ತುಮಕೂರು : ಸಮಾರಂಭಗಳಿಲ್ಲದೆ ಗೋಡೌನ್‍ಗಳಲ್ಲಿ ಹಾಳಾಗುತ್ತಿದೆ ದಾಸ್ತಾನು!!

 ತುಮಕೂರು : 

      ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಈ ಒಂದೆರಡು ತಿಂಗಳ ಕಾಲ ಕೆಲವು ವಸ್ತುಗಳಿಗೆ ಭಾರಿ ಬೇಡಿಕೆ. ಈ ಅವಧಿಯಲ್ಲೇ ಮದುವೆ, ಜಾತ್ರೆ, ಹಬ್ಬ ಹರಿದಿನಗಳು ಹೆಚ್ಚಾಗಿ ನಡೆಯುವುದರಿಂದ ಈ ಸಮಾರಂಭಗಳಿಗಾಗಿಯೇ ಕಾಯುವವರು ಇದ್ದಾರೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಕೊರೊನಾ ಲಾಕ್‍ಡೌನ್ ಹೇರಲ್ಪಟ್ಟು ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಅಂಗಡಿಗಳಲ್ಲಿ ಸಾಕಷ್ಟು ದಾಸ್ತಾನು ಇದ್ದರೂ ಅದನ್ನು ಮಾರಲಾಗದೆ, ವಿತರಿಸಲಾಗದೆ ಅಲ್ಲಿಯೇ ಕೊಳೆಯುತ್ತಿದೆ. ಜೀವನಾವಶ್ಯಕ ವಸ್ತುಗಳಾದ ಹಾಗೂ ಸಮಾರಂಭಗಳಿಗೆ ಬೇಕಾದ ರವೆ, ಮೈದಾ, ಗೋಡಂಬಿ, ಮತ್ತಿತರ ಹಾಳಾಗುವ ಪದಾರ್ಥಗಳು ಗೋಡೌನ್‍ಗಳಲ್ಲಿ ಹುಳ ಹಿಡಿಯತೊಡಗಿವೆ.

      ಒಂದು ಕಡೆ ಗೋಡೌನ್‍ಗಳಲ್ಲಿ ಕೆಲವು ಅಗತ್ಯ ವಸ್ತುಗಳು ಹುಳ ಹಿಡಿಯುತ್ತಿದ್ದರೆ, ರೀಟೇಲ್ ಅಂಗಡಿಗಳಲ್ಲಿ ಬೇಡಿಕೆ ಸೃಷ್ಟಿಯಾಗುತ್ತಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಚಿಲ್ಲರೆಯಾಗಿ ಮಾರಾಟ ಮಾಡುವ ಅಂಗಡಿಗಳಿಗೆ ಕೊರತೆಯಾಗಿಲ್ಲ. ಹೋಲ್‍ಸೇಲ್ ದರದಲ್ಲಿ ಖರೀದಿಸಿ ಸ್ಥಳೀಯವಾಗಿ ಹೆಚಿನ ದರಕ್ಕೆ ಮಾರಿಕೊಳ್ಳುತ್ತಿರುವ ಪ್ರಸಂಗಗಳು ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಿದೆ.

      ಹಾಸ್ಟೆಲ್‍ಗಳು ನಡೆಯುತ್ತಿಲ್ಲ. ಪಿಜಿಗಳು ಬಂದ್ ಆಗಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಬಾಗಿಲು ಮುಚ್ಚಿವೆ. ಛತ್ರಗಳಲ್ಲಿನ ವಿವಾಹಗಳಿಗೆ ಅವಕಾಶವಿಲ್ಲ. ಧಾರ್ಮಿಕ ಕಾರ್ಯಗಳು ನಡೆಯುವಂತಿಲ್ಲ. ಸಭೆ, ಸಮಾರಂಭಗಳೆಲ್ಲ ಬಂದ್ ಆಗಿವೆ. ಈ ಎಲ್ಲ ಸಮಾರಂಭಗಳಿಗೆ ಪೂರೈಕೆಯಾಗಬೇಕಿದ್ದ ದಾಸ್ತಾನು ಅಂಗಡಿಗಳಲ್ಲಿಯೇ ಇದೆ. ಟನ್‍ಗಟ್ಟಲೆ, ಲೋಡ್‍ಗಟ್ಟಲೆ ದಿನಸಿ ಪದಾರ್ಥಗಳು, ಸಮಾಋಂಭಗಳಿಗೆ ಪೂರೈಕೆಯಾಗಬೇಕು. ಲಾಕ್‍ಡೌನ್‍ಗೂ ಮುನ್ನ ಬಹಳಷ್ಟು ಕಡೆಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ. ಆದರೆ ಸಮಾರಂಭಗಳೇ ಇಲ್ಲದಿರುವ ಕಾರಣ ವಿತರಣೆಯಾಗುತ್ತಿಲ್ಲ. ಅಂಗಡಿಗಳಲ್ಲಿ ಮತ್ತು ಗೋಡೌನ್‍ಗಳಲ್ಲಿ ಗಾಳಿ ಆಡದೆ ಇರುವುದರಿಂದ ರವೆ, ಮೈದಾ, ಸೇರಿದಂತೆ ಕೆಲವು ಬೇಗನೆ ಹಾಳಾಗುವ ಪದಾರ್ಥಗಳು ಹುಳ ಹಿಡಿದಿವೆ.

      ಹೋಟೆಲ್ ಉದ್ಯಮ, ಮದುವೆ ಸಮಾರಂಭಗಳು ನಡೆಯುತ್ತಿದ್ದರೆ, ಸಾಕಷ್ಟು ದಾಸ್ತಾನು ಹೊರಗೆ ಹೋಗುತ್ತಿತ್ತು. ಎಲ್ಲರೂ ಈಗ ಮನೆಯಲ್ಲಿಯೇ ಇರುವುದರಿಂದ ತಮ್ಮ ಮನೆಗೆ ಸಾಕಾಗುವಷ್ಟು ಸರಕನ್ನು ಮಾತ್ರವೇ ಖರೀದಿಸುತ್ತಿದ್ದಾರೆ. ಹಣ ಇರುವವರು ಹೆಚ್ಚೆಂದರೆ ಒಂದು ಅಥವಾ ಎರಡು ತಿಂಗಳಿಗಾಗುವಷ್ಟು ಖರೀದಿಸಬಹುದಷ್ಟೆ. ಉಳಿದ ಬಹಳಷ್ಟು ಮಂದಿ ಗ್ರಾಂ ಲೆಕ್ಕದಲ್ಲಿ ಚಿಲ್ಲರೆ ಅಥವಾ ಬಡಾವಣೆಗಳ ಅಂಗಡಿಗಳಲ್ಲಿ ಖರೀದಿಸುವುದೇ ಹೆಚ್ಚು. ಹೀಗಾಗಿ ಹೋಲ್ ಸೇಲ್ ದರದಲ್ಲಿ ದಿನಸಿ ಪದಾರ್ಥಗಳು ವಿತರಣೆಯಾಗುತ್ತಿಲ್ಲ.
ಪರಿಸ್ಥಿತಿ ಹೀಗಿದ್ದರೂ ಕೆಲವು ಕಡೆ ರೀಟೈಲ್ ವ್ಯಾಪಾರದಾರರು ಗ್ರಾಹಕರಿಗೆ ವಾಸ್ತವ ಸ್ಥಿತಿಯನ್ನು ಮರೆಮಾಚಿ ದಾಸ್ತಾನು ಇಲ್ಲ, ಪೂರೈಕೆಯಾಗುತ್ತಿಲ್ಲ ಎಂದು ಹೇಳುತ್ತಾ ಬೇಡಿಕೆ ಸೃಷ್ಟಿಸುತ್ತಿದ್ದಾರೆ. ತುಮಕೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಮಂಡಿಪೇಟೆ ಮತ್ತು ಕೆಲವು ಅಂಗಡಿಗಳಲ್ಲಿ ಸಿಗುವ ದರಕ್ಕೂ ಇತರೆ ಕಡೆಗಳಲ್ಲಿ ಸಿಗುವ ದರಕ್ಕೂ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತಿವೆ. ಲಾಕ್‍ಡೌನ್ ಇರುವ ಕಾರಣ ಈ ದಿನಸಿ ಇಲ್ಲದೆ ಇರಬಹುದು. ಅದಕ್ಕಾಗಿ ದರ ಹೆಚ್ಚಳವಾಗಿದೆ ಎಂದುಕೊಂಡು ಗ್ರಾಹಕರು ಸೈಲೆಂಟ್ ಆಗುತ್ತಿದ್ದಾರೆ.

ಕೊಳ್ಳಲು ಹಿಂದು-ಮುಂದು :

      ಹಣಕಾಸು ಚೈತನ್ಯ ಕಳೆದುಕೊಳ್ಳುತ್ತಿರುವ ವರ್ಗ ದೈನಂದಿನ ಜೀವನೋಪಾಯಕ್ಕಾಗಿ ಬೇಕಾಗಿರುವ ಅಗತ್ಯ ವಸ್ತುಗಳನ್ನು ಕೊಳ್ಳಲು ಹಿಂದು-ಮುಂದು ನೋಡುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಬೆಳೆಯುತ್ತಿರುವ ತರಕಾರಿ, ಹಣ್ಣು, ಸೊಪ್ಪು ಹೊಲಗಳಲ್ಲಿಯೆ ಕೊಳೆಯುತ್ತಿದರೆ, ನಗರ ಪ್ರದೇಶಗಳಲ್ಲಿ ಇದಕ್ಕೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಹಳ್ಳಿಗಳಿಂದ ನಗರಗಳಿಗೆ ಪೂರೈಕೆಯಾಗುತ್ತಿರುವ ಹಣ್ಣು, ತರಕಾರಿ ಕಡಿಮೆಯಾಗುತ್ತಿದೆ. ತರಕಾರಿ ಮಾರುಕಟ್ಟೆಗಳು ಬಂದ್ ಆಗಿವೆ. ಇದರ ಪರಿಣಾಮ ಎನ್ನುವಂತೆ ನಗರದ ಒಳಗೆ ಇರುವ ರಸ್ತೆ ಬದಿಯ ತರಕಾರಿ ವ್ಯಾಪಾರಿಗಳು ಹಾಗೂ ಅಂಗಡಿಗಳಲ್ಲಿ ಸಿಗುವ ತರಕಾರಿ ಹಣ್ಣುಗಳ ಬೆಲೆ ಹೆಚ್ಚಾಗುತ್ತಲೆ ಇದೆ.

ಗ್ರಾಮಾಂತರ ಪ್ರದೇಶಗಳಲ್ಲಿ ತೊಗರಿಬೇಳೆ, ಸಕ್ಕರೆ, ಬೆಲ್ಲ ಇವುಗಳ ಬೆಲೆಯೂ ದುಬಾರಿಯಾಗಿದೆ. ಕೆ.ಜಿ. ತೊಗರಿ ಬೇಳೆಯ ಬೆಲೆ 90 ರೂ.ಗಳಿಗೆ ಸಿಗುತ್ತಿತ್ತು. ಈಗ ಇದರ ಬೆಲೆ 150 ರೂ.ಗಳವರೆಗೂ ಮಾರಾಟವಾಗುತ್ತಿದೆ. ಸಕ್ಕರೆ 38 ರೂ.ಗಳಿಗೆ ಸಿಗುತ್ತಿತ್ತು. ಈಗ ಇದರ ಬೆಲೆ 45 ರಿಂದ 50 ರೂ.ಗಳವರೆಗೂ ಮಾರಾಟವಾಗುತ್ತಿದೆ. ಅದೇ ರೀತಿ ಬೆಲ್ಲದ ಬೆಲೆಯೂ ಕೂಡ ಹೆಚ್ಚಳವಾಗಿದೆ. ನಗರ ಪ್ರದೇಶಗಳ ಕೆಲವು ಕಡೆ ಈ ದರ ಇರುವ ಬಗ್ಗೆ ಕೆಲವರು ಹೇಳುತ್ತಿದ್ದಾರೆ.

      ಕೆಲವೆ ತರಕಾರಿ ಮತ್ತು ಹಣ್ಣುಗಳ ಧಾರಣೆ ಸ್ಥಿರತೆ ಹೊಂದಿದ್ದು, ಉಳಿದ ತರಕಾರಿಗಳ ಬೆಲೆ ಗಗನಕ್ಕೆ ಏರುತ್ತಿದೆ. ಹುರುಳಿ, ಕ್ಯಾರೆಟ್, ಬೆಂಡೆಕಾಯಿ, ಆಲೂಗೆಡ್ಡೆ, ಬದನೆಕಾಯಿ ಇತ್ಯಾದಿಗಳು ಏರುಗತಿಯಲ್ಲೆ ಇವೆ. ಅದರಲ್ಲೂ ತೆಂಗಿನ ಕಾಯಿಯಂತೂ ದುಬಾರಿ ಬೆಲೆ ತೆತ್ತು ತರಬೇಕಾಗಿದೆ. ಇದ್ದುದರಲ್ಲಿ ಕಡಿಮೆ ದರದಲ್ಲಿ ಸಿಗುತ್ತಿರುವುದು ಟೊಮ್ಯಾಟೊ ಮಾತ್ರ.

      ಹೂ ಬೆಳೆದ ರೈತರಂತೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಬಾರಿ ಒಳ್ಳೆಯ ದರ ಸಿಗುತ್ತದೆ ಎಂಬ ರೈತರ ಆಸೆಗೆ ಕೊರೊನಾ ಕೊಳ್ಳಿ ಇಟ್ಟಿತು. ಕೆಲವು ರೈತರು ತಾವು ಬೆಳೆದ ಹೂವಿನ ಗಿಡಗಳನ್ನೇ ಕಿತ್ತು ಹಾಕುತ್ತಿದ್ದರೆ ಇನ್ನು ಕೆಲವು ರೈತರು ಗಿಡಗಳಲ್ಲೆ ಹೂವನ್ನು ಬಿಟ್ಟು ಬಿಟ್ಟಿದ್ದಾರೆ. ಹೀಗಾದರೆ ತಾವುಗಳು ಮಾಡಿರುವ ಸಾಲ ತೀರಿಸುವ ಬಗೆಯಾದರೂ ಹೇಗೆ ಎಂದು ರೈತರು ನೊಂದು ನುಡಿಯುತ್ತಾರೆ.
ಕೊತ್ತಂಬರಿ ಸೊಪ್ಪು ಕೆ.ಜಿ.ಗೆ 80 ರೂ, ಮೆಂತ್ಯ ಸೊಪ್ಪು 50 ಹೀಗೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೋಲ್‍ಸೇಲ್ ದರದಲ್ಲಿ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರದಲ್ಲಿ ಈ ದರ ಇನ್ನೂ ಹೆಚ್ಚಳವಾಗುತ್ತಿದೆ.

      ಹಣ್ಣುಗಳ ಧಾರಣೆಯೂ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಳೆಗೊನೆ ತೋಟಗಳಲ್ಲಿಯೆ ಹಾಳಾಗಿ ಮಣ್ಣು ಪಾಲಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ಅವಕಾಶವಿಲ್ಲ. ತೆಗೆದುಕೊಂಡು ಹೋದರೂ ಕೆ.ಜಿ.ಗೆ ಕೇವಲ 8 ರಿಂದ 12 ರೂ.ಗಳವರೆಗೆ ಮಾತ್ರ ಖರೀದಿಸುತ್ತಾರೆ. ಹೀಗಾಗಿ ರೈತರು ಬಾಳೆಗೊನೆ ಮಾರಾಟ ಮಾಡುವುದನ್ನೆ ನಿಲ್ಲಿಸಿದ್ದಾರೆ. ತಮಗೆ ಬೇಕಾದವರಿಗೆ ಉಚಿತವಾಗಿ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.

      ಇನ್ನು ಹಲಸಿನ ಹಣ್ಣುಗಳು ಸಹ ಮರಗಳಲ್ಲಿಯೆ ಕೊಳೆತು ಹೋಗುತ್ತಿವೆ. ಹಣ್ಣುಗಳು ಕೋತಿ, ಪ್ರಾಣಿ-ಪಕ್ಷಿಗಳ ಪಾಲಾಗುತ್ತಿವೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅಡ್ಡಿ ಇಲ್ಲ ಎಂದೇಳಿದರೂ ಅದನ್ನು ನಗರಕ್ಕೆ ತಂದು ಮಾರಾಟ ಮಾಡಲು ಹೋದರೆ ಪೊಲೀಸರು ನಗರದೊಳಕ್ಕೆ ಬಿಡುತ್ತಿಲ್ಲ. ಈ ರೀತಿಯಾದರೆ ಏನು ಮಾಡುವುದು..? ಯಾರ ಬಳಿ ನಮ್ಮ ಗೋಳು ಹೇಳುವುದು ಎನ್ನುತ್ತಾರೆ ರೈತಾಪಿ ವರ್ಗ.
ಇನ್ನೊಂದೆಡೆ ನಗರ ಮತ್ತು ಪಟ್ಟಣದ ಹೊರವಲಯದಲ್ಲಿ ಸಂಪರ್ಕ ಹೊಂದಿರುವವರು ಅಲ್ಲಿ 15 ರಿಂದ 20 ರೂ.ಗಳಿಗೆ ಖರೀದಿಸಿ, ನಗರದಲ್ಲಿ 40 ರಿಂದ 50 ರೂ.ಗಳಿಗೆ ಕೆ.ಜಿ.ಯಂತೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಸೇಬು, ದಾಳಿಂಬೆ ಧಾರಣೆ ಮಾತನಾಡಿಸಲಾರದಂತಹ ಪರಿಸ್ಥಿತಿಯಲ್ಲಿದೆ. ಕೆ.ಜಿ. 200 ರ ಗಡಿ ದಾಟಿ ಮುಂದೆ ಹೋಗಿದೆ. ಮೂಸಂಬಿ ಬೆಲೆಯೂ ಸಹ ಸೇಬಿನ ಬೆಲೆಯ ಸಮೀಪಕ್ಕೆ ಬಂದು ನಿಂತಿದೆ.

     ಪಪ್ಪಾಯಿ ಹಳ್ಳಿಗಳಲ್ಲಿ ಕೊಳೆಯುತ್ತಿದ್ದರೆ, ಇಲ್ಲಿ ಕೆ.ಜಿ.ಗೆ 40 ರೂ.ಗಳಂತೆ ಮಾರಾಟವಾಗುತ್ತಿದೆ. ಕೋವಿಡ್ ಸಮಯದಲ್ಲಿ ಪಪ್ಪಾಯಿ ಹಣ್ಣಿಗೆ ಬೇಡಿಕೆ ಇರುವುದರಿಂದ ಹೆಚ್ಚು ಖರೀದಿಯಾಗುತ್ತಿದೆ.

      ಕಳೆದ 15 ದಿನಗಳಿಂದ ಪೈನಾಪಲ್ ಬೆಲೆ ಕುಸಿತ ಕಾಣುತ್ತಿದ್ದು, ಅಲ್ಲಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಒಂದರಿಂದ ಒಂದೂವರೆ ಕೆ.ಜಿ. ಗಾತ್ರದ ಒಂದೊಂದು ಪೈನಾಪಲ್‍ಗಳು 50 ರೂ.ಗಳಿಗೆಲ್ಲಾ ಸಿಗುತ್ತಿದೆ. ಹಿಂದೆ 70 ರಿಂದ 80 ರೂ.ಗಳಿಗೆ ಮಾರಾಟವಾಗುತ್ತಿತ್ತು.

ಕೆಲವು ಪದಾರ್ಥಗಳ ದರ ವಿವರ :

US retailers' rising inventories dampen freight growth outlook

   ತುಮಕೂರು ಮಂಡಿಪೇಟೆಯಲ್ಲಿ ಮಾರಾಟವಾಗುತ್ತಿರುವ ದಿನಸಿ ಪದಾರ್ಥಗಳ ವಿವರ ಹೀಗಿದೆ:

ಸಕ್ಕರೆ -35 ರಿಂದ 37 ರೂ.
ರವೆ- 32 ರಿಂದ 35 ರೂ.
ಬೆಲ್ಲ- 45 ರೂ.ಗಳು
ಬೇಳೆ-100 ರಿಂದ 110 ರೂ.ಗಳು
ಮೆಣಸಿನ ಕಾಯಿ-300 ರಿಂದ 320

ಹೆಚ್ಚು ಬೇಡಿಕೆಯೇ ಬಂಡವಾಳವಾಗುತ್ತಿದೆ :

      ನಗರದಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೆ ಕೆಲವು ಅಂಗಡಿಗಳಲ್ಲಿ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಮಾರಾಟಗಾರರು ಸಿಕ್ಕಿದಷ್ಟು ದರಕ್ಕೆ ಮಾರುತ್ತಿರುವ ಪ್ರಸಂಗಗಳೂ ಕಂಡುಬಂದಿವೆ. ಕೆಲವು ಕಡೆ ಅವಧಿ ಮೀರಿದ ವಸ್ತುಗಳೂ ಮಾರಾಟವಾಗುತ್ತಿವೆ. ಈ ಸಮಯದಲ್ಲಿ ಏನು ಕೊಟ್ಟರೂ ತೆಗೆದುಕೊಂಡು ಹೋಗುತ್ತಾರೆ ಎಂಬುದು ಕೆಲವರ ಧೋರಣೆ. ಕೇಳಿದರೆ ಸ್ಟಾಕ್ ಇಲ್ಲ. ಕೊರೊನಾದಿಂದ ಸಪ್ಲೈ ಆಗುತ್ತಿಲ್ಲ, ಬೇಕಿದ್ದರೆ ತೆಗೆದುಕೊಳ್ಳಿ ಎಂಬ ಉತ್ತರಗಳು ಸಿಗುತ್ತಿವೆ.

ಅಡುಗೆ ಎಣ್ಣೆ ಗಗನಕ್ಕೆ :

      ಅಡುಗೆ ಎಣ್ಣೆಯಂತೂ ಪ್ರತಿವಾರ ಹೆಚ್ಚಳದ ಹಾದಿಯಲ್ಲೇ ಸಾಗಿದೆ. ಸನ್ ಫ್ಲವರ್ ಲೀಟರ್‍ಗೆ 175, ಪಾಮ್ ಆಯಿಲ್ ಲೀಟರ್‍ಗೆ 135 ಇದೆ. ಹೋಟೆಲ್‍ಗಳು ಮತ್ತು ಬೀದಿಬದಿ ವ್ಯಾಪಾರ ಕ್ಷೀಣಿಸಿರುವುದರಿಂದ ಅಲ್ಲೆಲ್ಲ ಹೆಚ್ಚಿಗೆ ಬಳಕೆಯಾಗುತ್ತಿಲ್ಲ. ಆದರೆ ಮನೆಗಳಿಗೆ ಅಗತ್ಯವಾಗಿ ಬೇಕಾಗಿರುವುದರಿಂದ ಎಣ್ಣೆ ಬಳಕೆಯ ತಿಂಡಿ ಪದಾರ್ಥಗಳನ್ನು ಮಾಡಲು ಮಹಿಳೆಯರು ಹಿಂದೆ-ಮುಂದೆ ನೋಡುವಂತಾಗಿದೆ. ಅಡುಗೆ ಎಣ್ಣೆಯ ದರ ಈ ಮಟ್ಟಿಗೆ ದುಬಾರಿಯಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ಅಡುಗೆ ಎಣ್ಣೆಯನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಾವುಗಳು ಹೆಚ್ಚಿನ ಹಣ ಕೊಟ್ಟೆ ತರುವುದು, ಬೇಕಾದರೆ ತೆಗೆದುಕೊಳ್ಳಿ ಬೇಡ್ವಾದರೆ ಬಿಡಿ ಎನ್ನುತ್ತಾರೆ. ಒಂದು ಸಮಾಧಾನಕರ ಸಂಗತಿ ಎಂದರೆ ಕಳೆದ 5-6ದಿನಗಳಿಂದ ನಗರದಲ್ಲಿ ಅಡುಗೆ ಎಣ್ಣೆ ಧಾರಣೆಯಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಕಾಣುತ್ತಿರುವುದು.

ಕ್ರಮ ಕೈಗೊಳ್ಳುವರು ಯಾರು..? 

      ಲಾಡ್‍ಡೌನ್ ಸಮಯದಲ್ಲಿ ಎಂಆರ್‍ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದರು. ಆದರೆ ಯಾವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ..? ಯಾರ ವಿರುದ್ಧ ಕ್ರಮ ಜರುಗಿಸಿದ್ದಾರೆ ಎಂಬುದು ಮಾತ್ರ ನಿಗೂಢ. ಇದೇ ಸಂದರ್ಭದಲ್ಲಿ ಅವಧಿ ಮೀರಿರುವ(Expired) ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ಮುಲಾಜಿಲ್ಲದೆ ಇನ್ನು ಅವಧಿ ಮುಗಿದು ಒಂದು ವಾರವಾಗಿದೆ, ಅಂತಹ ತೊಂದರೆ ಏನೂ ಆಗುವುದಿಲ್ಲ ಎನ್ನುತ್ತಾರೆ.

ಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ :

      ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವವರ ಸಂಖ್ಯೆ ಹೆಚ್ಚು. ದೈನಂದಿನ ವರಮಾನ ಇಲ್ಲವಾಗಿದೆ. ಉದ್ಯೋಗಗಳಿಗೆ ಹೋಗದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಣಕಾಸಿನ ಮುಗ್ಗಟ್ಟು ಬಾಧಿಸುತ್ತಿದೆ. ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು ಸಹ ಹಲವರಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಬಹುಪಾಲು ಇಂತಹ ಪರಿಸ್ಥಿತಿಯಲ್ಲಿ ಇರುವಾಗ ಕೆಲವು ವಸ್ತುಗಳ ದರ ಗಗನಕ್ಕೇರುತ್ತಿದೆ. ಬೆಲೆ ಹೆಚ್ಚಳವಾಗುತ್ತಿರುವುದನ್ನು ಕಂಡು ಸಾಮಾನ್ಯ ಜನ ಹೌಹಾರುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link