೀಶಿಯಾ, ಲಿಬಿಯಾ, ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಈ ಗ್ರಹಣ ಕಾಲವನ್ನು ನೋಡಬಹುದು. ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಸೇರಿದಂತೆ ದಕ್ಷಿಣ ಅಮೆರಿಕಾದ ದೊಡ್ಡ ಪ್ರದೇಶಗಳಲ್ಲಿ ಇದು ಗೋಚರವಾಗುವುದಿಲ್ಲ. ಈ ಸೂರ್ಯಗ್ರಹವು ಭಾರತದಲ್ಲಿ ಪೂರ್ಣವಾಗಿ ಕಾಣುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಭಾಗಶಃ ಗ್ರಹಣವನ್ನು ನೋಡಬಹುದು. 

   ಸಾಮಾನ್ಯವಾಗಿ ಸೂರ್ಯಗ್ರಹಣವು ಸರಿಸುಮಾರು ಪ್ರತಿ 18 ತಿಂಗಳಿಗೊಮ್ಮೆ ಸಂಭವಿಸುತ್ತದೆ. ಆದರೆ 2027ರ ಗ್ರಹಣ ಮಾತ್ರ ತುಂಬಾ ವಿಶೇಷವಾಗಿದೆ.ಇದು ಖಗೋಳಶಾಸ್ತ್ರ, ತಾಪಮಾನ ಏರಿಳಿತ ಮತ್ತು ಪ್ರಾಣಿಗಳ ನಡವಳಿಕೆಯನ್ನು ಅಧ್ಯಯನ ಮಾಡಲು ಸೂಕ್ತ ಘಟನೆಯಾಗಿದೆ. ಯಾಕೆಂದರೆ ಇಂತಹ ಘಟನೆ ಇನ್ನು ದಶಕಗಳ ಕಾಲ ಮತ್ತೆ ಉಂಟಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ ವಿಜ್ಞಾನಿಗಳು.

   ಗ್ರಹಣ ಕಾಲ ಆರಂಭವಾಗುವ ಸುಮಾರು 60- 80 ನಿಮಿಷಗಳ ಮೊದಲು ಚಂದ್ರನ ನೆರಳು ಸೂರ್ಯನನ್ನು ಸ್ಪರ್ಶಿಸಲು ಪ್ರಾರಂಭಿಸುತ್ತದೆ. ಇದರಿಂದ ಸೂರ್ಯನ ಬೆಳಕು ಕ್ರಮೇಣ ಕಡಿಮೆಯಾಗುತ್ತಾ ಹೋಗಿ ಅರ್ಧಚಂದ್ರಾಕಾರವು ಕಾಣಿಸಲಿದೆ. ಕ್ರಮೇಣ ಕತ್ತಲೆ ಹೆಚ್ಚಾಗುತ್ತದೆ. ಈ ಕತ್ತಲೆ 6 ನಿಮಿಷ 23 ಸೆಕೆಂಡುಗಳ ಕಾಲ ಇರಲಿದೆ. ಬಳಿಕ ಸೂರ್ಯನ ಬೆಳಕು ನಿಧಾನವಾಗಿ ಮರಳಲು ಪ್ರಾರಂಭವಾಗುತ್ತದೆ. 

    ಚಂದ್ರನು ಭೂಮಿಗೆ ಹತ್ತಿರವಾದಾಗ ಅದರ ನೆರಳು ಭೂಮಿಯನ್ನು ಪರಿಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಇದರಿಂದ ದೀರ್ಘ ಸೂರ್ಯಗ್ರಹಣ ಉಂಟಾಗುತ್ತದೆ. ಸಂಪೂರ್ಣ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಸುರಕ್ಷಿತವಲ್ಲ. ಇದಕ್ಕಾಗಿ ಸೌರ ಫಿಲ್ಟರ್‌ಗಳು, ಪ್ರಮಾಣೀಕೃತ ಗ್ರಹಣ ಕನ್ನಡಕಗಳನ್ನು ಬಳಸಬಹುದಾಗಿದೆ.

   ನಾಸಾ ನೀಡಿರುವ ಮಾಹಿತಿ ಪ್ರಕಾರ ಇನ್ನು ಈ ಘಟನೆಯು 22ನೇ ಶತಮಾನದವರೆಗೆ ನಡೆಯುವುದಿಲ್ಲ. ಹೀಗಾಗಿ 2027ರ ಸೂರ್ಯ ಗ್ರಹಣವನ್ನು ‘ಈ ಪೀಳಿಗೆಯ ಶ್ರೇಷ್ಠ ಖಗೋಳ ಪ್ರದರ್ಶನ’ ಎಂದು ಕರೆಯಲಾಗುತ್ತದೆ.

Recent Articles

spot_img

Related Stories

Share via
Copy link