ತುಮಕೂರು :
ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ಆಕ್ಸಿಜನ್ ಬೆಡ್‍ಗಳಿಗೆ ಅಭಾವ ಸೃಷ್ಟಿಯಾಗುತ್ತಿದ್ದು ಕ್ಯಾತ್ಸಂದ್ರ ಕೋವಿಡ್ ಕೇರ್ ಸೆಂಟರ್‍ನಲ್ಲಿ 50 ಆಕ್ಸಿಜನ್ ಬೆಡ್‍ಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ತುಮಕೂರು ಮಹಾನಗರಪಾಲಿಕೆ ಮೇಯರ್
ಬಿ.ಜಿ.ಕೃಷ್ಣಪ್ಪ ತಿಳಿಸಿದರು.
ಪಾಲಿಕೆ ಕಚೇರಿಯಲ್ಲಿ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಮುಖವಾಗಿ 200 ಬೆಡ್ ಸಾಮರ್ಥ್ಯದ ಕೋವಿಡ್‍ಕೇರ್ ಸೆಂಟರ್ ಅನ್ನು ಜಿಲ್ಲಾಡಳಿತ, ಮಹಾನಗರಪಾಲಿಕೆಯಿಂದ ಜಂಟಿಯಾಗಿ ನಿರ್ವಹಿಸಲಾಗುತ್ತಿದೆ. ಸದ್ಯ ಅದರಲ್ಲಿ 60 ಆರಂಭಿಕ ಹಂತದ ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದು, ಆಕ್ಸಿಜನ್ ಹೊರತಾದ ಪೌಷ್ಠಿಕ ಆಹಾರ, ಮಾತ್ರೆ ಔಷಧಿಗಳನ್ನು ನೀಡಲಾಗುತ್ತಿದೆ. ಆಕ್ಸಿಜನ್ ಬೆಡ್‍ಗಳ ಅನಿವಾರ್ಯತೆ ಮನಗಂಡು ಇದರಲ್ಲಿ 50 ಬೆಡ್‍ಗಳನ್ನು ಆಕ್ಸಿಜನ್ ಬೆಡ್‍ಗಳಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿ ನಿರ್ಮಿತಿ ಕೇಂದ್ರಕ್ಕೆ ಜವಾಬ್ದಾರಿ ವಹಿಸಲಾಗಿದೆ. ಶೀಘ್ರದಲ್ಲಿ ಇದರ ಬಳಕೆ ಸೌಲಭ್ಯ ನಗರದ ನಾಗರಿಕರಿಗೆ ಸಿಗಲಿದೆ ಎಂದರು.
44,000 ನಾಗರಿಕರಿಗೆ ಲಸಿಕೆ: ನಗರ ವ್ಯಾಪ್ತಿಯಲ್ಲಿ 45 ವರ್ಷ ಮೀರಿದ 44,000 ಸಾರ್ವಜನಿಕರಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಪಾಲಿಕೆಯ ಎಲ್ಲಾ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, 35 ವಾರ್ಡ್‍ಗಳಲ್ಲಿ ಹೋಂ ಐಸೋಲೇಷನ್‍ನಲ್ಲಿ ಇರುವ ಕೋವಿಡ್ ಸೋಂಕಿತರ ಪ್ರದೇಶಗಳ ಬಳಿ ಕೋವಿಡ್-19 ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಕೋವಿಡ್ 19 2ನೇ ಅಲೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಮಾ.1ರಿಂದ ಇಲ್ಲಿಯವರೆಗೆ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ 1,33,600 ರೂ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಸಾರ್ವಜನಿಕರಿಗೆ 62,100 ರೂ. ದಂಡ ವಿಧಿಸಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆಯ ಎಲ್ಲಾ ವಾರ್ಡ್‍ಗಳ ವ್ಯಾಪ್ತಿಯಲ್ಲೂ ರಸ್ತೆ ಬೀದಿಗಳನ್ನು ಅಗ್ನಿಶಾಮಕ, ಪಾಲಿಕೆ ವಾಹನಗಳ ಸಹಾಯದಿಂದ ಸ್ಯಾನಿಟೈಜ್ ಸಹ ಮಾಡಿಸಲಾಗುತ್ತಿದ್ದು, ಹೋ ಐಸೋಲೇಷನ್‍ನಲ್ಲಿ ಇರುವ ಕೋವಿಡ್ ಸೋಂಕಿನಿಂದ ಮೃತಪಟ್ಟ ರೋಗಿಗಳ ಮನೆಯನ್ನು ಕ್ಷಿಪ್ರ ಗತಿಯಲ್ಲಿ ಪ್ರಕರಣ ಅನುಸಾರ ಸ್ಯಾನಿಟೈಜ್ ಮಾಡಿಸಲಾಗುತ್ತಿದೆ. ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸುರಕ್ಷಾ ದಿರಿಸುಗಳನ್ನು ವಿತರಿಸಲಾಗಿದೆ. ಪಾಲಿಕೆ ಕಂದಾಯ ನಿರೀಕ್ಷಕ ಗಂಗಾಧರಸ್ವಾಮಿ ಎಂಬುವರು ಕೋವಿಡ್‍ಗೆ ಬಲಿಯಾಗಿದ್ದು, ಅವರಿಗೆ ಪಾಲಿಕೆ ಸಂತಾಪ ಸೂಚಿಸುತ್ತದೆ ಎಂದರು. ಆಯುಕ್ತೆ ರೇಣುಕಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮದ್ ಪಾಲಿಕೆ ಆರೋಗ್ಯಾಧಿಕಾರಿ ರಕ್ಷಿತ್ ಉಪಸ್ಥಿತರಿದ್ದರು.
ಔಷಧ ದುಬಾರಿಯಾಗದಂತೆ ಕ್ರಮ: ನಯಾಜ್ ಅಹಮದ್
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ ಮಹಾನಗರಪಾಲಿಕೆ ನಗರದ ಜನರ ಆರೋಗ್ಯ ಕಾಳಜಿಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಔಷಧಿಗಳ ಬೆಲೆಗಳು ಫಾರ್ಮಸಿಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗದಂತೆ ಆರೋಗ್ಯಾಧಿಕಾರಿಗಳಿಗೆ ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ ಎಂದರು.
ಸೋಂಕಿತರ ಮನೆಗಳಲ್ಲಿ ಪಲ್ಸ್ ಆಕ್ಸಿಮೀಟರ್ ತಪಾಸಣೆ : ಆಯುಕ್ತೆ
ಪಾಲಿಕೆ ಆಯುಕ್ತೆ ರೇಣುಕಾ ಅವರು ಮಾತನಾಡಿ ನಗರ ವ್ಯಾಪ್ತಿಯಲ್ಲಿ 3 ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ಕ್ಯಾತ್ಸಂದ್ರ ಕೋವಿಡ್ ಸೆಂಟರ್‍ನಲ್ಲಿ 200, ರೇಣುಕಾ ವಿದ್ಯಾಪೀಠ ಶಾಲೆಯ ಸೆಂಟರ್‍ನಲ್ಲಿ 100 ಹಾಗೂ ಸಿದ್ಧಗಂಗಾ ಮಠದ ಯಾತ್ರಿನಿವಾಸದ ಕೋವಿಡ್ ಕೇರ್ ಸೆಂಟರ್‍ನಲ್ಲಿ 100 ಬೆಡ್‍ಗಳನ್ನು ಸ್ಥಾಪಿಸಿದ್ದು, ಕ್ಯಾತ್ಸಂದ್ರದಲ್ಲಿ 50 ಆಕ್ಸಿಜನ್ ಬೆಡ್‍ಗಳ ಸ್ಥಾಪನೆಗೆ ಕ್ರಮವಹಿಸಲಾಗುತ್ತಿದೆ. ವಿಶೇಷವಾಗಿ ಸೋಂಕಿತರ ಮನೆಗಳಿಗೆ ತೆರಳಿ ಪಲ್ಸ್ ಆಕ್ಸಿಮೀಟರ್‍ನಿಂದ ತಪಾಸಣೆ ನಡೆಸಿ ವರದಿ ನೀಡಲು ಸ್ವಯಂಸೇವರನ್ನು ಸಹ ನೇಮಿಸಲಾಗುತ್ತಿದ್ದು, ಅವರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ವಿತರಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
