ತುಮಕೂರು : ಜಿಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ತಿರಸ್ಕಾರ

ತುಮಕೂರು : 

      ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಸೋಮವಾರ ನಿಗಧಿಯಾಗಿದ್ದ ಅವಿಶ್ವಾಸ ಮಂಡನೆ ಸಭೆಯಲ್ಲಿ ಕೋರಂ ಕೊರತೆಯಾಗಿ, ಅವಿಶ್ವಾಸ ಗೊತ್ತುವಳಿ ತಿರಸ್ಕೃತವಾಯಿತು.

     ಮುಂದಿನ ಆರು ತಿಂಗಳವರೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಅವಕಾಶವಿಲ್ಲ. ಆದರೆ, ಈಗಿನ ಜಿಲ್ಲಾ ಪಂಚಾಯ್ತಿಯ ಅಧಿಕಾರವಧಿ ಮೂರು ತಿಂಗಳು ಬಾಕಿ ಇದ್ದು, ಲತಾ ಅವರು ಐದು ವರ್ಷದ ಅಧಿಕಾರವನ್ನು ನಿರಾತಂಕವಾಗಿ ಪೂರ್ಣಗೊಳಿಸಲಿದ್ದಾರೆ.

     ಈ ತಿಂಗಳ 18ರಂದು ನಿಗಧಿಯಾಗಿದ್ದ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಅಗತ್ಯವಿರುವಷ್ಟು ಸದಸ್ಯರು ಭಾಗವಹಿಸದ ಕಾರಣ ಪ್ರಾದೇಶಿಕ ಆಯುಕ್ತರು ಸಭೆಯನ್ನು 25ಕ್ಕೆ ಮುಂದೂಡಿದ್ದರು. ಆದರೆ, ಸೋಮವಾರವೂ ಇದೇ ಪರಿಸ್ಥಿತಿ ಮುಂದುವರೆಯಿತು. 57 ಸದಸ್ಯರ ಪೈಕಿ 5 ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿದ್ದ ಸದಸ್ಯರೂ ಹಾಜರಾಗಲಿಲ್ಲ. ಹೀಗಾಗಿ, ಪ್ರಾದೇಶಿಕ ಆಯುಕ್ತರಾದ ನವೀನ್‍ರಾಜ್ ಸಿಂಗ್ ಅವರು ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.

      ಬಿಜೆಪಿ ಸದಸ್ಯರಾದ ಮಹಾಲಿಂಗಯ್ಯ, ನರಸಿಂಹಮೂರ್ತಿ, ಯಶೋಧ, ಜೆಡಿಎಸ್ ಸದಸ್ಯರಾದ ರಾಮಚಂದ್ರಯ್ಯ, ರಾಮಕೃಷ್ಣಪ್ಪ ಸಭೆಗೆ ಹಾಜರಾಗಿದ್ದರು. ಸದಸ್ಯರಾದ ವೈ.ಹೆಚ್.ಹುಚ್ಚಯ್ಯ, ಕೆಂಚಮಾರಯ್ಯ, ರಾಮಾಂಜನಯ್ಯ, ಸಿದ್ದರಾಮಯ್ಯ ಅವರು ಜಿಲ್ಲಾ ಪಂಚಾಯ್ತಿ ಕಚೇರಿಗೆ ಆಗಮಿಸಿದ್ದರೂ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ಸಭೆಗೆ ಕನಿಷ್ಟ 30 ಸದಸ್ಯರು ಭಾಗವಹಿಸಿದರೆ ನಮಗೆ ಗೌರವ, ಬೆರಳೆಣಿಕೆ ಜನ ಸದಸ್ಯರ ಜೊತೆ ಹೋಗಿ ಮುಖಭಂಗ ಅನುಭವಿಸುವುದು ಬೇಡ ಎಂದು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಕೂಡಾ ಜಿಲ್ಲಾ ಪಂಚಾಯ್ತಿ ಕಚೇರಿಯತ್ತ ಬರಲಿಲ್ಲ.
ಜಿಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಮಂಡನೆಗೆ ಸೋಲಾಗಲು ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಭಾಗವಹಿಸಬಾರದು ಎಂದು ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ವಿಪ್ ಜಾರಿ ಮಾಡಿದ್ದರು. ಇದೇ ರೀತಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸುವ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡರು ತಮ್ಮ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರು. ಆದರೆ, ಕೆಲವರು ಹೊರತುಪಡಿಸಿದರೆ ಬಿಜೆಪಿಯ ಬಹುತೇಕ ಸದಸ್ಯರು ಬರಲೇಇಲ್ಲ, ಈ ಮೂಲಕ ಬಿಜೆಪಿ ಸದಸ್ಯರು ವಿಪ್ ಉಲ್ಲಂಘನೆ ಮಾಡಿದರು.

      ಇಂದಿಗೆ ಮುಂದೂಡಿದ ಅವಿಶ್ವಾಸ ಮಂಡನೆ ಸಭೆ ಸಂಬಂಧ ಸದಸ್ಯರಿಗೆ ನೋಟೀಸ್ ತಲುಪಿಲ್ಲ, ಹಾಗಾಗಿ ಸದಸ್ಯರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಹಾಜರಿದ್ದ ಸದಸ್ಯರು ಹೇಳಿದರು.

      ಈ ಅವಧಿಯ ಜಿಲ್ಲಾ ಪಂಚಾಯ್ತಿ ಆಡಳಿತ ಮಕ್ಕಳಾಟಿಕೆಯಂತಾಯಿತು. ಪಂಚಾಯತ್ ರಾಜ್ ನಡವಳಿಕೆಗಿಂತಾ ವೈಯಕ್ತಿಕ ಲಾಭ-ನಷ್ಟಗಳೇ ಮುಖ್ಯ ಎನ್ನುವಂತಾಯಿತು. ಜಿಲ್ಲಾ ಪಂಚಾಯ್ತಿಯ ಆಡಳಿತ ಹಾಗೂ ಜಿಲ್ಲೆಯ ಅಭಿವೃದ್ಧಿ ಕುಸಿದಿದೆ ಎಂದು ಸದಸ್ಯ ವೈ.ಹೆಚ್.ಹುಚ್ಚಯ್ಯ ಹಾಗೂ ರಾಮಾಂಜನಯ್ಯ ಹೇಳಿದರು.

      ಜಿಲ್ಲಾ ಪಂಚಾಯ್ತಿ ಸದಸ್ಯರೆಂದರೆ ಕೊಟ್ಟ ಅನುದಾನವನ್ನು ಹಂಚುವ ಪೋಸ್ಟ್ ಮನ್ ಕೆಲಸ ಆಗಿದೆ, ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ, ಈ ಆಡಳಿತ ವ್ಯವಸ್ಥೆಯೇ ದಿಕ್ಕುತಪ್ಪಿದಂತಾಗಿದೆ ಎಂದು ಸದಸ್ಯ ಕೆಂಚಮಾರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

      ಕೋರಂ ಕೊರತೆಯಾದ ಕಾರಣ ಪ್ರಾದೇಶಿಕ ಆಯುಕ್ತರು ಆರಂಭದಲ್ಲಿ ಕೆಲ ಕಾಲ ಸಭೆ ಮುಂದೂಡಿದರು. ಅದೇ ಪರಿಸ್ಥಿತಿ ಮುಂದುವರೆದಾಗ ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಲಾಗಿದೆ ಎಂಬ ತೀರ್ಮಾನ ಪ್ರಕಟಿಸಿದರು.
ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಓ ಶುಭಾ ಕಲ್ಯಾಣ್ ಸಭೆಯಲ್ಲಿ ಹಾಜರಿದ್ದರು.

      ಜಿಲ್ಲಾ ಪಂಚಾಯ್ತಿ ಆಡಳಿತ ದಿಕ್ಕುತಪ್ಪಿಹೋಗುತ್ತಿದ್ದರೂ ರಾಜಕೀಯ ನಾಯಕರು ತಮ್ಮ ಪಕ್ಷದ ಸದಸ್ಯರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಲಿಲ್ಲ. ಜಿಲ್ಲೆಯ ಶಾಸಕರೂ ಜಿಲ್ಲಾ ಪಂಚಾಯ್ತಿ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿ ಕಾಳಿಜಿ ವಹಿಸಲಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link