ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ

ಬೆಂಗಳೂರು:


ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ : ಸಿಎಂ ಬೊಮ್ಮಾಯಿ
ಉಪ ಚುನಾವಣೆಯ ಫಲಿತಾಂಶಗಳು ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ. ಈ ಫಲಿತಾಂಶ ಮುಂದಿನ ಚುನಾವಣೆಗಳ ದಿಕ್ಸೂಚಿಯೂ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯ ಫಲಿತಾಂಶಗಳು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ವಿರೋಧ ಪಕ್ಷಗಳು ಹೇಳುವುದು ಸಹಜ. ಹಾಗಾದರೆ ಸಿಂದಗಿ ಫಲಿತಾಂಶ ಯಾವುದರ
ದಿಕ್ಸೂಚಿ? 31 ಸಾವಿರ ಭಾರಿ ಮತಗಳ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದನ್ನು ಕಾಂಗ್ರೆಸ್‍ನವರು ಮೊದಲು ನೋಡಿಕೊಳ್ಳಲಿ. ಹಾಗಾದರೆ ದಿಕ್ಸೂಚಿ ಸಿಂದಗಿಯಿಂದಲೇ ಆರಂಭವಾಗಬೇಕು ಎಂದರು.

ಉಪ ಚುನಾವಣೆಯ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ದೃಷ್ಟಿಕೋನ ತಮ್ಮದು ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ
ಚುನಾವಣೆಗಳನ್ನು ಗೆದ್ದಿದ್ದರು. ಅದಾದ ಒಂದು ವರ್ಷದಲ್ಲೇ ಈ ಎರಡೂ ಕ್ಷೇತ್ರಗಳನ್ನು ಸೋಲುವ ಜತೆಗೆ ರಾಜ್ಯದಲ್ಲೇ ಕಾಂಗ್ರೆಸ್ ಸೋಲು ಅನುಭವಿಸಿತು. ಒಂದು ಉಪಚುನಾವಣೆ ಸೋಲು-ಗೆಲುವಿಗೆ ಹಲವು ಸ್ಥಳೀಯ ಕಾರಣಗಳು ಇರುತ್ತವೆ.

ಉಪ ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ, ಉಪ ಚುನಾವಣೆಯ ಫಲಿತಾಂಶಗಳಿಗೂ, ಸಾರ್ವತ್ರಿಕ ಚುನಾವಣೆಗಳಿಗೂ ಸಂಬಂಧವಿಲ್ಲ. 2012 ರಿಂದ 2019ರ ಮಧ್ಯೆ ಎನ್‍ಡಿಎ ಕೂಡ ಉಪ ಚುನಾವಣೆಗಳಲ್ಲಿ ಸೋಲು ಅನುಭವಿಸಿತ್ತು. ಆದರೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಮೊದಲಿಗಿಂತ ಹೆಚ್ಚು ಸ್ಥಾನವನ್ನು ಗಳಿಸಿತು. ಹಾಗಾಗಿ, ಉಪಚುನಾವಣೆಯ ಫಲಿತಾಂಶವನ್ನು ಇಟ್ಟುಕೊಂಡು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದೆಲ್ಲ ಹೇಳುವುದು ಅರ್ಥವಿಲ್ಲದ್ದು. ಉಪಚುನಾವಣೆಯ ಸೋಲು-ಗೆಲುವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸುತ್ತೇವೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್‍ನ ಸೋಲಿನ ಕಾರಣಗಳಿಂದ ಮುಂದಿನ ದಿನಗಳಲ್ಲಿ ವಿಶ್ಲೇಷಣೆ ಮಾಡಿ ಸರಿಪಡಿಸಿಕೊಳ್ಳುತ್ತೇವೆ. ಇಲ್ಲಿ ಸೋಲಿನ ಅಂತರವನ್ನು ಸಾಧಿಸಬಹುದಿತ್ತು. ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದರು.
ಹಾನಗಲ್‍ನಲ್ಲಿ ದಿ. ಸಿ.ಎಂ ಉದಾಸಿ ಅವರಿಗಿದ್ದ ಗಟ್ಟಿ ಬೆಂಬಲ ನೆಲೆಯನ್ನು ಮುಂದುವರೆಸಲು ಈ ಉಪಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿಲ್ಲ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಮಾನೆ ಅವರು ಕೋವಿಡ್ ಸಂದರ್ಭದಲ್ಲಿ ಜನಪರ ಕೆಲಸ ಮಾಡಿದರು ಎಂಬುದು ಜನರ ಮನಸ್ಸಿನಲ್ಲಿತ್ತು. ಇವೆರಡೂ ಕಾರಣಗಳಿಂದ ಹಾನಗಲ್‍ನಲ್ಲಿ ಸೋಲಾಗಿದೆ ಎಂದು ವ್ಯಾಖ್ಯಾನಿಸಿದರು.

ಆರೋಪ ಪಟ್ಟಿ ಸಲ್ಲಿಸಿದ್ದೇವೆ
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಆರೋಪ ಮಾಡಿದ್ದಾರೆ. ಅವರೇ ದಾಖಲೆ ಬಿಡುಗಡೆ ಮಾಡಬೇಕು. ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಅದು ಈಗ ಸಾರ್ವಜನಿಕ ದಾಖಲೆಯಾಗಿದೆ. ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

100 ದಿನಕ್ಕೆ ಅಂತಹ ಮಹತ್ವವಿಲ್ಲ
ಮುಖ್ಯಮಂತ್ರಿಯಾಗಿ 100 ದಿನ ಪೂರೈಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, 100 ದಿನ ಎನ್ನುವುದು ವಿಶೇಷವೇನಲ್ಲ. 100 ದಿನ ಒಂದು ವರ್ಷದ ಹಾಗೆ ಪ್ರಮುಖ ಘಟ್ಟವೂ ಅಲ್ಲ. ಆದರೆ, 100 ದಿನಗಳಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಯಾವ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿದ್ದೇವೆ. ಈ ಎಲ್ಲದರ ಬಗ್ಗೆಯೂ ಸ್ಥೂಲ ಮಾಹಿತಿ ಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap