ಈ ಜಿಲ್ಲೆಯಲ್ಲಿ ಟ್ರಾಫಿಕ್‌ ರೂಲ್ಸ್‌ ಬೆಂಗಳೂರಿಗೊಂತಲೂ ಕಠಿಣ : ಯಾವ ಜಿಲ್ಲೆ ಗೊತ್ತಾ…?

ರಾಯಚೂರು

     ಗಡಿ ಜಿಲ್ಲೆ ರಾಯಚೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಮಿರಿ ಮೀರಿದೆ. ಜಿಲ್ಲಾ ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ, ಏನೇ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ವಾಹನ ಸವಾರರು ಮಾತ್ರ ಬೇಜವಾಬ್ದಾರಿತನ ಬಿಡುತ್ತಿಲ್ಲ. ಅತೀ ವೇಗದ ಚಾಲನೆ, ರಸ್ತೆ ನಿಯಮಗಳ ಅರಿವು ಇಲ್ಲದಿರುವುದು, ಬೇಕಾಬಿಟ್ಟಿ ವಾಹನ ಚಾಲನೆ, ಅವೈಜ್ಞಾನಿಕ ರಸ್ತೆಗಳು ಸೇರಿ ವಿವಿಧ ಕಾರಣಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

   ಜಿಲ್ಲೆಯಲ್ಲಿ ಕಳೆದ ಮೂರು ವರ್ಷದ ಅವಧಿಯಲ್ಲಿ ರಸ್ತೆ ಅಪಘಾತಗಳಲ್ಲಿ 1184 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ ಗರಿಷ್ಠ, ಅಂದರೆ 335 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವರ್ಷ 10 ತಿಂಗಳಲ್ಲೇ 240 ಜೀವ ಬಿಟ್ಟಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆಯಲ್ಲಿ ರಾಯಚೂರು ಜಿಲ್ಲೆ ಮುಂಚೂಣಿಯಲ್ಲಿರುವುದು ಇಲಾಖೆಯ ಅಂಕಿಅಂಶಗಳಿಂದಲೇ ಬಹಿರಂಗವಾಗಿದೆ. 

  ದೇವದುರ್ಗ, ಸಿಂಧನೂರು ಹಾಗೂ ಲಿಂಗಸುಗೂರು ತಾಲ್ಲೂಕಿನಲ್ಲಿ ಬಹುತೇಕ ವಾಹನಗಳಿಗೆ ನಂಬ‌ರ್ ಪ್ಲೇಟ್‌ಗಳೇ ಇಲ್ಲ. ಮರಳು ಸಾಗಿಸುವ ನೂರಾರು ವಾಹನಗಳಿಗೆ ನಂಬ‌ರ್ ಪ್ಲೇಟ್ ಇಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಇದರಲ್ಲಿ ಎದ್ದು ಕಾಣುತ್ತಿದೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಬೈಕ್ ಸವಾರರೇ ಹೆಚ್ಚಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.

  ಈ ವಿಚಾರವಾಗಿ ರಾಯಚೂರು ಎಸ್​​ಪಿ ಪುಟ್ಟಮಾದಯ್ಯ ಮಾಹಿತಿ ನೀಡಿದ್ದು, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  ಇದೇ ನವೆಂಬರ್ ಒಂದರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಹಾಕಲೇಬೇಕು. ಇಲ್ಲದಿದ್ದರೆ 500 ರೂ. ದಂಡ ತೆರಬೇಕು. ಈಗಾಗಲೇ​ ಗ್ರಾಮ ಸಭೆ ಹಾಗೂ ಜಾಹೀರಾತುಗಳ ಮೂಲಕ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇಲಾಖೆ ಜನರ ಪ್ರಾಣದ ರಕ್ಷಣೆಗಾಗಿ ಈ ನಿಯಮ ತಂದರೂ ಕೂಡ ಜನ ಮಾತ್ರ ಹೆಲ್ಮೆಟ್ ಧರಿಸದೇ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. 

   ಅಲ್ಲಲ್ಲಿ ಪಾಯಿಂಟ್​ಗಳಲ್ಲಿ ಪೊಲೀಸರು ಹೆಲ್ಮೆಟ್ ಚೆಕ್ಕಿಂಗ್ ನಡೆಸುತ್ತಿದ್ದಾರೆ. ಆದರೂ ಅವರ ಕಣ್ತಪ್ಪಿಸಿ ವಾಹನ ಸವಾರರು ಬೈಕ್ ಸಮೇತ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ರಾಯಚೂರಿನ ವಿವಿಧೆಡೆ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಎಸ್ಕೇಪ್ ಆಗ್ತಿರುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. 

   ಈಗಾಗಲೇ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಒಂದು ವಾರ ಕಳೆದಿದೆ. ಸದ್ಯ ಹೆಲ್ಮೆಟ್ ಧರಿಸದೇ ಓಡಾಡಿದವರಿಂದ 10 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ದಂಡ ಸಂಗ್ರಹವಾಗಿದೆ.

Recent Articles

spot_img

Related Stories

Share via
Copy link