ಬೆಂಗಳೂರು:
ಸರ್ಕಾರದ ವಿರುದ್ಧ ಶನಿವಾರದಿಂದ (ಆಗಸ್ಟ್ 3) ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆರಂಭಿಸಲು ಉದ್ದೇಶಿಸಿರುವ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಆರಂಭಿಕ ವಿಘ್ನ ಎದುರಾಗಿದೆ. ರಾಜ್ಯದೆಲ್ಲಡೆ ಅತಿವೃಷ್ಟಿಯ ಹಿನ್ನಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡುವಂತೆ ಬಿಜೆಪಿಗೆ ಜೆಡಿಎಸ್ ಮನವಿ ಮಾಡಿದೆ.
ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ಆಳ ಅಗಲವನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ ಬೆಂಗಳೂರು-ಮೈಸೂರು ಪಾದಯಾತ್ರೆ ನಡೆಸಲು ಬಿಜೆಪಿ ನಾಯಕರು ಮುಂದಾಗಿದ್ದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಎರಡೂ ಪಕ್ಷಗಳ ಮುಖಂಡರು ಸಭೆಗಳನ್ನು ನಡೆಸಿದ್ದರು. ಅದಾದ ಬಳಿಕ, ಆ.3ರಿಂದ ಪಾದಯಾತ್ರೆ ಆರಂಭಿಸುವುದಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದರು.ತೀರ್ಮಾನ ಕೈಗೊಂಡ ಎರಡೇ ದಿನದಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವ ಜೆಡಿಎಸ್, ಪಾದಯಾತ್ರೆಯನ್ನು ಮುಂದೂಡುವಂತೆ ಮಿತ್ರ ಪಕ್ಷ ಬಿಜೆಪಿಗೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪಕ್ಷದ ಮುಖಂಡರಾದ ಜಿ.ಟಿ.ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ, ರಾಜ್ಯದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅನಾಹುತಗಳು ಸಂಭವಿಸುತ್ತಿವೆ,, ಮಳೆ ಕಡಿಮೆಯಾದ ನಂತರ ಬಿಜೆಪಿ ಪಾದಯಾತ್ರೆ ಕೈಗೊಳ್ಳಬೇಕು ಎಂದು ಹೇಳಿದರು.
ಭಾರಿ ಮಳೆಯಾದರೆ ಪಕ್ಷದ ಕಾರ್ಯಕರ್ತರು ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರು ಎದುರಿಸಬೇಕಾದ ತೊಂದರೆ ಸೇರಿದಂತೆ ಎಲ್ಲಾ ಅಂಶಗಳನ್ನು ಕೋರ್ ಕಮಿಟಿ ಚರ್ಚಿಸಲಾಗಿದೆ ಎಂದು ಹೇಳಿದರು.ಮಳೆ ಕಡಿಮೆಯಾದ ನಂತರ ಬಿಡದಿಯಿಂದ ಪಾದಯಾತ್ರೆ ಆರಂಭಿಸಬಹುದು. ಪಕ್ಷದ ಸ್ಥಳೀಯ ಮುಖಂಡರ ಸಲಹೆಗಳನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಜಿಟಿ ದೇವೇಗೌಡ ಅವರು ಹೇಳಿದರು.
ಕುಮಾರಸ್ವಾಮಿ ಅವರು ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದು, ಅವರಿಲ್ಲದೆ ಪಾದಯಾತ್ರೆ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.