ತಿಪಟೂರು :

ಕೋತಿಯೊಂದು ನೀರಿಗೆ ಬಿದ್ದ ತನ್ನ ಮರಿಯನ್ನು ಎತ್ತಿ ಹಿಡಿದು ರಕ್ಷಿಸುತ್ತಿತ್ತು, ಆದರೆ ನೀರು ಯಾವಾಗ ಕುತ್ತಿಗೆಯವರೆಗೂ ಬಂತೋ ಆಗ ಮರಿಯನ್ನು ತನ್ನ ಕೆಳಗೆ ಹಾಕಿಕೊಂಡು ತಾನು ಬದುಕಲು ಮುಂದಾಯಿತು. ಇಂತಹ ಪರಿಸ್ಥಿತಿ ಈಗ ನಗರಸಭೆಯದಾಗಿದೆ.
ತುಮಕೂರು ಸೇರಿದಂತೆ ಇತರೆ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ನಾಲೆಯು ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ನಗರದ ಮೂಲಕ ಹಾದು ಹೋಗುತ್ತಿದ್ದು, ನಾಲೆಯ ನೀರಿಗೆ ನಗರದ ಯುಜಿಡಿಯ ಕೊಳಚೆ ನೀರು ಹರಿದು ಸೇರುತ್ತಿದೆ. ಈ ಕುರಿತು 2020 ರ ಸೆ.30ರಂದು ಪ್ರಜಾಪ್ರಗತಿ ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿ ನಗರಸಭೆಯ ಗಮನ ಸೆಳೆದಿತ್ತು. ಮುಂದೆ ನಗರಸಭೆಯ ಪ್ರಗತಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆದರೂ ಸಹ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು ಈಗ ಯುದ್ದಕಾಲೇ ಶಸ್ತ್ರಾಭ್ಯಾಸ ಎಂಬಂತೆ ತುರಾತುರಿಯಲ್ಲಿ ಕೆಲಸ ನಿರ್ವಹಿಸಲು ಒದ್ದಾಡುತ್ತಿದ್ದಾರೆ.

ಅಸಮರ್ಪಕ ಅವೈಜ್ಞಾನಿಕತೆ ನಿರ್ವಹಣೆ:
ನಗರದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಮಾಡಿರುವ ಯುಜಿಡಿಯು ಅವೈಜ್ಞಾನಿಕ ಕಾಮಗಾರಿ, ಅಸಮರ್ಪಕ ನಿರ್ವಹಣೆ, ಯಾವಾಗಲು ಯಂತ್ರಗಳ ಸಮಸ್ಯೆ ಎಂದು ಕೊಳಚೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಹೊರಗೆ ಬಿಡುತ್ತಿರುವುದು ಜೊತೆಗೆ ಎಲ್ಲೆಂದರಲ್ಲಿ ಯುಜಿಡಿಯ ನೀರು ಉಕ್ಕಿ ಹರಿಯುತ್ತಿದೆ.
ಮುಖ್ಯವಾಗಿ ನಗರದಲ್ಲಿ ಯುಜಿಡಿಯನ್ನು ನಿರ್ಮಿಸುವಾಗ ಮಾಡಿದ ಕೆಲವು ದೋಷದಿಂದ ಹಾಗೂ ಮಳೆಯ ನೀರು ಯುಜಿಡಿ ಸೇರುವಂತೆ ಮಾಡಿರುವುದರಿಂದಲೋ ಏನೊ ಅಲ್ಪ ಮಳೆ ಬಂದರು ಸಾಕು, ರಾಷ್ಟ್ರೀಯ ಹೆದ್ದಾರಿ-206 ರ ವೈಶಾಲಿಬಾರ್ ಮುಂಭಾಗ ಹಾಗೂ ಕೋಡಿಸರ್ಕಲ್‍ನಿಂದ ಬೆಂಗಳೂರು ರಸ್ತೆ ಮಾರ್ಗದಲ್ಲಿ ಇರುವ ಹಲವಾರು ಯುಜಿಡಿ ಮ್ಯಾನ್‍ಹೋಲ್‍ಗಳು ತುಂಬಿ ಹರಿಯುತ್ತವೆ. ಈ ಸಂದರ್ಭದಲ್ಲಿ ಯುಜಿಡಿ ಪಕ್ಕದಲ್ಲೇ ಇರುವ ಬಾಕ್ಸ್ ಚರಂಡಿಗಳು ಕಟ್ಟಿಕೊಂಡಿರುವುದರಿಂದ ರೆಸ್ತೆಯ ಒಂದು ಭಾಗದಲ್ಲಿ ಸುಮಾರು 2-3 ಅಡಿಗಳಷ್ಟು ನೀರು ನಿಲ್ಲುತ್ತದೆ. ಈ ನೀರಿನಲ್ಲಿ ದೊಡ್ಡ ವಾಹನಗಳು ಅನಾಯಾಸವಾಗಿ ಸಂಚರಿಸುತ್ತವೆ. ಆದರೆ ಲಘುವಾಹನಗಳಾದ ಕಾರ್, ಆಟೋ, ದ್ವಿಚಕ್ರವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ, ಒಂದು ವೇಳೆ ಸಂಚರಿಸಿದರೆ ಕೊಚ್ಚೆನೀರಿನ ದುರ್ನಾತದಿಂದ ವಾಹನಗಳು ಮತ್ತು ಸಂಚರಿಸುವವರ ಉಸಿರು ನಿಲ್ಲುವಂತಾಗುತ್ತದೆ. ಜೊತೆಗೆ ಮಲಿನ ನೀರಿನಿಂದ ಇಲ್ಲಸಲ್ಲದ ರೋಗಗಳನ್ನು ಮನೆಗೆ ಕೊಂಡೊಯ್ಯಬೇಕಾಗಿದ್ದು ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ ಯುಜಿಡಿ ನಿರ್ಮಿಸಿದ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಕಂಡು ಬಂದರೂ ಸಹ ಮಳೆಗಾಲದಲ್ಲಿ ಈ ಸಮಸ್ಯೆ ತಪ್ಪಿದ್ದಿಲ್ಲ. ಲಕ್ಷಾಂತರ ರೂ. ಹಣವನ್ನು ವ್ಯಯ ಮಾಡುವ ನಗರಸಭೆಯ ಅಧಿಕಾರಿಗಳು ಈ ಸಮಸ್ಯೆಗೆ ಮುಕ್ತಿಹಾಡಲು ಏಕೆ ಸಾಧ್ಯವಾಗಿಲ್ಲ, ಉತ್ಸಾಹಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪೌರಾಯುಕ್ತರು ಈ ಸಮಸ್ಯೆಗೆ ಮುಕ್ತಿಹಾಡುತ್ತಾರೊ, ಇಲ್ಲ ನಮಗೂ ಇದಕ್ಕೂ ಸಂಬಂಧವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳುತ್ತಾರೊ ನೋಡಬೇಕಾದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಇದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಉಕ್ಕುವ ಯುಜಿಡಿ ನೀರು ಮಾತ್ರವಲ್ಲ, ಗಾಂಧಿನಗರ, ಕೃಷಿಮಾರುಕಟ್ಟೆ, ಮುಂತಾದ ಭಾಗಗಳಿಂದ ರಾಜಾಕಾಲುವೆ ಮೂಲಕ ಕೆಂಪಾಂಬನಗರ, ಬಸವೇಶ್ವರನಗರಕ್ಕೆ ಬರುವ ಕೊಳಚೆ ನೀರು ಅಲ್ಲಿಂದ ಗೊರಗೊಂಡನಹಳ್ಳಿಯ ಹಳ್ಳಸೇರಿ ಮುಂದೆ ತೋಟದ ಸಾಲು ಸೇರಿ ಕೊಪ್ಪದ ತೋಟ, ಕಟ್ಟೆಗಳನ್ನು ತುಂಬಿಸಿಕೊಂಡು ಕೊಪ್ಪ ಮತ್ತು ಹಿಂಡಿಸ್ಕೆರೆ ತೋಟದ ಸಾಲಿನ ಮೂಲಕ ತಿಪಟೂರಿಗೆ ನೀರೊದಗಿಸುವ ಈಚನೂರು ಕೆರೆಯ ನೀರು ಸೇರುತ್ತಿದ್ದು ನಾವು ಕಲುಷಿತ ಗೊಳಿಸಿಸುವ ನೀರನ್ನು ನಾವೇ ಕುಡಿಯುಂತಾಗಿದೆ.
ಇನ್ನೂ ನಗರದ ಪಲ್ಲಾಗಟ್ಟಿ ಮತ್ತು ಎಂ.ಆರ್.ಲೇಔಟ್, ಹಾಸನ ವೃತ್ತದ ಬಳಿಯ ಸಿಟಿಗಾರ್ಡ್‍ನ್ ಮುಂಭಾಗದಲ್ಲಿ ಯುಜಿಡಿಯು ವರ್ಷದ ತುಂಬಾ ತುಂಬಿಹರಿಯುತ್ತಿದ್ದು ಸುತ್ತಮುತ್ತಲಿನ ನಿವಾಸಿಗಳು ಯಾವಾಗಲೂ ಮೂಗು ಮುಚ್ಚಿಕೊಂಡು ಓಡಾಡುವ ಸನ್ನಿವೇಶ ಎದುರಾಗಿದ್ದು, ಸದ್ಯ ಕೊರೊನಾ ಭಯದ ಜೊತಗೆ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಪತ್ರಿಕೆಯು ಕಳೆದ ವರ್ಷವೇ ಮಲಿನ ನೀರು ಹೇಮಾವತಿಯ ನಾಲೆಗೆ ಸೇರುತ್ತಿದೆ ಎಂದು ವರದಿ ಮಾಡಿದಾಗ, ತಾತ್ಸಾರ ಮಾಡದೇ ಕ್ರಮಗಳನ್ನು ಕೈಗೊಂಡು, ಮುಚ್ಚಿಹೋಗಿರುವ ಹಲವಾರು ಹಳ್ಳಗಳನ್ನು ತೆರವುಗೊಳಿಸಿ ನೀರನ್ನು ಹಳ್ಳಗಳ ಮೂಲಕ ಮುಂದಕ್ಕೆ ಹರಿಯುವಂತೆ ಮಾಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ.
ಸಮಸ್ಯೆ ಕುರಿತು ನಗರದ ನಾಗರೀಕರೊಬ್ಬರು ಸಲಹೆ ನೀಡಿದ್ದು, ಅನುಷ್ಠಾನಗೊಳಿಸಿದರೆ ಕೇವಲ 3 ದಿನಗಳಲ್ಲೆ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು ಅಲ್ಲದೇ ಯಾರು ಯಾರು ಅನಧಿಕೃತವಾಗಿ ಯುಜಿಡಿ ಸಂಪರ್ಕ ಹೊಂದಿದ್ದಾರೆ ಹಾಗೂ ಇದುವರೆಗೂ ಯಾರು ಸಂಪರ್ಕ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಕಲೆಹಾಕಬಹುದು.
ನಾಗರೀಕರ ಸಲಹೆ:
ಮಳೆ ಬಂದ್ರೆ ಸಾಕು ಈ ಗೋಳು ಇದ್ದಿದ್ದೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಕೊಳಚೆನೀರು ಈಚನೂರು ಕೆರೆ ತಲುಪದಂತೆ ಎಚ್ಚರ ವಹಿಸಿ ಬೈಪಾಸ್ ಹಳ್ಳ ಮಾಡುವುದು ತಕ್ಷಣದ ಪರಿಹಾರ. ಯುಜಿಡಿ ಸಂಪರ್ಕ ಪಡೆದಿರುವ ಮನೆಗಳ ಚಾವಣಿನೀರು ಕಾಲುವೆ ಸೇರುವುದನ್ನ ಖಾತ್ರಿಪಡಿಸುವ ಕಾರ್ಯ ಆಗಬೇಕು. ಮಳೆ ನೀರು ಯುಜಿಡಿ ಸೇರ್ತಿದೆ ಇದು ತಪ್ಪ ಬೇಕು. ಈ ಕುರಿತ ಜಾಗೃತಿ ಮತ್ತು ಸರ್ವೆ, ರಿಪೇರಿ ಒಂದೇ ಸಲ ಆಗ್ಬೇಕು. ತುರ್ತಾಗಿ ಸರ್ಕಾರಿ ಅಧಿಕಾರಿಗಳನ್ನು ಜಾಗೃತಿ ಮತ್ತು ಸರ್ವೆಗೆ ಬಳಸಿಕೊಂಡಲ್ಲಿ ಎರಡು ಮೂರು ದಿನದಲ್ಲಿ ಸರ್ವೆ ಮುಗಿಸಬಹುದು. ಅಂಗವಾಡಿಯವರನ್ನು ಬಳಸದೇ, ವಾರ್ಡ್ ವಾರು ಶಿಕ್ಷಕರು, ಹಾಲಿ ಮತ್ತು ಮಾಜಿ ಸದಸ್ಯರು, ನಗರಸಭೆ ಸಿಬ್ಬಂದಿ, ಇವರನ್ನೊಳಗೊಂಡ ಸಮಿತಿಯಿಂದ ಸಮೀಕ್ಷೆ ಆಗಬೇಕು. ಆಗ ಈ ಸಮಸ್ಯೆ ಸರಿಪಡಿಸುವುದು ಸುಲಭ.
ಮಳೆಯೇ ಹೊಣೆ: ಇದು ಯುಜಿಡಿ ನೀರೂ ಅಲ್ಲ, ಕೊಳಚೆ ನೀರೂ ಅಲ್ಲ. ಹೆಚ್ಚಿನ ಮಳೆ ಬಂದಿದ್ದರಿಂದ ಮಳೆ ನೀರಿನೊಂದಿಗೆ ಯು.ಜಿ.ಡಿ ನೀರು ಸೇರುತ್ತಿದೆ. ನಿಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದೇವೆ.
-ಉಮಾಕಾಂತ್, ನಗರಸಭೆಯ ಪೌರಾಯುಕ್ತ
-ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








