ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬಹುದು ಹೇಗೆ?

ಆಂಧ್ರ :

   ಭಕ್ತರು ಅರ್ಧ ದಿನಗಟ್ಟಲೆ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಸರತಿಯಲ್ಲಿ ನಿಲ್ಲುವುದು ಕೊನೆಗೊಳ್ಳಲಿದ್ದು ಎಐ ತಂತ್ರಜ್ಞಾನದ ಮೂಲಕ ದೇವರ ದರ್ಶನ ಬೇಗ ಆಗಲಿದೆ. ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಮತ್ತಷ್ಟು ಸುಲಭ ಮಾಡಲು ಟಿಟಿಡಿ ಮುಂದಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನದ ಸಹಾಯದಿಂದ ಭಕ್ತರಿಗೆ ಕಡಿಮೆ ಸಮಯದಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ.

 
    ಕೃತಕ ಬುದ್ಧಿಮತ್ತೆಯಲ್ಲಿ ಪರಿಣಿತರಾಗಿರುವ ವಿದೇಶಿ ಪ್ರತಿನಿಧಿಗಳೊಂದಿಗೆ ಟಿಟಿಡಿ ಈಗಾಗಲೇ ಸಂಪರ್ಕದಲ್ಲಿದೆ. ಉಪಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ. ಭಕ್ತರು ಸರತಿ ಸಾಲಿನಲ್ಲಿ ಮತ್ತು ಕಂಪಾರ್ಟ್‌ಮೆಂಟ್‌ಗಳಲ್ಲಿ ಗಂಟೆಗಟ್ಟಲೆ ಕಾಯದೆ ತ್ವರಿತ ದರ್ಶನ ನೀಡಲು ಮುಂದಾಗಿದೆ.
  ಟಿಟಿಡಿ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರಾಗಿ ಬಿಆರ್ ನಾಯ್ಡು ಆಯ್ಕೆಯಾದ ಮೊದಲ ಸಭೆಯಲ್ಲೇ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿದಿನ 70 ಸಾವಿರ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದರೂ ಜನರು ಹರಸಾಹಸ ಪಡುತ್ತಿದ್ದಾರೆ. ಒಂದು ಕ್ಷಣ ದೇವರ ದರ್ಶನ ಸಿಕ್ಕಿದರೆ ಸಾಕಪ್ಪಾ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.ರಾಜ್ಯ ಸರ್ಕಾರದ ಸ್ವರ್ಣ ಆಂಧ್ರ-2047 ಉಪಕ್ರಮಕ್ಕೆ ಅನುಗುಣವಾಗಿ ತನ್ನ ವಿಷನ್ 2047 ಅಡಿಯಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವನ್ನು ಮಾದರಿ ಯಾತ್ರಾ ಕೇಂದ್ರವಾಗಿ ಪರಿವರ್ತಿಸಲು ಟಿಟಿಡಿ ಗುರಿಯನ್ನು ಹೊಂದಿದೆ.
  ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಮುಖ ಗುರುತಿಸುವ ರಸೀದಿ ಮೂಲಕ ದರ್ಶನ ಸಮಯವನ್ನು ದೃಢೀಕರಿಸಿ ಟೋಕನ್ ನೀಡುವ ವಿಧಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಟೋಕನ್ ಪಡೆದ ಭಕ್ತರು ನಿಗದಿತ ಸಮಯಕ್ಕೆ ವೈಕುಂಠಂ ಸರದಿ ಸಂಕೀರ್ಣವನ್ನು ತಲುಪಿದರೆ, ಫೇಸ್​ ರೆಕಗ್ನಿಷನ್  ಪ್ರವೇಶದ್ವಾರದಲ್ಲಿ ಸ್ಕ್ಯಾನ್ ಮಾಡುವ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಸರತಿ ಸಾಲಿನಲ್ಲಿ ಬಂದ ಭಕ್ತರಿಗೆ ಕಾಯುವ ತಲೆನೋವಿಲ್ಲದೆ ಒಂದು ಗಂಟೆಯೊಳಗೆ ಸ್ವಾಮಿಯ ದರ್ಶನ ಪೂರ್ಣಗೊಳ್ಳಲಿದೆ ಎಂದು ಟಿಟಿಡಿ ನಿರೀಕ್ಷಿಸಿದೆ.
  ಭಕ್ತರಿಗೆ ಟೋಕನ್ ನೀಡಲು ವಿಶೇಷ ಕೌಂಟರ್ ಗಳನ್ನು ತೆರೆಯಬೇಕು. ತಿರುಮಲ ಹಾಗೂ ಭಕ್ತರು ಹೋಗುವ ಬೆಟ್ಟದ ಹೆಬ್ಬಾಗಿಲು ಅಲಿಪಿರಿಯಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಸಿಬ್ಬಂದಿ ಅಗತ್ಯವಿಲ್ಲದೇ ತಿರುಮಲ ಬೆಟ್ಟದಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಹೆಚ್ಚು ಪಾರದರ್ಶಕತೆಯನ್ನು ತರುವ ಸಾಧ್ಯತೆಯನ್ನು ಟಿಟಿಡಿ ಕಲ್ಪಿಸಿದೆ.
  ಇದನ್ನು ಜಾರಿಗೆ ತರಲು ನಾಲ್ಕು ವಿದೇಶಿ ಕಂಪನಿಗಳು ಆಸಕ್ತಿ ತೋರುತ್ತಿವೆ. ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ ಒದಗಿಸಲು ಮುಂದೆ ಬರುವ ಏಜೆನ್ಸಿಗಳು ಈ ವಿಧಾನವನ್ನು ಅಳವಡಿಸಿ ಯಶಸ್ಸು ಸಾಧಿಸಲು ಮುಂದಾಗಿವೆ. ಸರತಿ ಸಾಲು ನಿರ್ವಹಣೆಯನ್ನು ಸುಲಭಗೊಳಿಸಲು ಟಿಟಿಡಿ ಆಶಿಸಿದೆ.

Recent Articles

spot_img

Related Stories

Share via
Copy link