ಬೆಚ್ಚಿಬೀಳಿಸುತ್ತಿದೆ ಕೊರೊನಾ ವರದಿ ; ಮೀಸೆ ತಿರುವುತ್ತಿದ್ದವರಲ್ಲೀಗ ಮಂಕು!!!

 ತುಮಕೂರು : 

     ಕೊರೊನಾ ವೈರಾಣು ಹಳ್ಳಿ ಹಳ್ಳಿಗೂ ವ್ಯಾಪಿಸಿದ್ದು, ಸೋಂಕಿಗೆ ಒಳಗಾಗಿರುವ ಗ್ರಾಮಗಳ ಜನತೆ ಆತಂಕದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಕೊರೊನಾ ಮೊದಲ ಅಲೆಯಲ್ಲಿ ನಾವು ಅತ್ಯಂತ ಸೇಫ್ ಎಂದುಕೊಂಡಿದ್ದ ಗ್ರಾಮೀಣರು ಎರಡನೇ ಅಲೆಯಲ್ಲಿ ತತ್ತರಿಸುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ.

      ಜಿಲ್ಲೆಯ ಯಾವುದೇ ಭಾಗಕ್ಕೆ ಹೋದರೂ ಕೊರೊನಾ ಮುಕ್ತ ಪ್ರದೇಶಗಳೇ ಕಂಡುಬರುತ್ತಿಲ್ಲ. ಕೆಲವು ಗ್ರಾಮಗಳಿಗೆ ವೈರಾಣು ಕಾಲಿಡದೆ ಇರಬಹುದು. ಆದರೆ ಆ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದಿದ್ದು, ಇಂದಲ್ಲ ನಾಳೆ ನಮ್ಮ ಊರಿಗೂ ಬರಬಹುದು ಎಂಬ ಆತಂಕ ಇದೀಗ ಆರಂಭವಾಗಿದೆ. 2020ರ ಸಮಯದಲ್ಲಿ ಇಡೀ ತಾಲ್ಲೂಕಿಗೆ ಯಾವುದಾದರೂ ಒಂದು ಗ್ರಾಮದಲ್ಲಿ ಸೋಂಕಿತ ಕಂಡುಬಂದರೆ ಆ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗುತ್ತಿತ್ತು. ಅತ್ತ ಯಾರೂ ಸುಳಿಯುತ್ತಿರಲಿಲ್ಲ. ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಊರು ಕೇರಿಗಳಿಗೂ ಸೋಂಕು ಹರಡುತ್ತಿರುವುದರಿಂದ ಯಾರಿಗೆ ಕೊರೊನಾ ಮೆತ್ತಿಕೊಂಡಿದೆ ಎಂಬುದೇ ತಿಳಿಯುತ್ತಿಲ್ಲ. ಆಸ್ಪತ್ರೆಗೆ ಹೋಗಿಬರುವವರ ಸಂಖ್ಯೆಯೂ ಹೆಚ್ಚುತ್ತಿದೆ.

      ರೋಗಲಕ್ಷಣಗಳು ಗೋಚರಿಸಿದ ಕೂಡಲೇ ಕೆಲವರು ಈಗಾಗಲೇ ತಿಳಿದಿರುವ ಕೆಲವು ಮಾತ್ರೆಗಳು ಮತ್ತು ಕಷಾಯದಂತಹ ಕೆಲವು ಆಯುರ್ವೇದ ಪದ್ಧತಿಯ ಚಿಕಿತ್ಸೆಯ ಮೊರೆ ಹೋಗಿ ವಾಸಿ ಮಾಡಿಕೊಳ್ಳುತ್ತಿದ್ದಾರೆ. ಆರಂಭಿಕ ಹಂತದಲ್ಲಿಯೇ ಈ ಪ್ರಯತ್ನದಲ್ಲಿ ತೊಡಗಿದವರು ತೋಟದ ಮನೆ ಅಥವಾ ಪ್ರತ್ಯೇಕವಾಗಿ ಇದ್ದುಕೊಂಡು ಗುಣಮುಖರಾಗಿರುವ ಸಂಖ್ಯೆಯೂ ಇದೆ. ಆದರೆ ಬಹಳಷ್ಟು ದಿನಗಳ ಕಾಲ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಇದ್ದರೂ ನಿರ್ಲಕ್ಷ್ಯ ವಹಿಸಿ ರೋಗ ಉಲ್ಬಣಿಸಿದಾಗ ಮಾತ್ರವೇ ಆಸ್ಪತ್ರೆಗೆ ದಾಖಲಾಗುವವರು ಹೆಚ್ಚುತ್ತಿದ್ದಾರೆ. ಇದು ಸಾವಿನ ದಡಕ್ಕೆ ಕೊಂಡೊಯ್ಯುವ ಸಂದರ್ಭಗಳೂ ಆಗುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ನಿಯಮಿತವಾಗಿ ನಿರ್ದಿಷ್ಟ ಸಮಯದೊಳಗೆ ಪರೀಕ್ಷಾ ವರದಿ ಬಾರದೆ ಇರುವುದು ಸೋಂಕು ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಲೇ ಇಲ್ಲ. ಎಲ್ಲವನ್ನೂ ಜನತೆಯ ತಲೆಮೇಲೆ ಹಾಕುತ್ತಿದ್ದು, ಬೇಗ ವರದಿ ಬರುವಂತಾಗುವ ಕಡೆಗೆ ಸರ್ಕಾರ ಚಿಂತಿಸಬೇಕಿದೆ. ಇದರ ಜೊತೆಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು ದೊರಕುವಂತಾದರೆ ಆರಂಭಿಕ ಹಂತದಿಂದಲೇ ರೋಗ ನಿಗ್ರಹಿಸಬಹುದು.

      ಏಪ್ರಿಲ್ ತಿಂಗಳಿನಿಂದ ಕ್ರಮೇಣ ಏರುಗತಿಯಲ್ಲಿ ಸಾಗುತ್ತಾ ಹೋದ ಸೋಂಕು ಪ್ರಕರಣಗಳು ಮೇ ತಿಂಗಳಿನಲ್ಲಿ ಮತ್ತಷ್ಟು ಏರಿಕೆ ಪಡೆದಿದೆ. ಮೇ 1 ರಿಂದ 8ರವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಭಯಾನಕವೆನ್ನಿಸುತ್ತದೆ. ಜಿಲ್ಲೆಯ 11 ತಾಲ್ಲೂಕುಗಳ ಪೈಕಿ ತುಮಕೂರು ತಾಲ್ಲೂಕು ಪ್ರಥಮ ಸ್ಥಾನ ಪಡೆದಿದ್ದು, ಶಿರಾ ಹಾಗೂ ತುರುವೇಕೆರೆಯಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಈ 8 ದಿನಗಳ ಅವಧಿಯ ಅಂಕಿ ಅಂಶಗಳು ಈ ಕೆಳಕಂಡಂತಿವೆ.

      ಚಿ.ನಾ.ಹಳ್ಳಿ-727, ಪಾವಗಡ-800, ತಿಪಟೂರು-1239, ಮಧುಗಿರಿ-1245, ಕೊರಟಗೆರೆ-991, ಕುಣಿಗಲ್-1136, ತುರುವೇಕೆರೆ-1906, ಶಿರಾ-1906, ಗುಬ್ಬಿ-1637 ಪ್ರಕರಣಗಳು ಮೇ 1 ರಿಂದ 8ರವರೆಗೆ ದಾಖಲಾಗಿವೆ. ಮೇ ತಿಂಗಳಿನಿಂದ ಸಾವಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ತುಮಕೂರು ತಾಲ್ಲೂಕು ಸೇರಿ ಶಿರಾ, ಮಧುಗಿರಿ, ತಿಪಟೂರು, ಪಾವಗಡ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ಹೆಚ್ಚು ಸಾವು ಪ್ರಕರಣಗಳು ವರದಿಯಾಗಿವೆ.

      ಜಿಲ್ಲೆಯ 67 ಗ್ರಾಮ ಪಂಚಾಯತಿಗಳನ್ನು ಕೊರೊನಾ ಹಾಟ್‍ಸ್ಪಾಟ್‍ಗಳೆಂದು ಗುರುತಿಸಲಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ದಿನೆ ದಿನೆ ಪ್ರಕರಣಗಳು ಮರುಕಳಿಸುತ್ತಿದ್ದು, ಹಲವು ಕುಟುಂಬಗಳ ಇಡೀ ಸದಸ್ಯರು ಕೊರೊನಾ ಪಾಸಿಟಿವ್‍ಗೆ ಒಳಗಾಗಿರುವ ಉದಾಹರಣೆಗಳು ಸಾಕಷ್ಟಿವೆ. ಗುಬ್ಬಿ ತಾಲ್ಲೂಕಿನ ಗ್ರಾಮವೊಂದರಲ್ಲಿ 55 ಮಂದಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಭಯಭೀತರಾಗುತ್ತಿರುವ ಜನ :

      ನಮಗೆ ಯಾವ ಕಾಯಿಲೆಯೂ ಬರುವುದಿಲ್ಲ, ಏನಿದ್ದರೂ ನಗರಗಳಲ್ಲಿ, ಪಟ್ಟಣವಾಸಿಗಳಿಗೆ ಈ ರೋಗಗಳು ಬರುತ್ತವಷ್ಟೆ. ನಾವು ಸೇಫ್ ಆಗಿದ್ದೇವೆ ಎಂದು ಕಳೆದ ವರ್ಷ ಗ್ರಾಮೀಣರು ಎದೆತಟ್ಟಿ ಹೇಳಿಕೊಳ್ಳುತ್ತಿದ್ದರು. ಈ ವರ್ಷ ಹಳ್ಳಿ ಹಳ್ಳಿಗೂ ವೈರಸ್ ದಾಂಗುಡಿ ಇಡುತ್ತಿದ್ದು, ಮೀಸೆ ತಿರುವುತ್ತಿದ್ದವರೆಲ್ಲ ದಂಗಾಗಿ ಹೋಗಿದ್ದಾರೆ. ತಮ್ಮ ಊರಲ್ಲಿ, ಕಣ್ಣೆದುರೇ ಸೋಂಕಿಗೆ ಒಳಗಾಗುತ್ತಿದ್ದು, ಆಸ್ಪತ್ರೆಗಳಿಗೆ ಅಲೆಯುವ ಕರುಣಾಜನಕ ಸ್ಥಿತಿ ಕಂಡು ಈ ರೋಗದಿಂದ ನಾವೂ ಹೊರತಲ್ಲ ಎನ್ನುತ್ತಿದ್ದಾರೆ.

      ಕೆಮ್ಮು, ಜ್ವರ, ನೆಗಡಿ ಬಂದವರು ಮಾತ್ರೆ ಪಡೆದು ವಾಸಿ ಮಾಡಿಕೊಳ್ಳುತ್ತಿದ್ದರು. ಈಗ ರೋಗ ವಾಸಿಯಾಗುತ್ತಿಲ್ಲ. ರೋಗಲಕ್ಷಣಗಳು ಉಲ್ಬಣಿಸಿದಾಗ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಸಾವಿನಲ್ಲಿ ರೋಗಿಗಳು ಅಂತ್ಯವಾಗುತ್ತಿರುವ ಚಿತ್ರಣಗಳು ಪ್ರತಿದಿನ ವರದಿಯಾಗುತ್ತಿವೆ. ನಿತ್ಯ ವರದಿಯಾಗುವ ಕನಿಷ್ಠ 15 ಸಾವುಗಳ ಪೈಕಿ 10 ಸಾವುಗಳು ಗ್ರಾಮೀಣ ಪ್ರದೇಶದವೇ ಆಗಿವೆ ಎಂಬುದು ಇಲ್ಲಿ ಗಮನಾರ್ಹ.
 

ಪಂಚಾಯತಿಗಳು ನಿರ್ಲಕ್ಷ್ಯದಿಂದ ಹೊರಬರಲಿ :

      ಈಗಾಗಲೇ ಜಿಲ್ಲೆಯ 67 ಗ್ರಾಮ ಪಂಚಾಯತಿಗಳನ್ನು ಕೊರೊನಾ ಹಾಟ್ ಸ್ಪಾಟ್‍ಗಳೆಂದು ಗುರುತಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ತಾಲ್ಲೂಕು ಆಡಳಿತದಿಂದ ನಿಗಾ ವಹಿಸುವ ಕಾರ್ಯಗಳು ನಡೆಯಬೇಕು. ಸೋಂಕು ಇತರರಿಗೆ ಹರಡದಂತೆ ಮಾಹಿತಿ ನೀಡುವ ಮತ್ತು ಎಚ್ಚರಿಕೆ ನೀಡುವ ಹೊಣೆಗಾರಿಕೆ ಗ್ರಾಮ ಪಂಚಾಯತಿಗಳ ಮೇಲಿದೆ. ಆದರೆ ಬಹುತೇಕ ಪಂಚಾಯತಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ. ಆ ಪಂಚಾಯತಿಗಳ ಪಿಡಿಓಗಳು ಮತ್ತಷ್ಟು ಕ್ರಿಯಾಶೀಲರಾಗಬೇಕಿದೆ. ಚುನಾಯಿತ ಸದಸ್ಯರನ್ನು ಒಳಗೊಂಡು ಅಧಿಕಾರಿಗಳು ಜಾಗೃತಿ ಮೂಡಿಸುವ ಕಡೆಗೆ ಶ್ರಮ ಹಾಕಬೇಕಿದೆ. ಇಲ್ಲದೆ ಹೋದರೆ ಊರಿಗೆ ಊರೇ ರೋಗಪೀಡಿತರಾಗಿ ಮಲಗುವ ಸಂದರ್ಭ ದೂರ ಇಲ್ಲ.

 ಸ್ಥಳೀಯವಾಗಿಯೇ ಸೌಲಭ್ಯ ಸಿಗುವಂತಾಗಬೇಕು :

      ಆರಂಭದ ಸೋಂಕು ಲಕ್ಷಣ ಪತ್ತೆಯಾದ ಕೂಡಲೇ ಅಂತಹವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಪ್ರತ್ಯೇಕಿಸಿ ನಿಗಾ ವಹಿಸುವುದು ಸೂಕ್ತ. ಈಗಿನ ಪರಿಸ್ಥಿತಿಯಲ್ಲಿ ಯಾವ ತಾಲ್ಲೂಕು ಆರೋಗ್ಯ ಕೇಂದ್ರಗಳು ಸುಸ್ಥಿತಿಯಲ್ಲಿಲ್ಲ. ಉತ್ತಮ ವೈದ್ಯಕೀಯ ಸೇವೆಯಾಗಲಿ, ಸಿಬ್ಬಂದಿಯಾಗಲಿ ಎಲ್ಲ ಕಡೆ ಕಾಣಲು ಸಾಧ್ಯವಿಲ್ಲ. ಈ ಕೊರತೆ ನೀಗಿಸುವ ಕಡೆಗೆ ಸರ್ಕಾರಗಳು ಮನಸ್ಸು ಮಾಡಲೇ ಇಲ್ಲ. ಈಗ ಎದುರಾಗಿರುವ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹೋಬಳಿ ವಾರು ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಿ ಅಲ್ಲಿಯೇ ಸೂಕ್ತ ಆರೈಕೆ ವ್ಯವಸ್ಥೆಯಾಗಬೇಕು. ಅಗತ್ಯ ಇರುವವರನ್ನು ಮಾತ್ರವೇ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಬೇಕು.

      ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಈ ದಿನಗಳಲ್ಲಿ ಕೆಲವು ಕಾಯಿಲೆಗಳು ಎದುರಾಗುವುದು ಸಾಮಾನ್ಯ. ಇಂತಹ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ತಪಾಸಣೆಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ. ಗರ್ಭಿಣಿಯರು ಸೇರಿದಂತೆ ಇತರೆ ಕೆಲವು ತಪಾಸಣೆ, ನಾನ್ ಕೋವಿಡ್ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗದಿರಲಿ. ಕೋವಿಡ್ ರೋಗಿಗಳನ್ನು ನೋಡಿ ಹೆದರಿಯೇ ಬಹಳಷ್ಟು ಜನ ಆಸ್ಪತ್ರೆಗಳ ಕಡೆಗೆ ಹೋಗುತ್ತಿಲ್ಲ. ಈ ಭಯ ನಿವಾರಣೆಯಾಗಬೇಕು. ಕೋಳಾಲ ಠಾಣೆಯ ಪಿಎಸ್‍ಐ ಮಹಾಲಕ್ಷಮ್ಮ ಮತ್ತು ಸಿಬ್ಬಂದಿ ವಹಿಸಿದ್ದರು. ದಾಳಿಯ ಕುರಿತು ಎಸ್ಪಿ ಡಾ.ವಂಸಿಕೃಷ್ಣ ಅವರು ಪ್ರಶಂಸಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap