ತುಮಕೂರು :
ಸಿದ್ಧಗಂಗಾ ಮಠದ ಬೆಟ್ಟದಲ್ಲಿ ನೂರು ಎಕರೆ ಪ್ರದೇಶದಲ್ಲಿ ಪವಿತ್ರ ವನ ನಿರ್ಮಾಣಕ್ಕೆ, ಬಸದಿ ಬೆಟ್ಟದ ಬಳಿಯಿರುವ ಮಠದ ಜಾಗದಲ್ಲಿ ಪರಿಸರ ವನ ಅಭಿವೃದ್ಧಿಗೆ ಮಠದ ವತಿಯಿಂದಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರಕಾರದ ಮಟ್ಟದಲ್ಲಿ ಕ್ರಮ
ವಹಿಸಲಾಗುವುದು.ಅಂತೆಯೇ ಜಿಲ್ಲೆಯಲ್ಲೇ ಅಮೂಲ್ಯವೆನಿಸಿದ ದೇವರಾಯನದುರ್ಗದ ತಪ್ಪಲಿನಲ್ಲಿರುವ ಅಮೂಲ್ಯ ಜಾಲಾರ ಮರಸಂರಕ್ಷಣೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೀವ ವೈವಿಧ್ಯ ಪಾರಂಪರಿಕ ತಾಣ, ಜಲಮೂಲ, ಅರಣ್ಯ ಸೇರಿದಂತೆ ವಿನಾಶದಂಚಿನಲ್ಲಿರುವ ಸಸ್ಯಸಂಪತ್ತು, ಪ್ರಾಣಿಸಂಪತ್ತು ಹಾಗೂ ಅಮೂಲ್ಯ ಪ್ರದೇಶಗಳ ಸಂರಕ್ಷಣೆಗೆ ಜೀವ ವೈವಿಧ್ಯ ಮಂಡಳಿ ಒತ್ತು ನೀಡಿದ್ದು, ರಾಜ್ಯಾದ್ಯಂತ ಜೀವ ವೈವಿಧ್ಯ ದಾಖಲಾತಿ ಅಧ್ಯಯನ ಮಾಡಲಾಗುತ್ತಿದೆ. ಜೀವವೈವಿಧ್ಯ ಕಾಯ್ದೆಯನ್ವಯ ಜಿಲ್ಲಾಪಂಚಾಯಿತಿ, ಮಹಾನಗರ ಪಾಲಿಕೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಿ ಜೀವವೈವಿಧ್ಯ ಬಲವರ್ಧನೆಗೆ ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಸಸ್ಯ, ಪ್ರಾಣಿ, ಅರಣ್ಯ, ಸಂಪತ್ತಿನ ರಕ್ಷಣೆಗೆ ಮತ್ತು ತೋಟಗಾರಿಕೆ, ಕೃಷಿ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಹೆಚ್ಚು ಕೆರೆಗಳ ರಚನೆಗೆ ಒತ್ತು ನೀಡುವ ಮೂಲಕ ಜಲಮೂಲ ಹೆಚ್ಚಿಸಬೇಕು. ವಿಶೇಷ ಎನಿಸುವ ಪ್ರದೇಶಗಳನ್ನು ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡಲು ಅಧ್ಯಯನ ನಡೆಸಲಾಗುತ್ತಿದೆ. ಈ ಸಂಬಂಧ ಜಿಲ್ಲಾ ವಿಶೇಷ ತಾಣಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದ್ದು, ಅಧ್ಯಯನ ನಡೆಸಿ ಪಾರಂಪರಿಕ ತಾಣವೆಂದು ಘೋಷಣೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಕಾನೂನು ಬಾಹಿರ ಗಣಿಗಾರಿಕೆಗಳಿಗೆ ಕಡಿವಾಣ ಹಾಕಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಬಹುತೇಕ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ಕುರಿತು ಅಧ್ಯಯನ ನಡೆಸಲಾಗಿದೆ. ಇನ್ನೂ ಅರ್ಧ ಗ್ರಾಮ ಪಂಚಾಯಿತಿಗಳ ಅಧ್ಯಯನವನ್ನು ಇನ್ನೊಂದು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು. ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿಯೂ ಈ ಸಂಬಂಧ ಸಭೆಗಳನ್ನು ನಡೆಸಿ ಜೀವವೈವಿಧ್ಯ ರಕ್ಷಣೆಯನ್ನು ಬಲವರ್ಧನೆಗೊಳಿಸಲಾಗುವುದು ಎಂದು ಹೇಳಿದರು.
2021ರ ಮೇ 22ರಿಂದಜಾಗತೀಕ ಜೀವ ವೈವಿಧ್ಯತೆ ದಿನಾಚರಣೆ ಆಚರಿಸುತ್ತಿದ್ದು, ಗ್ರಾಮಪಂಚಾಯತಿ ಮಟ್ಟದಲ್ಲಿ ಆಚರಣೆಗೂ ಒತ್ತು ನೀಡಲಾಗಿದೆ. ಅಂದು ಜೀವವೈವಿಧ್ಯ ರಕ್ಷಣೆಯ ಸಂಬಂಧ ಚಟುವಟಿಕೆಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು. ಜೀವವೈವಿಧ್ಯ ಸಂರಕ್ಷಣೆಯಲ್ಲಿ ವಿಶೇಷ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲೆಯಲ್ಲಿರುವ ಕೆರೆಗಳನ್ನು ಸಂರಕ್ಷಣಾ ಮತ್ತು ಪುನಶ್ಚೇತನ ಮಾಡುವ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಹಸಿರು ಅರಣ್ಯ ಪ್ರದೇಶವಿದ್ದು, ಇದನ್ನು ರೆವಿನ್ಯೂ, ಅರಣ್ಯ, ಸಾಮಾಜಿಕ ಅರಣ್ಯ ಇಲಾಖೆ ಸಂಯೋಗದೊಂದಿಗೆ ರಕ್ಷಣೆ ಮಾಡಲು ಒತ್ತು ನೀಡಲಾಗಿದೆ ಎಂದರು.
ಇದಕ್ಕೂ ಮುನ್ನಾ ನಗರದ ಅರಣ್ಯ ಇಲಾಖೆಗೆ ಭೇಟಿ ನೀಡಿ ಅರಣ್ಯ ಪ್ರದೇಶದ ಬಗ್ಗೆ ಮಾಹಿತಿ ಪಡೆದರು. ಆನಂತರ ಮಹಾನಗರಪಾಲಿಕೆಗೆ ತೆರಳಿ ಅಧಿಕಾರಿಗಳ ಸಭೆ ನಡೆಸಿದರು. ಜಿಪಂ ಸಿಇಒ ಶುಭ ಕಲ್ಯಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಪಾಲಿಕೆ ಆಯುಕ್ತೆ ರೇಣುಕಾ, ಇತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಕಸ್ತೂರಿ ರಂಗನ್ ವರದಿ ತಿರಸ್ಕಾರ, ಪ್ರತಿಕ್ರಿಯೆಗೆ ನಕಾರ :
ಪಾರಂಪಾರಿಕ ತಾಣಗಳ ಪಟ್ಟಿಗೆ ಪಶ್ಚಿಮಘಟ್ಟಗಳ ಸೇರ್ಪಡೆ ಕುರಿತು ಸಲ್ಲಿಕೆಯಾಗಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿರುವ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷರೂ ಆದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ಸರಕಾರ ವರದಿ ತಿರಸ್ಕರಿಸಿರುವಾಗ ಈ ಸಂದರ್ಭದಲ್ಲಿ ಏನೂ ಹೇಳಲಾರೆ ಎಂದು ಜಾರಿಕೊಂಡರು. ನಾಮದಚಿಲುಮೆ ಔಷಧಿ ವನ ಸಂರಕ್ಷಣೆ ಬಗ್ಗೆಯೂ ಕ್ರಮ ವಹಿಸಲಾಗುವುದು. ಅರಣ್ಯ ಇಲಾಖೆ ಜಾಗದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶವಿಲ್ಲವೆಂದು ಇದೇ ವೇಳೆ ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ