ತುಮಕೂರು :
ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾಗವಾಗಿ ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರದ ಹಲವು ಹತ್ತು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮಳೆ ಬಿಸಿಲೆನ್ನದೇ ಕಾಯ-ವಾಚಾ-ಮನಸಾ ದುಡಿಯುತ್ತಿದ್ದಾರೆ. ಸದ್ಯ ತಳಮಟ್ಟದಿಂದ ಕೋವಿಡ್ ನಿಯಂತ್ರಿಸುವಲ್ಲಿ ಇವರಿಬ್ಬರ ಅವಿರತ ಶ್ರಮದ ಸೇವೆಯನ್ನು ಪ್ರಶಂಸೆ ಮಾಡಿದವರೇ ಇಲ್ಲ. ಆದರೇ ಆಶಾ, ಅಂಗನವಾಡಿ ಕಾರ್ಯಕರ್ತರ ವಾಸ್ತವ ಪರಿಸ್ಥಿತಿ ಬೇರೆಯೇ ಇದ್ದು, ಅತ್ಯಂತ ಶೋಚನೀಯವಾಗಿದೆ. 2-3 ತಿಂಗಳಾದರೂ ಬಾರದ ವೇತನ, ಹೆಚ್ಚು ಕೆಲಸ- ಕಡಿಮೆ ಸಂಬಳ, ಖಾತರಿ ಇಲ್ಲದ ಅನಿಶ್ಚಿತ ಉದ್ಯೋಗ, ಸಾಲದ್ದಕ್ಕೆ ಈಗ ಕೊರೊನಾ ಕುರಿತು ಜಾಗೃತಿ ಮೂಡಿಸಲು ಹೋದರೇ ಜನರಿಂದ ದೌರ್ಜನ್ಯ. ಈ ರೀತಿ ರಕ್ಷಣೆ ಇಲ್ಲದೇ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ಆಶಾ-ಅಂಗನವಾಡಿ ಕಾರ್ಯಕರ್ತರ ಸದ್ಯದ ಸ್ಥಿತಿ ಅರಣ್ಯ ರೋದನವಾಗಿವೆ.
2-3ತಿಂಗಳಿನಿಂದ ಸಂಬಳವಿಲ್ಲ:
ಸದ್ಯ ಕೊರೋನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತರಿಗೆ ಮಾರ್ಚ್ ನಿಂದ ಇಲ್ಲಿಯವರೆಗೆ ಮೂರು ತಿಂಗಳು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಏಪ್ರಿಲ್, ಮೇ ಎರಡು ತಿಂಗಳ ಗೌರವಧನ ಇದುವರೆಗೆ ಬಿಡುಗಡೆಯಾಗಿಲ್ಲ. ಕೊರೊನಾ, ಲಾಕ್‍ಡೌನ್ ನಂತಹ ಆರ್ಥಿಕ ಸಂದಿಗ್ಧ ಕಾಲದಲ್ಲಿ ಸರ್ಕಾರವು ಕೊಡುವ ಸ್ವಲ್ಪ ಗೌರವ ಧನವನ್ನೂ ಸಕಾಲಕ್ಕೆ ಮಂಜೂರು ಮಾಡದೇ ಇರುವುದು ಸಹಸ್ರಾರು ಬಡ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಜೀವನ ನಿರ್ವಹಣೆಗೆ ಅಡಚಣೆಯುಂಟು ಮಾಡಿದ್ದು ಅಕ್ಕ ಪಕ್ಕದ ಮನೆಯವರಿಂದ ಕೈ ಸಾಲ, ದಾನಿಗಳು ನೀಡುವ ದಿನಸಿ ಕಿಟ್ ಪಡೆದು ಜೀವನ ಸಾಗಿಸುವ ದುಸ್ಥಿತಿ ತಳ ಮಟ್ಟದ ಈ ಕಾರ್ಯಕರ್ತರಿಗೆ ಬಂದೊದಗಿದೆ.
ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ: ಕೊರೊನಾ ನಿಯಂತ್ರಿಸುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೇಲೆ ಜಿಲ್ಲೆಯಾದ್ಯಂತ ಅಲಲ್ಲಿ ದೌರ್ಜನ್ಯ, ಹಲ್ಲೆ, ಅವಾಚ್ಯ ಶಬ್ಧಗಳ ನಿಂದನೆಯಂತಹ ಕೃತ್ಯಗಳು ನಡೆದು ರಕ್ಷಣೆಗಾಗಿ ಪೊಲೀಸ್ ಮೆಟ್ಟಿಲೇರಿದ ಪ್ರಕರಣಗಳು ವರದಿಯಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಈ ತರಹದ ಪ್ರಕರಣಗಳು ಹೆಚ್ಚಿದ್ದು, ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿ ಮತ್ತು ಕುಟುಂಬದವರು ಸೋಂಕಿನ ವಿರುದ್ಧ ಅರಿವು ಮೂಡಿಸಲು ಹೋದ ಆಶಾ, ಅಂಗನವಾಡಿ ಕಾರ್ಯಕರ್ತರ ಜೊತೆ ವಾಗ್ವಾದ, ಜಗಳ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಸೋಂಕಿತರನ್ನು ಜನರು ಅಸ್ಪøಶ್ಯರಂತೆ ಕಾಣುತ್ತಿರುವುದರಿಂದ ಕೊರೊನಾ ಪೀಡಿತರು ಮತ್ತು ಕುಟುಂಬ ಅವಮಾನಕ್ಕೆ ಅಂಜಿ ಸೋಂಕು ಬಂದಿರುವುದನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ಈ ವಿಷಯ ಆಶಾ, ಅಂಗವಾಡಿಯವರಿಗೆ ಗೊತ್ತಾಗಿ ಅವರು ಸೋಂಕಿತರ ಮನೆ ಬಳಿ ಹೋಗಿ ಕ್ಯಾರಂಟೈನ್, ಹೋಮ್‍ಐಸೊಲೇಷನ್ ಎಂದಾಗ ಅಲ್ಲಿಂದ ಶುರುವಾಗುತ್ತೆ ಸಮಸ್ಯೆ. ಆಗ ಸೋಂಕಿತರು ಅವರ ಕುಟುಂಬ ವರ್ಗ ಅಸಹನೆಯಿಂದ ಇವರ ಜೊತೆ ವಾದಕ್ಕಿಳಿದು ಜಗಳವಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಬಹುಪಾಲು ಆಯಾ ಊರಿವರೇ ಆಗಿರುವ ಕಾರಣ ಜನರು ಅವರನ್ನು ಸದರ ಮಾಡಿಕೊಂಡು ಅವರ ವಿರುದ್ಧ ಹೆಚ್ಚು ಕ್ಯಾತೆ ತೆಗೆಯುತ್ತಿದ್ದಾರೆ.
ಹೆಚ್ಚು ಕೆಲಸ, ಕಡಿಮೆ ಸಂಬಳ:
ಅಂಗನವಾಡಿ ಕಾರ್ಯಕರ್ತರು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವುದರ ಜೊತೆಗೆ ಚುನಾವಣಾ ಕೆಲಸ, ಶಾಲೆ ಬಿಟ್ಟ ಮಕ್ಕಳು ಮತ್ತು ಅಂಗವಿಕಲರ ಸರ್ವೆ, ಭಾಗ್ಯಲಕ್ಷ್ಮೀ, ಮಾತೃವಂದನಾ ಯೋಜನೆ, ಪೋಲಿಯೋ ಲಸಿಕೆ ಹಾಕಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಸ ಯೋಜನೆಗಳ ಅನುಷ್ಠಾನದ ಜೊತೆಗೆ ಹಲವು ದಾಖಲಾತಿಗಳ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ.
ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ, ಗ್ರಾಮೀಣ ಆರೋಗ್ಯ ಮತ್ತು ನೈರ್ಮಲ್ಯ ಸಭೆ ನಡೆಸುವುದು, ಆರೋಗ್ಯ ಕೇಂದ್ರಕ್ಕೆ ಭೇಟಿ, ದಾಖಲಾತಿ ನಿರ್ವಹಣೆ, ಬಾಣಂತಿಯರು, ಮಕ್ಕಳ ಆರೋಗ್ಯ ಕಾಳಜಿ, ಔಷಧ ವಿತರಣೆ, ಗರ್ಭಿಣಿಯರ ಆಪ್ತ ಸಮಾಲೋಚನೆ ಮುಂತಾದ ಕೆಲಸಗಳ ಜೊತೆಗೆ ಕಳೆದ ಒಂದು ವರ್ಷದಿಂದ ಕೊರೊನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿದ್ದಾರೆ. ಇವಿಷ್ಟೂ ಕೆಲಸ ಮಾಡಿದರೂ ಅಂಗನವಾಡಿಯವರಿಗೆ 10 ಸಾವಿರ ರೂ. ಆಶಾಗಳಿಗೆ 4 ಸಾವಿರ ರೂ. ಗೌರವ ಧನ ನೀಡುತ್ತಿದ್ದು ಇವರ ಸ್ಥಿತಿ ಹೆಚ್ಚು ಕೆಲಸ, ಕಡಿಮೆ ಸಂಬಳ ಎಂಬಂತಾಗಿದೆ. ಸದ್ಯ ಕೊರೊನಾ ವಾರಿಯರ್ಸ್‍ಗಳಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತರು ಮೃತರಾದರೇ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಿಂದ 50 ರೂ.ಲಕ್ಷ ಪರಿಹಾರವನ್ನು, ಅಂಗನವಾಡಿ ಕಾರ್ಯಕರ್ತರಿಗೆ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಧಿಯಿಂದ 30 ಲಕ್ಷ ರೂ.ಪರಿಹಾರ ಧನ ಘೋಷಿಸಿರುವುದು ಸದ್ಯ ಸಮಾಧಾನ ಪಟ್ಟುಕೊಳ್ಳುವ ಸಂಗತಿಯಾಗಿದೆ.
ಸರ್ಕಾರದ ಮಲತಾಯಿ ಧೋರಣೆ:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಹತ್ತು ಯೋಜನೆಗಳ ಅನುಷ್ಠಾನ ಕಾರ್ಯದಲ್ಲಿ ಸಕ್ರೀಯರಾಗಿ ಮುಂಚೂಣಿಯಲ್ಲಿ ನಿಲ್ಲುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸೌಲಭ್ಯ ಕಲ್ಪಿಸುವ ವಿಚಾರ ಬಂದಾಗಲೆಲ್ಲಾ ಈ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸಿ, ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಮಾಡುತ್ತಿವೆ ಎಂಬ ಆರೋಪಗಳನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಘಟನೆಗಳು ಮಾಡಿವೆ. ತನ್ನ ನೌಕರರಿಗೆ ಐದಂಕಿ, ಆರಂಕಿ ಸಂಬಳ ನೀಡುವ ಸರ್ಕಾರಗಳು ನಮಗೆ ಮಾತ್ರ ಜೀವನ ನಿರ್ವಹಣೆಯೂ ಸಾಧ್ಯವಾಗದ ಕನಿಷ್ಠ ಗೌರವ ಧನ ನೀಡುತ್ತಿದೆ. ಇದಕ್ಕೆ ಕಾರಣ ಸರ್ಕಾರ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸದೇ ಇರುವುದು. ಆದ್ದರಿಂದ ಪ್ರಸ್ತುತ ಕೊರೋನಾ ಸಂದರ್ಭದ ನಮ್ಮ ದಣಿಯರಿಯದ ಅವಿಸ್ಮರಣೀಯ ಸೇವೆಯನ್ನಾದರೂ ಪರಿಗಣಿಸಿ ಸರ್ಕಾರ ಮುಂದಿನ ದಿನಗಳಲ್ಲಾದರೂ ನಮ್ಮನ್ನೂ ಸಹ ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಎರಡೂ ಸಂಘಟನೆಗಳು ಒತ್ತಾಯಿಸಿವೆ.
ಆನ್‍ಲೈನ್ ಚಳುವಳಿ:
ಜಿಲ್ಲೆಯಾದ್ಯಂತ ಈಗಾಗಲೇ ಸರ್ಕಾರದ ನಡೆ ಖಂಡಿಸಿ ಹಾಗೂ ತಮ್ಮ ಬೇಡಿಕೆಗಾಗಿ ಆಯಾ ತಾಲೂಕುಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಗಮನ ಸೆಳೆಯಲು ಆನ್‍ಲೈನ್ ಪ್ರತಿಭಟನೆಯನ್ನು ತಮ್ಮ ತಮ್ಮ ಮನೆ ಹಾಗೂ ಕೆಲಸದ ಸ್ಥಳಗಳಿಂದ ನಡೆಸಿದ್ದಾರೆ. ರಾಜ್ಯವ್ಯಾಪಿ ಹೋರಾಟದ ಕರೆಯ ಮೇರೆಗೆ ಜಿಲ್ಲೆಯಲ್ಲಿಯೂ ಆಶಾ ಕಾರ್ಯಕರ್ತೆಯರು ಆನ್‍ಲೈನ್ ಪ್ರತಿಭಟನೆ ನಡೆಸಿ ಪ್ರತಿಭಟನೆಯ ಫೋಟೋಗಳನ್ನು ವಿವಿಧ ಸಾಮಾಜಿಕಜಾಲ ತಾಣದಲ್ಲಿ ಹರಿಯಬಿಡುವ ಮೂಲಕ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗೆ ತಮ್ಮ ಹಕ್ಕೊತ್ತಾಯಗಳಿಗೆ ಪರಿಹಾರ ಒದಗಿಸಬೇಕೆಂದು ಗಮನ ಸೆಳೆದಿದ್ದಾರೆ.
ಬಾಕ್ಸ್ ಮಾಡಿ:
ಆಶಾ, ಅಂಗನವಾಡಿ ಯೋಜನೆಗಳ ಹಿನ್ನೆಲೆ:
2005 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಂಗವಾಗಿ ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಘಟಕವಾಗಿ ಗ್ರಾಮೀಣ ಪ್ರದೇಶದಲ್ಲಿ ‘ಆಶಾ’ (ASHA: About Accredited Social Health Activist), ನಗರ ಪ್ರದೇಶದಲ್ಲಿ ‘ಉಷಾ’ (USHA :Urban Social Health Activist), (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು, ಈ ಕಾರ್ಯಕ್ರಮವನ್ನು ಪರಿಚಯಿಸಲಾಯಿತು.
ಅಂಗನವಾಡಿ, ಭಾರತದ ಒಂದು ರೀತಿಯ ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರವಾಗಿದೆ. ಮಕ್ಕಳ ಹಸಿವು ಮತ್ತು ಅಪೌಷ್ಟಿಕತೆಯನ್ನು ಎದುರಿಸಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಾರ್ಯಕ್ರಮದ ಭಾಗವಾಗಿ 1975 ರಲ್ಲಿ ಭಾರತ ಸರ್ಕಾರ ಅಂಗನವಾಡಿಗಳನ್ನು ಪ್ರಾರಂಭಿಸಿತು. ಅಂಗನವಾಡಿ ಎಂದರೆ ಹಿಂದಿಯಲ್ಲಿ “ಅಂಗಳ ಆಶ್ರಯ”.
ಪತ್ರಬರೆದ ಸಿದ್ದರಾಮಯ್ಯ:
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರೂ ಸೇರಿದಂತೆ ಕೊರೋನಾ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಇಲಾಖೆಗಳ ನೌಕರರ ಆರೋಗ್ಯ, ವೇತನ, ಕುಂದು-ಕೊರತೆ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇ.25 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಆಶಾ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯ 32 ರೀತಿಯ ಕಡ್ಡಾಯ ಕೆಲಸಗಳಿದ್ದು, ಉಳಿದಂತೆ ಸರ್ಕಾರದ ಇತರೆ ಆರೋಗ್ಯ ಯೋಜನೆಗಳನ್ನು ತಳಮಟ್ಟದಲ್ಲಿ ಅನುಷ್ಠಾನ ಗೊಳಿಸುವ ಜವಾಬ್ದಾರಿ ಇರುತ್ತದೆ. ನಾವು ಎಷ್ಟು ಕೆಲಸ ಮಾಡುತ್ತೇವೆಯೋ ಅಷ್ಟು ಪ್ರೋತ್ಸಾಹಧನವನ್ನು ಇಲಾಖೆ ಮಂಜೂರು ಮಾಡುತ್ತದೆ. ನಾವು ಕೆಲಸ ಮಾಡಿದ ಪ್ರತಿ ವಿವರವನ್ನು ದಾಖಲೆ ಸಮೇತ ಆಶಾ ಸಾಫ್ಟ್‍ವೇರ್‍ನಲ್ಲಿ ಎಂಟ್ರಿ ಮಾಡಿಸಬೇಕು. ಪ್ರಾ.ಆ.ಕೇಂದ್ರಗಳ ವೈದ್ಯರು, ನರ್ಸ್‍ಗಳೇ ಸದ್ಯ ಈ ಸಾಫ್ಟ್‍ವೇರನ್ನು ನಿರ್ವಹಣೆ ಮಾಡುತ್ತಿದ್ದು ಅವರಿಗೂ ಕಾರ್ಯ ಒತ್ತಡವಿರುವುದರಿಂದ ಸಾಫ್ಟ್‍ವೇರ್ ನಿರ್ವಹಣೆಯಲ್ಲಿ ತಪ್ಪುಗಳಾಗಿ ಪ್ರೋತ್ಸಾಹ ಧನಕ್ಕೆ ಎಡವಟ್ಟಾಗಿದ್ದಿದೆ. ಆದ್ದರಿಂದ ಸಾಫ್ಟ್‍ವೇರ್ ನಿರ್ವಹಣೆಗಾಗಿಯೇ ಪ್ರತ್ಯೇಕ ಸಿಬ್ಬಂದಿಯನ್ನು ಪ್ರತಿ ಪ್ರಾ.ಆ.ಕೇಂದ್ರದಲ್ಲೂ ನೇಮಿಸಿ ಸಾಫ್ಟ್‍ವೇರ್ ಸೂಕ್ತವಾಗಿ ಕಾರ್ಯಚರಿಸಲು ಕ್ರಮ ಕೈಗೊಳ್ಳಬೇಕು.
-ಮಂಜುಳ ಗೋನವಾರ, ಜಿಲ್ಲಾ ಸಂಚಾಲಕರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘಟನೆ (ರಿ)
ಆರ್ಥಿಕ ಇಲಾಖೆಯಿಂದ ತಾಂತ್ರಿಕ ಸಮಸ್ಯೆಯಾದ ಕಾರಣ ಅಂಗನವಾಡಿ ಕಾರ್ಯಕರ್ತರಿಗೆ ಎರಡು ತಿಂಗಳಿನಿಂದ ಗೌರವ ಧನ ಬಿಡುಗಡೆಯಾಗಿಲ್ಲ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದು ಮುಂದಿನ ಒಂದು ವಾರದ ಒಳಗೆ ಗೌರವಧನ ಸಮಸ್ಯೆ ಬಗೆಹರಿಯಲಿದೆ.
-ನಟರಾಜ್.ಎಸ್, ಜಿಲ್ಲಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
ಆಶಾ ಕಾರ್ಯಕರ್ತರಿಗೆ ಗೌರವ ಧನ ಬಿಡುಗಡೆಯ ಹಂತದಲ್ಲಿದೆ. ಕೇಂದ್ರದ ಶೇ.50 ರಷ್ಟು ಗೌರವಧನ ಎನ್‍ಹೆಚ್‍ಎಮ್‍ಎಲ್ ನಿಂದ ಬಿಡುಗಡೆಯಾಗಿದ್ದು, ಉಳಿದ ಶೇ.50 ರಷ್ಟು ಗೌರವ ಧನ ಬಿಡುಗಡೆಗಾಗಿ ರಾಜ್ಯ ಖಜಾನೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಆಶಾ ಕಾರ್ಯಕರ್ತರ ಖಾತೆಗೆ ನೇರವಾಗಿ ಗೌರವ ಧನ ಜಮೆಯಾಗಲಿದೆ.
-ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
-ಚಿದಾನಂದ್ ಹುಳಿಯಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ