ಗ್ಯಾರೆಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ…!

ಉಡುಪಿ:

    ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್‌ಎಂ ರೇವಣ್ಣ ಅವರು ಮಂಗಳವಾರ ಹೇಳಿದರು.

   ಮಂಗಳವಾರ ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

   4 ಲಕ್ಷ ಕೋಟಿ ರೂ. ಬಜೆಟ್ ಹೊಂದಿರುವ ಕರ್ನಾಟಕದಂತಹ ರಾಜ್ಯಕ್ಕೆ, ಐದು ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂ.ಗಳನ್ನು ಕಾಯ್ದಿರಿಸುವುದು ದೊಡ್ಡ ವಿಷಯವಲ್ಲ ಎಂದು ಹೇಳಿದರು. ಈ ಮೂಲಕ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ವದಂತಿಗಳನ್ನು ತಳ್ಳಿಹಾಕಿದರು.

   ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಎಲ್ಲಾ ವದಂತಿಗಳು ಸುಳ್ಳು. ಕರ್ನಾಟಕದ ಗ್ಯಾರಂಟಿ ಯೋಜನೆಯಿಂದ ಪ್ರೇರಿತರಾದ ಬಿಜೆಪಿಯವರು ಅವರ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ಯೋಜನೆಗಳನ್ನು ವಿರೋಧಿಸಿದಂತೆ ನಾವು ವಿರೋಧಿಸುವುದಿಲ್ಲ ಎಂದು ಹೇಳಿದರು.

    ಅನರ್ಹವಾದ ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಕೇಂದ್ರ ಸರಕಾರ ಸೂಚನೆ ಹೊರಡಿಸಿದ ಪರಿಣಾಮ ರಾಜ್ಯ ಸರಕಾರ ಅದನ್ನು ಅನುಷ್ಠಾನಕ್ಕೆ ತಂದಿದೆ. ಈ ಕಾರಣಕ್ಕೆ ಹೊಸ ರೇಷನ್‌ ಕಾರ್ಡ್‌ಗಳ ನೋಂದಣಿಯೂ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

    ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ 1.22 ಕೋಟಿ ಫಲಾನುಭವಿಗಳ ಖಾತೆಗೆ 35,180 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 2,24,348 ಫಲಾನುಭವಿಗಳ ಖಾತೆಗೆ 648.52 ಕೋಟಿ ರೂ. ಗಳನ್ನು ಡಿ.ಬಿಟ.ಇ ಮೂಲಕ ವರ್ಗವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ 1.63 ಕೋಟಿ ಫಲಾನುಭವಿಗಳಿಗೆ 12,589 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 3,39,305 ಫಲಾನುಭವಿಗಳಿಗೆ 342.16 ಕೋಟಿ ರೂ. ಗಳ ವಿದ್ಯುತ್ ವೆಚ್ಚವನ್ನು ಭರಿಸಲಾಗಿದೆ.

   ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 63.68 ಕೋಟಿ ಫಲಾನುಭವಿಗಳಿಗೆ ಖಾತೆಗೆ 10,452 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 1.21 ಕೋಟಿ ಫಲಾನುಭವಿಗಳಿಗೆ 202.49 ಕೋಟಿ ರೂ. ಅನ್ನು ಡಿ.ಬಿ.ಟಿ ಮೂಲಕ ವರ್ಗಾಯಿಸಲಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 397 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿ, 9,665 ಕೋಟಿ ರೂ. ಹಾಗೂ ಜಿಲ್ಲೆಯಲ್ಲಿ 2.16 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 80.45 ಕೋಟಿ ರೂ. ಭರಿಸಲಾಗಿದೆ.

    ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 2.51 ಲಕ್ಷ ಫಲಾನುಭವಿಗಳು ನೋಂದಾಯಿಸಿಕೊಂಡು 270.17 ಕೋಟಿ ರೂ.ಗಳನ್ನು ಅಭ್ಯರ್ಥಿಗಳ ಖಾತೆಗೆ ಪಾವತಿಸಲಾಗಿದೆ. ಜಿಲ್ಲೆಯಲ್ಲಿ 3,494 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಇದಕ್ಕಾಗಿ 3.75 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿವೆ, ಆದರೆ ಬಿಜೆಪಿ ಕೋಮುಗಳನ್ನು ಮಾತ್ರ ಪ್ರಚೋದಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಜನರು ಆರ್ಥಿಕ ತೊಂದರೆಗಳಿಂದ ಬಳಲುತ್ತಿದ್ದರು. ಆದರೆ, ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸಹಾಯ ಮಾಡಿತು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಿತು ಎಂದು ಹೇಳಿದರು.

    ಕೆಲವು ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿಲ್ಲ ಎಂಬ ದೂರುಗಳ ಕುರಿತು ಮಾತನಾಡಿ, ಚಿಂತಿಸಬೇಕಾಗಿಲ್ಲ. ನವೆಂಬರ್, 2024 ರಿಂದ ಜನವರಿ 2025 ರವರೆಗೆ ಬಾಕಿ ಇರುವ ಮೂರು ತಿಂಗಳ ಮೊತ್ತವನ್ನು ನಾಲ್ಕರಿಂದ ಐದು ದಿನಗಳಲ್ಲಿ ಜಮಾ ಮಾಡಲಾಗುತ್ತದೆ. ಈಗಾಗಲೇ ಈ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು

Recent Articles

spot_img

Related Stories

Share via
Copy link