ತುಮಕೂರು : ಮಾರ್ಚ್ ಅಂತ್ಯದೊಳಗೆ ಎತ್ತಿನ ಹೊಳೆ ಕಾಮಗಾರಿ ಪೂರ್ಣ!

ತುಮಕೂರು:

      ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಗುರುತ್ವಾ ಕಾಲುವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣವಾಗುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಚುರುಕುಗೊಳಿಸಿ ಕಾಲಾವಧಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು.

      ಅವರು ಇಂದು ಚೇಳೂರು ತೊಳಚನಹಳ್ಳಿ ಹತ್ತಿರ ಮೇಲ್ಗಾಲುವೆಯ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು. ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಭೂಮಾಲೀಕರಿಗೆ ಪರಿಹಾರ ವಿತರಣೆಗಾಗಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಇಲಾಖೆ ಕಾಮಗಾರಿಗಳನ್ನು ವಿಳಂಬಗೊಳಿಸುವಂತಿಲ್ಲ. ಸಕಲೇಶಪುರ ಬಳಿ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, 2021ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಯನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

      ಜಲಸಂಪನ್ಮೂಲ ಇಲಾಖೆಗೆ ಅನುದಾನದ ಕೊರತೆ ಇಲ್ಲ. ಇಲಾಖೆಗೆ ಇನ್ನು ಹೆಚ್ಚಿನ ಅನುದಾನವನ್ನು ನೀಡಲು ಮುಖ್ಯಮಂತ್ರಿಗಳು ಸಿದ್ದರಿದ್ದಾರೆ ಎಂದು ಅವರು ಹೇಳಿದರು.

      ಈ ಯೋಜನೆ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲ ಭಾಗಗಳಿಗೆ ಕುಡಿಯುವ ನೀರನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಅವರು ತಿಳಿಸಿದರು.

      ಈ ವೇಳೆ ಸಂಸದ ಜಿ.ಎಸ್. ಬಸವರಾಜು, ಶಾಸಕ ನಾಗೇಶ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ, ಎತ್ತಿನ ಹೊಳೆ ಮುಖ್ಯ ಇಂಜಿನಿಯರ್ ಮಾಧವ, ಸೂಪರಿಡೆಂಟ್ ಇಂಜಿನಿಯರ್ ಶಿವಕುಮಾರ್, ವಿಶೇಷಾಧಿಕಾರಿ ರುದ್ರಯ್ಯ, ಇಇ ರಘುನಂದನ್, ಎಇ ಸುರೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link