ಕೊರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಸೋಂಕಿನ ಚಿಕಿತ್ಸೆ ಜೊತೆಗೆ ವಿವಿಧ ಖಾಯಿಲೆ, ಹೆರಿಗೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಹಲವು ಗೊಂದಲ, ಪ್ರಶ್ನೆಗಳು ಮೂಡಿವೆ. ಇದನ್ನೆಲ್ಲ ವೈದ್ಯರ ಬಳಿ ನೇರ ಕೇಳಿ ಪರಿಹರಿಸಿಕೊಳ್ಳಲು ಕರ್ಫ್ಯೂ, ಸೋಂಕು ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಗತಿ ಪತ್ರಿಕೆ ಜನಸಾಮಾನ್ಯರ ವೈದ್ಯಕೀಯ ಸಂದೇಹ, ಪ್ರಶ್ನೆಗಳಿಗೆ ತಜ್ಞ ವೈದ್ಯರ ಸಂದರ್ಶನ, ಲೇಖನ ರೂಪದಲ್ಲಿ ಉತ್ತರ ಕೊಡಿಸುವ “ ಪ್ರಗತಿ ಡಾಕ್ಟರ್’’ ಅಂಕಣ ಆರಂಭಿಸಿದೆ. ಈ ಅಂಕಣದಲ್ಲಿ ವೈದ್ಯಕೀಯ ವಿಭಾಗದ ಹಲವು ಶಾಖೆಗಳ ತಜ್ಞರುಗಳು ಸಾಂದರ್ಭಿಕಾಗಿ ಉಪಯುಕ್ತ ಮಾಹಿತಿ ಒದಗಿಸಲಿದ್ದಾರೆ. ಅಂಕಣದ ಮೊದಲ ಭಾಗದಲ್ಲಿ ಕೋವಿಡ್ ಸಂದರ್ಭದಲ್ಲಿ ಗರ್ಭಿಣಿ-ಬಾಣಂತಿಯರ ಆರೈಕೆ ಕುರಿತು ಖ್ಯಾತ ಪ್ರಸೂತಿ ತಜ್ಞ ಡಾ.ಬಸವರಾಜು ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ.
ತುಮಕೂರು :
ಮುಟ್ಟಿನ ಅವಧಿಯಲ್ಲಿ ಹೆಣ್ಣು ಮಕ್ಕಳು ಕೋವಿಡ್ ನಿಯಂತ್ರಣ ವ್ಯಾಕ್ಸಿನ್ ಪಡೆದರೆ ಅಡ್ಡಪರಿಣಾಮಗಳಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದೆಲ್ಲ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುತ್ತಿದ್ದು, ಹೆಣ್ಣುಮಕ್ಕಳು ಈ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿ ಕೋವಿಡ್ ನಿಯಂತ್ರಣ ಲಸಿಕೆ ಪಡೆಯಬೇಕು ಎಂದು ನಗರದ ಪ್ರಸಿದ್ಧ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಚರಕ ಆಸ್ಪತ್ರೆಯ ಡಾ.ಬಸವರಾಜು ಸಲಹೆ ನೀಡಿದ್ದಾರೆ.
ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಆರೋಗ್ಯ ಕಾಳಜಿ ಕುರಿತು ಪ್ರಜಾಪ್ರಗತಿ- ಪ್ರಗತಿ ವಾಹಿನಿಗೆÉ ನೀಡಿದ ಸಂದರ್ಶನದಲ್ಲಿ ಡಾ.ಬಸವರಾಜು ಅವರು ಮುಟ್ಟೆಂಬುದು ಹೆಣ್ಣು ಮಕ್ಕಳಿಗೆ ಸಹಜ ಪ್ರಕ್ರಿಯೆ. ಈ ಅವಧಿಯಲ್ಲಿ 50 ರಿಂದ 80 ಎಂಎಲ್ ರಕ್ತಸ್ರಾವ ಸಹಜವಾಗಿ ಆಗುತ್ತದೆ. ಜೊತೆಗೆ ಅದಕ್ಕಿಂತ ದುಪ್ಪಟ್ಟು ರಕ್ತ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಹಾಗಾಗಿ ಪ್ರಕೃತಿ ಸಹಜ ಕ್ರಿಯೆಯ ಅವಧಿಯಲ್ಲಿ ವ್ಯಾಕ್ಸಿನ್ ಪಡೆಯಬಾರದೆಂಬ ಸಂದೇಶಗಳು ಆಧಾರ ರಹಿತ. ಗರ್ಭಿಣಿ, ಬಾಣಂತಿಯರನ್ನು ಹೊರತುಪಡಿಸಿ ಎಲ್ಲಾ ಹೆಣ್ಣು ಮಕ್ಕಳು ಯಾವುದೇ ಹಿಂಜರಿಕೆಯಿಲ್ಲದೆ ಆತ್ಮವಿಶ್ವಾಸದಿಂದ ಕೋವಿಡ್ ನಿಯಂತ್ರಕ ವ್ಯಾಕ್ಸಿನ್ ಪಡೆಯಬೇಕು. ಗರ್ಭಿಣಿ, ಬಾಣಂತಿಯರಿಗೆ ವ್ಯಾಕ್ಸಿನ್ ನೀಡುವ ಕುರಿತು ಇನ್ನೂ ಸಂಶೋಧನೆ ಕ್ಲಿನಿಕಲ್ ಟ್ರಯಲ್ ಮುಂದುವರಿದಿರುವ ಕಾರಣ ಅವರಿಗೆ ವ್ಯಾಕ್ಸಿನ್ ಹಾಕಲು ಇನ್ನೂ ಅನುಮತಿಯಿಲ್ಲ ಎಂದು ವಿವರಿಸಿದರು.
ಗರ್ಭಿಣಿಯರು ಸೋಂಕಿತರಾದರೆ ಪ್ರತ್ಯೇಕ ಚಿಕಿತ್ಸೆಯಿಲ್ಲ :
ಗರ್ಭಿಣಿಯರನ್ನು ಆದಷ್ಟು ಮನೆಯ ಒಳಗೆ ಇರಿಸುತ್ತಿರುವ ಅವರಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿದೆ. ಆದಾಗ್ಯೂ ಸೋಂಕು ಕಂಡುಬಂದರೂ ಎ ಸಿಮ್ಟಾಮ್ಯಾಟಿಕ್ ಅಂದರೆ ಯಾವುದೇ ಜ್ವರ, ಕೆಮ್ಮು ಇಲ್ಲದ ಆರಂಭಿಕ ರೋಗ ಲಕ್ಷಣಗಳು ಮಾತ್ರ ಇರುತ್ತವೆ. ಈ ಸಂದರ್ಭದಲ್ಲಿ ಸೋಂಕಿತ ಗರ್ಭಿಣಿಯರಿಗೂ ಇತರೆ ಕೋವಿಡ್ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುತ್ತದೆ ಹೊರತು ವಿಶೇಷ ಚಿಕಿತ್ಸೆಯಿಲ್ಲ. ಒಂದು ವೇಳೆ ಸೋಂಕು ಕಂಡುಬಂದಲ್ಲಿ ಗರ್ಭಿಣಿಯರು ಹೋಂ ಐಸೋಲೇಷನ್‍ಗೊಳಗಾಗಿ ವೈದ್ಯರ ಸೂಚನೆ ಅನುಸಾರ ಔಷಧಿ ಸೇವನೆ ಮಾಡುಬೇಕು. ಹೆಚ್ಚಿನ ಆತಂಕ ಪಡದೆ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಮನೆಯ ಇತರೆ ಸದಸ್ಯರಿಂದ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು.
ಸಿಜರಿಯನ್ ಹೆರಿಗೆಯೇ ಈ ಸಂದರ್ಭದಲ್ಲಿ ಹೆಚ್ಚು ಸೂಕ್ತ
ಕೋವಿಡ್ ಹೆಚ್ಚುತ್ತಿರುವ ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ ಕೋವಿಡ್ ಟೆಸ್ಟ್ ಮಾಡಿಸಿ ಸಿಜರಿಯನ್ ಹೆರಿಗೆಗೆ ಹೆಚ್ಚು ಶಿಫಾರಸ್ಸು ಮಾಡಲಾಗುತ್ತಿದೆ. ಕಾರಣ ಇಷ್ಟೇ ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರು, ಸೋಂಕು ರಹಿತರಿಗೂ ಚಿಕಿತ್ಸೆ ನೀಡುತ್ತಿರುವುದರಿಂದ ಸಾಮಾನ್ಯ ಹೆರಿಗೆ ಪ್ರಕರಣಗಳಲ್ಲಿ ಸೋಂಕು ಬಹುಬೇಗ ವ್ಯಾಪಿಸುವ ಸಂಭವ ಹೆಚ್ಚಿರುತ್ತದೆ. ಆದಕಾರಣ ಶಸ್ತ್ರಚಿಕಿತ್ಸೆಯ ಹೆರಿಗೆಗೆ ಒತ್ತುಕೊಡಲಾಗುತ್ತಿದೆ. ಹಾಗೆಯೇ ಗರ್ಭಿಣಿಯರೆಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯವಿಲ್ಲ. ಸೋಂಕಿನ ಶಂಕ್ಯಾಸ್ಪದ ಲಕ್ಷಣಗಳಿದ್ದರೆ ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತದೆ. ಆದೆ ಹೆರಿಗೆ ಸಂದರ್ಭದಲ್ಲಿ ಮಾತ್ರ ಗರ್ಭಿಣಿ, ಗರ್ಭಕೋಶದಲ್ಲಿನ ಮಗು, ಹೆರಿಗೆ ಮಾಡಿಸುವ ಸಿಬ್ಬಂದಿಯ ಆರೋಗ್ಯದ ಕಾಳಜಿಯಿಂದ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ.
ಬಾಣಂತಿಯರು ಸೋಂಕಿತರಾದರೂ ಧೃತಿಗೆಡದೆ ಮಗುವಿಗೆ ಹಾಲುಣಿಸಿ
ಮಗುವಿನ ದೈಹಿಕ ಬೆಳವಣಿಗೆ, ಆರೋಗ್ಯದ ದೃಷ್ಟಿಯಿಂದ ತಾಯಿಯ ಎದೆಹಾಲು 6 ತಿಂಗಳು, ವರ್ಷದವರೆಗೆ ಅತೀ ಮುಖ್ಯ. ಒಂದು ವೇಳೆ ಬಾಣಂತಿಯರು ಕೋವಿಡ್ ಸೋಂಕಿತರಾದರೆ ಮಗುವಿಗೆ ಹಾಲುಣಿಸಬೇಕೇ? ಬೇಡವೇ ಎಂಬ ಗೊಂದಲಗಳಿವೆ. ಬಾಣಂತಿಯರು ಸೋಂಕಿತರಾದರೂ ಐಸೋಲೇಷನ್ ಆಗಿ ಮಾಸ್ಕ್ ಧರಿಸಿ ಮುಖ ಆ ಕಡೆ ತಿರುಗಿಸಿಕೊಂಡು ಮಗುವಿಗೆ ಹಾಲುಣಿಸಬೇಕು. ಹಾಲುಣಿಸಿದ ನಂತರ ಮಗುವನ್ನು ಸೋಂಕಿತೆಯಿಂದ ಪ್ರತ್ಯೇಕವಾಗಿ ಇರಿಸಬೇಕು.
ಹೆಣ್ಣು ಮಕ್ಕಳಿಗೆ ಪ್ರಕೃತಿ ದತ್ತವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಕೊರೊನಾ ಸೇರಿದಂತೆ ಹಿಂದಿನ ಹಲವು ಸಾಂಕ್ರಾಮಿಕ ರೋಗಗಳು ಆವರಿಸಿದ ಸಂದರ್ಭದಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಾಧಿತರಾಗಿರುವುದೇ ಇದಕ್ಕೆ ನಿದರ್ಶನ. ಹಾಗಾಗಿ ಹೆಣ್ಣು ಮಕ್ಕಳು ಕೋವಿಡ್ ಬಗ್ಗೆ ಅನಗತ್ಯ ಆತಂಕಕ್ಕೊಳಗಾಗದೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ತರಕಾರಿ, ಸೊಪ್ಪು, ಹಣ್ಣು, ಮಾಂಸ, ಮೀನು, ಹಾಲು, ತುಪ್ಪವನ್ನು ಹೆಚ್ಚಾಗಿ ಸೇವಿಸಿ. ಡಯಟ್, ಸ್ಲಿಮ್, ಉಪವಾಸ ವ್ರತಗಳನ್ನು ಈ ಸಂದರ್ಭದಲ್ಲಿ ಕೈ ಬಿಡಿ. ಕೋವಿಡ್ ಬಂದರೂ ಮನೋಸ್ಥೈರ್ಯದಿಂದ ಎದುರಿಸಿ. ಮನೆಯ ಒಡತಿ ಸೌಖ್ಯವಾಗಿದ್ದರೆ, ಇಡೀ ಕುಟುಂಬ ಸೌಖ್ಯವಾಗಿರುತ್ತದೆ ನೆನಪಿಡಿ.
-ಡಾ.ಬಸವರಾಜು, ಪ್ರಸೂತಿ, ಸ್ತ್ರೀ ರೋಗ ತಜ್ಞರು.(ಮೊ. 9480862788)