ಮತ್ತೊಮ್ಮೆ ಭರ್ತಿಯಾಗುವ ಹಂತಕ್ಕೆ ತಲುಪಿದ ತುಂಗಭದ್ರಾ ಜಲಾಶಯ

ಕೊಪ್ಪಳ

   ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ. ಬರಿದಾಗಿದ್ದ ಜಲಾಶಯದಲ್ಲಿ ಮತ್ತೆ ನೀರಿನ ಅಲೆಗಳು ಅಪ್ಪಳಿಸುತ್ತಿರುವುದು ನೋಡಿ ಜನರು ಸಂತಸ ಪಡುತ್ತಿದ್ದಾರೆ. ತುಂಬಿ ಹರಿಯುತ್ತಿರುವ ತುಂಗಭದ್ರೆ ಅನೇಕರ ಆತಂಕವನ್ನು ದೂರು ಮಾಡಿದ್ದಾಳೆ.

    ಆಗಸ್ಟ್ 10 ರಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ತುಂಗಭದ್ರಾ ಜಲಾಶಯದ 19 ನೇ ಕ್ರೆಸ್ಟ್​​ಗೇಟ್ ಕೊಚ್ಚಿಕೊಂಡು ಹೋಗಿತ್ತು. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಆಗಸ್ಟ್ 10 ರಂದು ಸಂಪೂರ್ಣ ಭರ್ತಿಯಾಗಿತ್ತು. ಆದರೆ ಕ್ರೆಸ್ಟ್​​ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು. ಹೀಗಾಗಿ ಒಂದೇ ವಾರದಲ್ಲಿ ಜಲಾಶಯದಿಂದ ನಲವತ್ತೈದಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ವ್ಯರ್ಥವಾಗಿ ಹೋಗಿತ್ತು.

    ಇಷ್ಟಾಗಿಯೂ ಜಲಾಶಯದಲ್ಲಿ ಅಂದು ಇದಿದ್ದು ಕೇವಲ 71 ಟಿಎಂಸಿ ನೀರು. ಹೀಗಾಗಿ ಮತ್ತೆ ಜಲಾಶಯ ತುಂಬುತ್ತದೆಯೋ ಇಲ್ಲವೋ ಎಂಬ ಆತಂಕ ಜಲಾಶಯದ ನೀರನ್ನು ನಂಬಿದ್ದವರಿಗೆ ಕಾಡಿತ್ತು. ಆದರೆ ತುಂಗಭದ್ರಾ ಜಲಾಶಯಕ್ಕೆ ಇದೀಗ ಮತ್ತೆ ಜೀವಕಳೆ ಬಂದಿದೆ.

ಕ್ರೆಸ್ಟ್​​ಗೇಟ್ ಕೊಚ್ಚಿಕೊಂಡು ಹೋಗಿದ್ದರಿಂದ ತುಂಗಭದ್ರಾ ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಳೆದ ಹದಿನಾರು ದಿನಗಳಿಂದ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರ್ತಿದೆ. ಅದರಲ್ಲೂ ಕೆಲ ದಿನಗಳಿಂದ ಮಲೆನಾಡ ಬಾಗದಲ್ಲಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. 

    ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದು ಬರೋಬ್ಬರಿ 100 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯ ಬರ್ತಿಗೆ ಇನ್ನು ಕೇವಲ ಐದು ಟಿಎಂಸಿ ನೀರು ಮಾತ್ರ ಅವಶ್ಯಕವಾಗಿದೆ.ಜಲಾಶಯಕ್ಕೆ ಇದೀಗ ಮೂವತ್ತು ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದೆ. ಹತ್ತು ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದೇ ರೀತಿ ನೀರು ಬಂದ್ರೆ ಇನ್ನು ಎರಡೇ ದಿನದಲ್ಲಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲಿದೆ. 

   ತುಂಗಭದ್ರಾ ಜಲಾಶಯ ತುಂಬಿದರೆ ಖುದ್ದು ತಾವೇ ಬಂದು ಜಲಾಶಯಕ್ಕೆ ಬಾಗೀನ ಅರ್ಪಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇಲ್ಲಿವರಗೆ ಯಾವ ಮುಖ್ಯಮಂತ್ರಿ ಕೂಡಾ ಜಲಾಶಯಕ್ಕೆ ಬಾಗೀನ ಅರ್ಪಿಸಿಲ್ಲ. ಈ ವರ್ಷ ಸಿದ್ದರಾಮಯ್ಯ ಬಾಗೀನ ಅರ್ಪಿಸುವ ದಿನಾಂಕ ಎರಡು ಬಾರಿ ನಿಗದಿಯಾಗಿ ರದ್ದಾಗಿತ್ತು. ಇದೀಗ ಮತ್ತೆ ಜಲಾಶಯ ತುಂಬುತ್ತಿರುವುದರಿಂದ ಸ್ವತ ಸಿಎಂ ಸಿದ್ದರಾಮಯ್ಯ ಬಂದು ಬಾಗೀನ ಅರ್ಪಿಸುವ ಸಾಧ್ಯತೆ ಹೆಚ್ಚಾಗಿದೆ.

Recent Articles

spot_img

Related Stories

Share via
Copy link
Powered by Social Snap