ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ 2025: ಮತ ಎಣಿಕೆ ಪ್ರಕ್ರಿಯೆ ಆರಂಭ

ನವದೆಹಲಿ:

    ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಳ್ಳಲಿದೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಜಯ ಸಾಧಿಸುತ್ತದೆಯೇ? 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆಯೇ ಎಂಬುದರ ಕುರಿತು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

   ರಾಜಧಾನಿಯ ಎಲ್ಲಾ 70 ಸ್ಥಾನಗಳಿಗೂ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತಎಣಿಕೆ ಪ್ರಕ್ರಿಯೆ ಶುರುವಾಗಿರುವ ಹಿನ್ನೆಲೆಯಲ್ಲಿ ಎಲ್ಲರ ಎದೆಯಲ್ಲಿ ಢವಢವ ಶುರುವಾಗಿದೆ.ಸದ್ಯ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದ್ದು, 2013, 2015, 2020 ರಲ್ಲಿ ಎಎಪಿ ಸತತವಾಗಿ ಗೆಲುವು ಸಾಧಿಸಿದೆ. ಈ ಬಾರಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಎಎಪಿ ಇದ್ದರೆ, ಬಿಜೆಪಿ ಗೆಲ್ಲಬಹುದಾ ಎಂಬ ಕುತೂಹಲ ಕೂಡ ಹೆಚ್ಚಾಗಿದೆ.

   ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಬಹುತೇಕ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. ಆದರೆ, ಈ ಸಮೀಕ್ಷಾ ವರದಿಗಳನ್ನು ಆಪ್ ತಿರಸ್ಕರಿಸಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.

    ಈ ನಡುವೆ ಮತಎಣಿಕ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್​​ ವ್ಯವಸ್ತೆ ಕೈಗೊಳ್ಳಲಾಗಿದ್ದು, ನಾಲ್ಕು ಹಂತಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ. ದೆಹಲಿ ಪೊಲೀಸರು ಮತ ಎಣಿಕೆ ಕೇಂದ್ರವನ್ನು ಸಂಪೂರ್ಣವಾಗಿ ಸುತ್ತುವರಿದಿದ್ದಾರೆ.ಆಗ್ನೇಯ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಸಿಎಪಿಎಫ್‌ನ 6 ಪಡೆಗಳು ಮತ್ತು ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿ ಎಣಿಕೆ ಕೇಂದ್ರದಲ್ಲಿ ಮೂವರು ಎಸಿಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳೊಂದಿಗೆ ಡಿಸಿಪಿ ಅಧಿಕಾರಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

   ಈ ನಡುವೆ ಮತಎಣಿಕೆ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಹಾಕಲಾಗಿದ್ದು, ಅನಗತ್ಯವಾಗಿ ಒಳಗೆ ಬರುವುದು ಇಲ್ಲವೇ ಎಣಿಕೆ ಕೇಂದ್ರದ ಬಳಿ ಗುಂಪುಗೂಡುವುದನ್ನು ಆಯೋಗ ನಿಷೇಧ ಮಾಡಿದೆ.ಮತಗಳ ಎಣಿಕೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಆಯೋಗವು ಕೆಲವು ಶಾಲೆಗಳಿಗೆ ಮಾತ್ರ ರಜೆಯನ್ನು ಘೋಷಣೆ ಮಾಡಿದೆ. ಉಳಿದಂತೆ ಅನ್ಯ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ.ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಸರಳ ಬಹುಮತಕ್ಕೆ 36 ಸ್ಥಾನಗಳ ಅವಶ್ಯಕತೆಯಿದೆ. ಮತದಾರರ ನಾಡಿಮಿಡಿತ ಏನೆಂಬುದು ಇಂದು ಮಧ್ಯಾಹ್ನದ ವೇಳೆಗೆ ತಿಳಿದುಬರಲಿದೆ.

Recent Articles

spot_img

Related Stories

Share via
Copy link