ನವದೆಹಲಿ:
ಪತಿ ತಮ್ಮ ಮನೆಯಲ್ಲಿ ಮಲಗಿ ನಿದ್ರಿಸುತ್ತಿದ್ದ ವೇಳೆ ಆತನ ಹೆಂಡತಿಯು ಅವನ ಮೇಲೆ ಕುದಿಯುವ ಎಣ್ಣೆ ಹಾಗೂ ಮೆಣಸಿನಪುಡಿಯನ್ನು ಸುರಿದಿರುವ ಆಘಾತಕಾರಿ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಪತಿ ದಿನೇಶ್‍ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು .
ಅಕ್ಟೋಬರ್ 3 ರಂದು ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 28 ವರ್ಷದ ದಿನೇಶ್, ಔಷಧ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ದಿನೇಶ್ ನಿದ್ದೆ ಮಾಡುತ್ತಿದ್ದಾಗ ಅವರ ಪತ್ನಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅವರ ದೇಹದ ಮೇಲೆ ಬಿಸಿ ಎಣ್ಣೆ ಸುರಿದಿದ್ದಾರೆ. ಈ ವೇಳೆ ದಂಪತಿಯ ಎಂಟು ವರ್ಷದ ಮಗಳು ಸಹ ಮನೆಯಲ್ಲಿದ್ದಳು.
ಅಕ್ಟೋಬರ್ 2 ರಂದು ಕೆಲಸ ಮುಗಿಸಿ ತಡರಾತ್ರಿ ಮನೆಗೆ ಹಿಂತಿರುಗಿ, ಊಟ ಮಾಡಿ ಮಲಗಿದ್ದಾಗಿ ದಿನೇಶ್ ಪೊಲೀಸರಿಗೆ ತಿಳಿಸಿದ್ದಾರೆ. ನನ್ನ ಹೆಂಡತಿ ಮತ್ತು ಮಗಳು ಹತ್ತಿರದಲ್ಲೇ ಮಲಗಿದ್ದರು. ಬೆಳಗಿನ ಜಾವ 3.15 ರ ಸುಮಾರಿಗೆ, ಇದ್ದಕ್ಕಿದ್ದಂತೆ ನನ್ನ ದೇಹದಾದ್ಯಂತ ತೀವ್ರವಾದ, ಸುಡುವ ನೋವು ಅನುಭವಿಸಿದೆ. ನನ್ನ ಹೆಂಡತಿ ನಿಂತುಕೊಂಡು ತನ್ನ ಮೇಲೆ ಕುದಿಯುವ ಎಣ್ಣೆಯನ್ನು ಸುರಿಯುವುದನ್ನು ನಾನು ಕಣ್ಣಾರೆ ನೋಡಿದೆ. ನಾನು ಎದ್ದೇಳಲು ಅಥವಾ ಸಹಾಯಕ್ಕಾಗಿ ಕರೆಯುವ ಮೊದಲು, ಅವಳು ನನ್ನ ಸುಟ್ಟಗಾಯಗಳ ಮೇಲೆ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿದಳು ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಪತಿಯು ಕಿರುಚುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಪತ್ನಿಯು, ನೀವು ಕೂಗಿದರೆ, ನಾನು ನಿಮ್ಮ ಮೇಲೆ ಹೆಚ್ಚು ಎಣ್ಣೆ ಸುರಿಯುತ್ತೇನೆ ಎಂದು ಪ್ರತಿಭಟಿಸಿದ್ದಾಳೆ. ಆದರೆ, ವಿಪರೀತ ನೋವಿಗೆ ದಿನೇಶ್ ಜೋರಾಗಿ ಕಿರುಚಿಕೊಂಡಿದ್ದಾರೆ. ಈ ಕಿರುಚಾಟವು ಅಕ್ಕಪಕ್ಕದ ಮನೆಯವರು ಹಾಗೂ ಮನೆಮಾಲೀಕರಿಗೆ ಕೇಳಿಸಿ, ಎಲ್ಲರೂ ಓಡೋಡಿ ಬಂದಿದ್ದಾರೆ.
ಮನೆ ಮಾಲೀಕರ ಮಗಳು ಅಂಜಲಿ ಹೇಳುವ ಪ್ರಕಾರ- ಏನಾಗುತ್ತಿದೆ ಎಂದು ನೋಡಲು ನನ್ನ ತಂದೆ ಮೇಲಕ್ಕೆ ಹೋದರು. ಬಾಗಿಲು ಲಾಕ್ ಆಗಿತ್ತು. ಅವರ ಪತ್ನಿ ಒಳಗಿನಿಂದ ಬಾಗಿಲಿಗೆ ಲಾಕ್ ಮಾಡಿದ್ದರು. ನಾವು ಅವರನ್ನು ಬಾಗಿಲು ತೆರೆಯಲು ಕೇಳಿದೆವು. ಕೊನೆಗೆ ಬಾಗಿಲು ತೆರೆದಾಗ, ಅವರು ನೋವಿನಿಂದ ನರಳುತ್ತಿರುವುದನ್ನು ಮತ್ತು ಅವರ ಪತ್ನಿ ಮನೆಯೊಳಗೆ ಅಡಗಿಕೊಂಡಿರುವುದನ್ನು ನಾವು ನೋಡಿದ್ದೇವೆ ಎಂದು ತಿಳಿಸಿದರು.
ತನ್ನ ತಂದೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಮಹಿಳೆ ತನ್ನ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾಳೆ ಎಂದು ಅಂಜಲಿ ಹೇಳಿದರು. ಆದರೆ ಅವಳು ಅವನೊಂದಿಗೆ ಹೊರಬಂದಾಗ, ಅವಳು ವಿರುದ್ಧ ದಿಕ್ಕಿನ ಕಡೆಗೆ ಹೋದಳು. ನಮಗೆ ಅನುಮಾನ ಬಂತು. ನನ್ನ ತಂದೆ ಅವಳನ್ನು ತಡೆದು, ಆಟೋ ವ್ಯವಸ್ಥೆ ಮಾಡಿ, ದಿನೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಅವರು ಹೇಳಿದರು.
ದಿನೇಶ್ ಅವರನ್ನು ಮೊದಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಎದೆ, ಮುಖ ಮತ್ತು ತೋಳುಗಳಲ್ಲಿ ಆಳವಾದ ಸುಟ್ಟಗಾಯಗಳನ್ನು ನೋಡಿ ವೈದ್ಯರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ತುಂಬಾ ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿರುವ ದಿನೇಶ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂದಹಾಗೆ ಈ ದಂಪತಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಇತ್ತೀಚೆಗೆ ಅವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿರಲಿಲ್ಲ ಎನ್ನಲಾಗಿದೆ. ದಿನೇಶ್ ಅವರ ಪತ್ನಿಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 118 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳನ್ನು ಬಳಸಿಕೊಂಡು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು ಅಥವಾ ಗಂಭೀರ ಗಾಯಗೊಳಿಸುವುದು), 124 (ಆಮ್ಲದಿಂದ ಸ್ವಯಂಪ್ರೇರಣೆಯಿಂದ ಗಂಭೀರ ಗಾಯಗೊಳಿಸುವುದು) ಮತ್ತು 326 (ಗಾಯ, ನೀರು ಸುರಿಯುವುದು, ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ದುಷ್ಕೃತ್ಯ ಇತ್ಯಾದಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.








