ತುಮಕೂರು : ವ್ಯಾಘ್ರಗಳಂತೆ ಮಾನವರ ಮೇಲೆರಗುತ್ತಿರುವ ಶ್ವಾನಗಳು

 ತುಮಕೂರು : 

      ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, 11ನೇ ವಾರ್ಡ್ ವ್ಯಾಪ್ತಿಯ ರಾಜೀವ್‍ಗಾಂಧಿ ನಗರದಲ್ಲಿ ಎರಡು-ಮೂರು ದಿನಗಳಿಂದ ು ಹಲವರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ್ದು, ಇದು ಕೇವಲ ಒಂದು ವಾರ್ಡ್‍ನ ಸಮಸ್ಯೆಯಿಲ್ಲ. ನಗರದ 35 ವಾರ್ಡ್‍ಗಳಲ್ಲೂ ಬೀದಿ ನಾಯಿಗಳ ಕಾಟ ನಾಗರಿಕರನ್ನು ಹೈರಾಣಾಗಿಸಿದೆ.

      ರಸ್ತೆಯಲ್ಲಿ 15-20 ಸಂಖ್ಯೆಯಲ್ಲಿ ಹಿಂಡು-ಹಿಂಡಾಗಿ ಕಾಣಸಿಗುವ ನಾಯಿಗಳು, ಎಲ್ಲಿ ಯಾವಾಗ ಯಾರ ಮೇಲೆರುಗತ್ತವೋ ಎಂಬ ಆತಂಕದಲ್ಲಿ ನಾಗರಿಕರು ಸಂಚರಿಸುವಂತಾಗಿದೆ. ಅದರಲ್ಲೂ ಶಾಲೆ ಶುರುವಾಗದೆ ಮಕ್ಕಳು ಮನೆಯಲ್ಲೆ ಉಳಿದಿದ್ದು, ರಕ್ಕಸಿಯಂತಾಗಿರುವ ನಾಯಿಗಳ ಉಪಟಳ ಕಂಡು ಪೋಷಕರು ಮಕ್ಕಳನ್ನು ಆಚೆಗೆ ಬಿಡಲು ಹೆದುರುವಂತಾಗಿದೆ. ಇನ್ನೂ ರಾತ್ರಿಯ ವೇಳೆಯಂತೂ ರಸ್ತೆಯಲ್ಲೇ ಮಲಗಿರುವ ನಾಯಿಗಳು ಬೈಕ್ ಸವಾರರು ಯಾರಾದರು ಅವುಗಳ ಸಮೀಪ ಹಾದು ಹೋದರೆ ಅವರನ್ನೇ ಓಡಿಸಿಕೊಂಡು ಹಿಂಬಾಲಿಸಿ ಕಚ್ಚುವ ಪ್ರಯತ್ನ ಮಾಡುತ್ತಿವೆ. ಕೋವಿಡ್ ಸಂದರ್ಭದಲ್ಲಿ ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಹೋಗಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದ್ದು, ವಾಹನ ಸವಾರರು ಆತಂಕದಲ್ಲೇ ಬಿದ್ದು ಗಾಯಗೊಂಡ ಉದಾಹರಣೆಗಳು ಬಹಳಷ್ಟಿವೆ.

       ಸಂತಾನೋತ್ಪತ್ತಿ ಸಮಯ:

      ಮಳೆಗಾಲ, ಚಳಿಗಾಲ ನಾಯಿಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ರಸ್ತೆಗಳ ತುಂಬೆಲ್ಲ ನಾಯಿಗಳು ಗುಂಪಾಗಿ ಸಂಚರಿಸುತ್ತಿವೆ. ಚದುರಿಸಲು ಮುಂದಾದವರ ಮೇಲೆ ವ್ಯಾಘ್ರಗಳಂತೆ ಎಗರುತ್ತಿದ್ದು, ಪಾಲಿಕೆ ನಾಯಿಗಳ ಉಪಟಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹಲವು ನಾಗರಿಕರು ಆಗ್ರಹಿಸಿದ್ದಾರೆ.

ಮಾಂಸದಂಗಡಿಗಳ ಮುಂದೆ ಹಿಂಡು:

      ಕೋಳಿ, ಮಟನ್ ಮಾಂಸದ ಅಂಗಡಿಗಳ ಸುತ್ತಮುತ್ತ ಅಂಗಡಿಯವರು ಬಿಸಾಡುವ ತ್ಯಾಜ್ಯ ಮಾಂಸದ ತುಂಡಿಗಾಗಿ ಹಿಂಡು-ಹಿಂಡಾಗಿ ಸುತ್ತುವರಿಯುತ್ತಿದ್ದು, ಮಾಂಸ ತಿಂದು ಕೊಬ್ಬಿದ ನಾಯಿಗಳು ಹೆಚ್ಚು ಆಕ್ರೋಶ ಭರಿತವಾಗುತ್ತಿವೆ. ರಸ್ತೆಯ ಬಳಿ ಸುರಿಯುತ್ತಿರುವ ಮಾಂಸದ ತ್ಯಾಜ್ಯಗಳಿಗೆ ಪಾಲಿಕೆ ಗಂಭೀರ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಕಸದ ವಾಹನಕ್ಕೆ ಮಾಂಸದ ತ್ಯಾಜ್ಯ ಸುರಿಯಬೇಕು:

       ಕ್ರಮದ ಕುರಿತು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ.ರಕ್ಷಿತ್ ಕುಮಾರ್ ಅವರನ್ನು ಪ್ರಜಾಪ್ರಗತಿ ಪ್ರಶ್ನಿಸಿದಾಗ, ಇತ್ತೀಚೆಗೆ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಆದ ತೀರ್ಮಾನದಂತೆ ನಗರದ ಎಲ್ಲಾ ಚಿಕನ್ ಮಾರಾಟ ಮಳಿಗೆಯವರಿಗೂ ರಸ್ತೆಯ ಬಳಿ ಮಾಂಸದ ತ್ಯಾಜ್ಯವನ್ನು ಬಿಸಾಡದೆ, ಪಾಲಿಕೆಯ ತ್ಯಾಜ್ಯ ಸಂಗ್ರಹಣ ವಾಹನಗಳಿಗೆ ನೀಡಬೇಕೆಂದು ನೋಟಿಸ್ ನೀಡಲಾಗುವುದು. ಅಲ್ಲದೇ ಮಾರಾಟಗಾರರು ಯಾರು ಮಾಂಸವನ್ನು ಅಂಗಡಿ ಹೊರಗಡೆ ನೇತು ಹಾಕಬಾರದು. ಗಾಜಿನ ಫಲಕದ ಹಿಂದೆ ಕಾಣಿಸುವಂತೆ ಪ್ರದರ್ಶಿಸುವುದು ಕಡ್ಡಾಯ ಮಾಡಲಾಗುತ್ತಿದೆ. ಅಲ್ಲದೇ ಮಾರಾಟ ಮಳಿಗೆಗಳನ್ನೇ ನಗರದ ನಾಲ್ಕು ದಿಕ್ಕಿನಲ್ಲಿ ನಿಗದಿತ ಸ್ಥಳಗಳಲ್ಲಿ ಸ್ಥಳಾಂತರಿಸಲು ಜಾಗ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.

      ನಗರದಲ್ಲಿ 15000 ನಾಯಿಗಳಿವೆ ಎಂದು ಪಾಲಿಕೆಯವರು ಪಶುಪಾಲನಾ ಇಲಾಖೆಯವರ ಮಾಹಿತಿ ಆಧರಿಸಿ ಹೇಳುತ್ತಿದ್ದು, ಆದರೆ ವಾಸ್ತವವಾಗಿ 25000ಕ್ಕೂ ಅಧಿಕ ನಾಯಿಗಳು ಕಂಡುಬಂದಿದ್ದು, ನೈಜಗಣತಿಯನ್ನು ನಡೆಸುವ ಜೊತೆಗೆ ಶ್ವಾನಗಳ ಸಂತತಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

      ಸುಪ್ರೀಂಕೋರ್ಟ್‍ನ ತೀರ್ಪಿನ ಅನುಸಾರ ಹೊರಗಡೆ ಸ್ಥಳಾಂತರಿಸಲು ಅವಕಾಶವಿಲ್ಲದ ಕಾರಣ ಪ್ರಾಣಿ ಜನನ ನಿಯಂತ್ರಣ ಶಸ್ತ್ರಚಿಕಿತ್ಸಾ ಅಭಿಯಾನವನ್ನು ನಗರದಲ್ಲಿ ಕೈಗೊಂಡಿದ್ದು 24, 25 20,3, 18 ವಾರ್ಡ್‍ನಲ್ಲಿನ ಹೆಣ್ಣು ನಾಯಿಗಳನ್ನು ಕರೆದೊಯ್ದು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಪ್ರತಿ ತಿಂಗಳು 600 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿ ಹೊಂದಲಾಗಿದೆ. ಮಾಂಸ ತ್ಯಾಜ್ಯ ರಸ್ತೆಯಲ್ಲಿ ಎಸೆಯುವುದನ್ನು ನಿಯಂತ್ರಿಸಲು ಕ್ರಮ ವಹಿಸಲಾಗುತ್ತಿದೆ.

-ಡಾ.ರಕ್ಷಿತ್‍ಕುಮಾರ್ ಪಾಲಿಕೆ ಆರೋಗ್ಯಾಧಿಕಾರಿ

      ಕೋವಿಡ್ 2ನೇ ಅಲೆ ಕಾರಣಕ್ಕೆ ನಾಯಿಗಳಿಗೆ ಎಬಿಸಿ(ಅನಿಮಲ್ ಬರ್ತ್ ಕಂಟ್ರೋಲ್) ಆಪರೇಷನ್ ವಿಳಂಬವಾಗಿತ್ತು. ಜು.10ರಿಂದ ಮತ್ತೆ ಚಾಲನೆ ಕೊಡಲಾಗಿದೆ. ಎಲ್ಲಾ ವಾರ್ಡ್‍ಗಳಲ್ಲೂ ಕಾರ್ಯಚರಣೆ ನಡೆಸಿ ನಾಯಿಗಳ ಸಂತತಿ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುವುದು. ಸಾಕಿದ ನಾಯಿಗಳನ್ನು ಬೀದಿಗೆ ಬಿಡದೆ ನಾಗರಿಕರು ಸಹಕರಿಸಬೇಕು. ಮಾಂಸ ತ್ಯಾಜ್ಯ ರಸ್ತೆಗೆ ಸುರಿಯುವುದನ್ನು ತಪ್ಪಿಸಲು ಆರೋಗ್ಯ ಸ್ಥಾಯಿ ಸಮಿತಿಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

-ರೇಣುಕಾ ಮಹಾನಗರಪಾಲಿಕೆ ಆಯುಕ್ತರು
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap