ಈ ಬಾರಿ ಜಿಎಸ್‍ಬಿ ಗೆದ್ದರೆ ಹೆಚ್ಚಿನ ಗೆಲುವಿನ ಹೆಚ್ಚುಗಾರಿಕೆ

0
66

ತುಮಕೂರುll.

      ತುಮಕೂರು ಲೋಕಸಭೆಗೆ ಕಳೆದ 67 ವರ್ಷಗಳಲ್ಲಿ 1952ರಿಂದ ಆರಂಭವಾಗಿ 16 ಚುನಾವಣೆಗಳು ನಡೆದಿವೆ. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳೇ ಅತಿ ಹೆಚ್ಚು ಅಂದರೆ 10 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ನಾಲ್ಕು ಸಲ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪ್ರಜಾ ಸೋಷಿಯಲಿಸ್ಟ್ ಹಾಗೂ ಜನತಾ ದಳ ಪಕ್ಷಗಳಿಗೆ ತಲಾ ಒಂದೊಂದು ಬಾರಿ ಅವಕಾಶ ಸಿಕ್ಕಿದೆ.

       ಈ ಬಾರಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಜಯಗಳಿಸಿದರೆ, ತುಮಕೂರು ಕ್ಷೇತ್ರದಿಂದ ಐದು ಬಾರಿ ಗೆದ್ದು ಅತಿ ಹೆಚ್ಚಿನ ಸಲ ಸಂಸತ್ತಿಗೆ ಆಯ್ಕೆಯಾದ ಹೆಚ್ಚುಗಾರಿಕೆಗೆ ಪಾತ್ರರಾಗುತ್ತಾರೆ. ಜಿ ಎಸ್ ಬಸವರಾಜು ಹಾಗೂ ಕೆ ಲಕ್ಕಪ್ಪ ಅವರು ತಲಾ ನಾಲ್ಕು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

        1984ರಲ್ಲಿ ಮೊದಲ ಪ್ರಯತ್ನದಲ್ಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಎಸ್‍ಬಿ ಗೆಲುವು ಪಡೆದಿದ್ದರು, ನಂತರ 1989ರ ಚುನಾವಣೆಯಲ್ಲಿ ಮರು ಆಯ್ಕೆಯಾದರು. 1991ರಲ್ಲಿ ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ವಿರುದ್ಧ ಪರಾಭವಗೊಂಡರು. ಅದಾದ ನಂತರ 1996, 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿ ಎಸ್ ಬಸವರಾಜು ಅವರಿಗೆ ಟಿಕೆಟ್ ನಿರಾಕರಿಸಿತ್ತು. 1999ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಇವರು, ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಅವರನ್ನು ಸೋಲಿಸಿ ಮೂರನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು.

         ನಂತರ 2004ರಲ್ಲಿ ಕಾಂಗ್ರೆಸ್‍ನಿಂದ ಸೋತು, 2009ರಲ್ಲಿ ಬಿಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಜಯ ಪಡೆದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಸ್ ಪಿ ಮುದ್ದಹನುಮೇಗೌÀಡರ ವಿರುದ್ಧ ಪರಾಭವಗೊಂಡು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಎದುರಾಳಿ ಅಭ್ಯರ್ಥಿ ಮಾಜಿ ಪ್ರಧಾನಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ದೇವೇಗೌಡರೊಂದಿಗೆ ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಒಂದು ಅವಧಿಯಲ್ಲಿ ಲೋಕಸಭಾ ಉಪಸಭಾಪತಿಯಾಗಿದ್ದು ಹೊರತುಪಡಿಸಿದರೆ, ತುಮಕೂರು ಕ್ಷೇತ್ರದ ಯಾವ ಸಂಸದರೂ ಈವರೆಗೆ ಕೇಂದ್ರ ಸರ್ಕಾರದ ಸಚಿವರಾಗಲಿಲ್ಲ. ಪ್ರಭಾವಿ ನಾಯಕರೆನಿಸಿಕೊಂಡಿದ್ದ ಕೆ ಲಕ್ಕಪ್ಪನವರಿಗೂ ಕೂಡಾ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ್ಯೂ ಸಚಿವರಾಗುವ ಅವಕಾಶ ದೊರೆಯಲಿಲ್ಲ. 1967ರ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮೊದಲ ಪ್ರಯತ್ನದಲ್ಲೇ ಕೆ ಲಕ್ಕಪ್ಪ ಅವರು ಸಂಸತ್ತಿಗೆ ಆಯ್ಕೆಯಾದರು. ನಂತರ ಕಾಂಗ್ರೆಸ್ ಪಕ್ಷದಿಂದ 1971, 1977ರಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ ಲಕ್ಕಪ್ಪನವರು, 1980ರ ಚುನಾವಣೆಯಲ್ಲೂ ಗೆಲುವು ಪಡೆದು ಸತತವಾಗಿ ನಾಲ್ಕು ಬಾರಿ ಚುನಾಯಿತರಾಗಿ ಸಂಸತ್ ಪ್ರವೇಶ ಮಾಡಿದರು. ಸೋಲೇ ಕಾಣದ ಇವರು, ತಾವು ಸ್ಪರ್ಧೆ ಮಾಡಿದ್ದ ಎಲ್ಲಾ ನಾಲ್ಕು ಚುನಾವಣೆಗಲ್ಲೂ ಯಶಸ್ವಿಯಾದದ್ದು ವಿಶೇಷ.

        1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿ ಆರ್ ಬಸಪ್ಪ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ, ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ವಿರುದ್ದ 68,840 ಮತಗಳ ಅಂತರದಿಂದ ಗೆದ್ದರು. 1957ರಲ್ಲಿ ಎಂ ವಿ ಕೃಷ್ಣಪ್ಪ ಪಿಎಸ್‍ಪಿಯ ಬಿ ಪಿ ಗಂಗಾಧರ್ ವಿರುದ್ಧ 64,388 ಮತಗಳ ಅಂತರದಿಂದ ಹಾಗೂ ನಂತರದ 1962ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಂ ವಿ ಕೃಷ್ಣಪ್ಪವರೇ ಪಿಎಸ್‍ಪಿಯ ಕೆ ಎನ್ ಶಂಕರಲಿಂಗಪ್ಪ ಎದುರು 48,893 ಮತಗಳ ಅಂತರ ಉಳಿಸಿ ಜಯಪಡೆದರು. ಇವರ ನಂತರ 1967ರಿಂದ 1980ರವರೆಗೆ ನಾಲ್ಕು ಚುನಾವಣೆಗಳಲ್ಲಿ ಕೆ ಲಕ್ಕಪ್ಪ ಗೆಲುವು ಪಡೆದರು.

        1984ರಲ್ಲಿ ಮೊದಲ ಸಂಸತ್ ಚುನಾವಣೆ ಎದುರಿಸಿದ ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಜನತಾ ಪಾರ್ಟಿಯ ವೈ ಕೆ ರಾಮಯ್ಯ ವಿರುದ್ಧ 30,410 ಮತಗಳಿಂದ ಗೆದ್ದರು. 1989ರಲ್ಲಿ ಜಿಎಸ್‍ಬಿ ಅವರು ಮತ್ತೊಮ್ಮೆ ಜನತಾ ಪಾರ್ಟಿಯ ವೈ ಕೆ ರಾಮಯ್ಯ ವಿರುದ್ಧವೇ 1,99,138 ಮತಗಳ ಬಾರಿ ಅಂತರದಿಂದ ಗೆದ್ದು ಎರಡನೇ ಸಲ ಸಂಸತ್ ಪ್ರವೇಶ ಮಾಡಿದರು.

       1977ರಲ್ಲಿ ಭಾರತೀಯ ಲೋಕ ದಳ ಪಕ್ಷ, ಹಾಗೂ 1980ರಲ್ಲಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಎಸ್ ಮಲ್ಲಿಕಾಜುನಯ್ಯ ಅವರು 1991ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಅವರನ್ನು 18,917 ಮತಗಳ ಅಂತರದಿಂದ ಸೋಲಿಸಿದರು. 1996ರ ಚುನಾವಣೆಯಲ್ಲಿ ಜನತಾ ದಳದ ಸಿ ಎನ್ ಭಾಸ್ಕರಪ್ಪ ಜಯಪಡೆದರು.

        ಇವರು ಬಿಜೆಪಿಯ ಮಲ್ಲಿಕಾರ್ಜುನಯ್ಯ ಅವರನ್ನು 15,712 ಮತಗಳಿಂದ ಪರಾಭವಗೊಳಿಸಿದರು. ನಂತರ 1998ರಲ್ಲಿ ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಅವರು ಕಾಂಗ್ರೆಸ್‍ನ ಆರ್ ನಾರಾಯಣ್ ಹಾಗೂ ಜನತಾದಳದ ಸಿ ಎನ್ ಭಾಸ್ಕರಪ್ಪ ಅವರ ವಿರುದ್ಧ 71,187 ಮತಗಳ ಅಂತರದಿಂದ ಗೆದ್ದರು.

       1999ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಬಿಜೆಪಿಯ ಮಲ್ಲಿಕಾರ್ಜುನಯ್ಯ ಅವರನ್ನು 63,937 ಮತಗಳಿಂದ ಸೋಲಿಸಿದರು. 2004ರಲ್ಲಿ ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಅವರು ಜೆಡಿಎಸ್‍ನ ಡಿ ಎಲ್ ಜಗದೀಶ್ ವಿರುದ್ಧ ಕೇವಲ 2,351 ಮತಗಳಿಂದ ಗೆದ್ದರು. ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದರು.

         2009ರಲ್ಲಿ ಜಿ ಎಸ್ ಬಸವರಾಜು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಜೆಡಿಎಸ್‍ನ ಎಸ್ ಪಿ ಮುದ್ದಹನುಮೇಗೌಡರ ಎದುರು 21,445 ಮತಗಳಿಂದ ಗೆದ್ದರು. ಈ ಚುನಾವಣೆಯಲ್ಲಿ ಕೋದಂಡರಾಮಯ್ಯ ಕಾಂಗ್ರೆಸ್‍ನಿಂದ ಕಣಕ್ಕಿಳಿದು ಮೂರನೇ ಸ್ಥಾನ ಪಡೆದರು. ಇದೇ ಚುನಾವಣೆಯಲ್ಲಿ ಗೌರಿಶಂಕರ ಸ್ವಾಮೀಜಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 28, 923 ಮತ ಪಡೆದಿದ್ದರು. 2014ರಲ್ಲಿ ಎಸ್ ಪಿ ಮುದ್ದಹನುಮೇಗೌಡರು ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿ, ಬಿಜೆಪಿಯ ಜಿ ಎಸ್ ಬಸವರಾಜು ಅವರನ್ನು 74,041 ಮತಗಳ ಅಂತರದಿಂದ ಸೊಲಿಸಿ ಮೊದಲ ಬಾರಿ ಸಂಸತ್ ಪ್ರವೇಶಿಸಿದರು.

       1996ರಲ್ಲಿ ಗೆದ್ದ ಸಿ ಎನ್ ಭಸ್ಕರಪ್ಪನವರು, 1998 ಹಾಗೂ 1999 ಚುನಾವಣೆಯಲ್ಲಿ ಸೋಲು ಕಂಡರು. 2009ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಸ್ ಪಿ ಮುದ್ದಹನುಮೇಗೌಡರು, ಆಗ ಪರಾಭವಗೊಂಡು 2014ರ ಮರು ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿದು ಗೆದ್ದರು.

       2019ರ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಎದುರಾಳಿಯಾಗಿದ್ದಾರೆ. ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲಕ್ಕೆ ಮೇ 23ರಂದು ಮತ ಎಣಿಕೆ ನಂತರ ತೆರೆಬೀಳುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here