ನವದೆಹಲಿ:
2002ರಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದ ಹೊತ್ತಿರುವ ತೀಸ್ತಾ ಸೆಟಲ್ವಾಡ್ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಜುಲೈ 19 ರವರೆಗೆ ಸುಪ್ರೀಂ ಕೋರ್ಟ್ ಬುಧವಾರ ವಿಸ್ತರಿಸಿದೆ.
ತೀಸ್ತಾ ಸೆಟಲ್ವಾಡ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಕೂಡಲೇ ಪೊಲೀಸರಿಗೆ ಶರಣಾಗಬೇಕು ಎಂದು ಗುಜರಾತ್ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಜುಲೈ 1ರಂದು ತಡೆಯಾಜ್ಞೆ ನೀಡಿತ್ತು. ಈಗ ಗುಜರಾತ್ ಹೈಕೋರ್ಟ್ ಆದೇಶಕ್ಕೆ ನೀಡಿದ ತಡೆಯಾಜ್ಞೆಯು ಜುಲೈ 19ರವರೆಗೆ ವಿಸ್ತರಣೆಯಾಗಿದೆ.
ಜುಲೈ 19ರಂದು ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ಮತ್ತೆ ವಿಚಾರಣೆ ನಡೆಸಲಿದೆ. ಆಗ, ತೀಸ್ತಾ ಸೆಟಲ್ವಾಡ್ ಅವರು ಪೊಲೀಸರಿಗೆ ಶರಣಾಗಬೇಕೋ, ಇಲ್ಲವೋ ಎಂಬುದನ್ನು ತೀರ್ಮಾನಿಸಲಿದೆ.
