ಕನ್ನಡಿಗರ ಕಡ್ಡಾಯ ಉದ್ಯೋಗಕ್ಕಾಗಿ ಹೋರಾಟ : ಭರವಸೆ

 ತುರುವೇಕೆರೆ :

      ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ಕಡ್ಡಾಯವಾಗಿ ಆದ್ಯತೆ ನೀಡುವ ಕುರಿತು ಹೋರಾಟ ನಡೆಸುವುದಾಗಿ ನಾಡೋಜ ಡಾ.ಮಹೇಶ್‍ಜೋಷಿ ಭರವಸೆ ನೀಡಿದರು.

     ಸ್ಥಳೀಯ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು ಕನ್ನಡ ಅನ್ನದ ಭಾಷೆ ಎಂದು ಹೇಳಿದರೆ ಸಾಲದು. ಕನ್ನಡದ ಮೂಲಕ ಹಸಿವು ನೀಗುವ ಹಾಗೂ ಬದುಕು ಕಟ್ಟುವ ಕೆಲಸವಾಗಬೇಕು, ತಾವು ಅಧಿಕಾರಕ್ಕೆ ಬಂದ ಕೂಡಲೇ ಈ ವಿಷಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿ ಹೋರಾಟ ರೂಪಿಸಲಾಗುವುದು ಎಂದರು.

 ಸದಸ್ಯತ್ವ ಗೊಂದಲಕ್ಕೆ ವಿಶೇಷ ಆ್ಯಪ್ :

      ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಶೇಷ ಆ್ಯಪ್‍ವೊಂದನ್ನು ಸಿದ್ಧಮಾಡುವ ಭರವಸೆ ನೀಡಿದ ಅವರು ಈಗ ಸದಸ್ಯರ ನೊಂದಣಿಯಲ್ಲಿ ಸಾಕಷ್ಟು ಗೊಂದಲಗಳು ಮತ್ತು ಅನುಮಾನಗಳು ಹುಟ್ಟಿಕೊಂಡಿವೆ. ಅರ್ಹರಲ್ಲದವರೂ ಪರಿಷತ್ತಿನ ಸದಸ್ಯರಾಗಿದ್ದಾರೆ. ಈ ಗೊಂದಲಗಳನ್ನು ನಿವಾರಿಸಲು ಮತ್ತು ಪರಿಷತ್ತಿನ ಖರ್ಚು, ವೆಚ್ಚಗಳ ಪಾರದರ್ಶಕ ಮಾಹಿತಿ ನೀಡಲು ಪರಿಷತ್ತಿನಿಂದ ಆ್ಯಪ್‍ವೊಂದನ್ನು ಸಿದ್ಧಪಡಿಸಲಾಗುವುದು. ಈ ಆ್ಯಪ್ ಮೂಲಕ ಕನ್ನಡಿಗರು ತಾವಿರುವ ಜಾಗದಿಂದಲೇ ಪರಿಷತ್ತಿನ ಸದಸ್ಯರಾಗಿ ನೊಂದಣಿ ಮಾಡಿಸಿಕೊಳ್ಳಬಹುದು ಎಂದರು.

ಸದಸ್ಯತ್ವ ಶುಲ್ಕ ಇಳಿಕೆ :

      ಆಜೀವ ಸದಸ್ಯತ್ವ ಶುಲ್ಕವನ್ನು ರೂ.1000ಗೆ ಏರಿಸಿದ್ದು, ಜನಸಾಮಾನ್ಯರು ದುಬಾರಿ ಶುಲ್ಕ ಭರಿಸುವ ಸ್ಥಿತಿಯಲ್ಲಿಲ್ಲ ಎಂಬ ಅಸಮಧಾನ ಹಲವು ಕಡೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಶುಲ್ಕವನ್ನು ಈ ಹಿಂದಿನಂತೆ ರೂ.250 ಕ್ಕೆ ಇಳಿಸಲಾಗುವುದು ಎಂದ ಅವರು ದೇಶಕ್ಕಾಗಿ ಹೋರಾಡುವ ಕನ್ನಡ ಸೈನಿಕರಿಗೆ ಯಾವುದೇ ಶುಲ್ಕವಿಲ್ಲದೆ ಅವರ ಮನೆ ಬಾಗಿಲಿಗೇ ಹೋಗಿ ಗೌರವ ಸದಸ್ಯತ್ವ ನೀಡಲಾಗುವುದು ಎಂದರು.

      ಸಭೆಯಲ್ಲಿ ಡಾ.ಮಹೇಶ್‍ಜೋಷಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು ಇತರೆ ಕನ್ನಡ ಪರ ಸಂಘಟನೆಗಳ ವತಿಯಿಂದ ಸನ್ಮಾನಿಸಲಾಯಿತು. ಸಮಾಜ ಸೇವಕ ಅಮಾನಿಕೆರೆ ಮಂಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕುಷ್ಠಗಿನಜೀರ್, ಬರಹಗಾರ ತುರುವೇಕೆರೆ ಪ್ರಸಾದ್, ಕಸಾಪ ಅಧ್ಯಕ್ಷ ನಂ.ರಾಜು, ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜ್, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ವೆಂಕಟೇಶ್, ಪ್ರೊ.ಕೆ.ಪುಟ್ಟರಂಗಪ್ಪ, ಟಿ.ರಾಮಚಂದ್ರು, ಬಾಣಸಂದ್ರ ರವಿಕುಮಾರ್, ಸ್ವರ್ಣಕುಮಾರ್ ಇತರರು ಭಾಗವಹಿಸಿದ್ದರು.

ಸ್ಥಳೀಯ ಕಸಾಪಗಳ ಬಲವರ್ಧನೆ :

     ತಾವು ಅತ್ಯಂತ ಜನಪರ, ಕನ್ನಡಪರ, ಕ್ರಿಯಾತ್ಮಕ, ಪಾರದರ್ಶಕ ಹಾಗೂ ರಚನಾತ್ಮಕ ಆಡಳಿತ ನೀಡುವುದಾಗಿ ಭರವಸೆ ನೀಡಿದ ಅವರು ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲೂ ಪರಿಷತ್ತನ್ನು ಬಲಗೊಳಿಸಲಾಗುವುದು. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಹಾಗಾಗಿ ತಮಗೆ ಮತ ನೀಡಬೇಕೆಂದು ಸದಸ್ಯರಲ್ಲಿ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link