ಯುಜಿಸಿ-ನೆಟ್ ಪರೀಕ್ಷೆ : ತಪ್ಪು ಫಲಿತಾಂಶ ಪ್ರಕಟಿಸಿದ ಎನ್‍ಟಿಎ

ತುಮಕೂರು:

                                         ಕನ್ನಡಿಗ ಅಭ್ಯರ್ಥಿಗಳಿಗೆ ಭಾರೀ ಅನ್ಯಾಯ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಶನಿವಾರ (ಎನ್‍ಟಿಎ) 2020-2021 ರ ಯುಜಿಸಿ ನೆಟ್ ಫಲಿತಾಂಶವನ್ನು ಪ್ರಕಟಿಸಿದ್ದು, ಐಚ್ಛಿಕ ಕನ್ನಡ ವಿಷಯದಲ್ಲಿ ಪರೀಕ್ಷೆ ಬರೆದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಅನರ್ಹ ಗೊಂಡಿದ್ದಾರೆ.

ಪರೀಕ್ಷಾ ಮೇಲುಸ್ತುವಾರಿ ಸಂಸ್ಥೆ ಯುಜಿಸಿ ಹಾಗೂ ಪರೀಕ್ಷೆ ನಡೆಸಿದ ಎನ್‍ಟಿಎ ಸಂಸ್ಥೆಗಳ ಎಡಬಿಡಂಗಿತನದಿಂದಾಗಿ ಕನ್ನಡಿಗ ಅಭ್ಯರ್ಥಿಗಳಿಗೆ ಭಾರೀ ಅನ್ಯಾವಾಗಿದ್ದು, ಮರು ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಬಲವಾಗಿ ಕೇಳಿ ಬಂದಿದೆ.

ಎಚ್ಚರಿಸಿದ್ದರೂ ಉದ್ಧಟತನ ಪ್ರದರ್ಶನ :

ಎನ್‍ಟಿಎ ಕಳೆದ ವಾರ ಪತ್ರಿಕೆ-2 ಐಚ್ಛಿಕ ಕನ್ನಡ ವಿಷಯದ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಆದರೇ ಇದರಲ್ಲಿ ಸುಮಾರು 40 ಕ್ಕೂ ಹೆಚ್ಚು ತಪ್ಪು ಉತ್ತರಗಳು ಪ್ರಕಟವಾಗಿದೆ ಎಂದು ಸ್ಪರ್ಧಾರ್ಥಿಗಳು ಆಧಾರ ಸಮೇತ ಆಕ್ಷೇಪ ಎತ್ತಿದ್ದರು. ಜೊತೆಗೆ ಈ ವಿಷಯ ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲೂ ಸದ್ದು ಮಾಡಿತ್ತು.

ಸಂಸತ್‍ನಲ್ಲೂ ಈ ಅನ್ಯಾಯದ ಬಗ್ಗೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರು ಧ್ವನಿ ಎತ್ತಿ ಮರು ಪರೀಕ್ಷೆಗೆ ಒತ್ತಾಯಿಸಿದರು. ಆಗ ಕೇಂದ್ರ ಶಿಕ್ಷಣ ಸಚಿವರು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದರು.

ಬರಗೂರು ರಾಮಚಂದ್ರಪ್ಪನವರು ಬೆಂಗಳೂರಿನ ಯುಜಿಸಿಯ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಿಗೆ ಈ ಕುರಿತು ಪತ್ರ ಬರೆದು ಮರು ಪರೀಕ್ಷೆಗೆ ಆಗ್ರಹಿಸಿದ್ದರು. ಇವಿಷ್ಟು ಬೆಳವಣಿಗೆಗಳಾಗ್ಯೂ ಯುಜಿಸಿ ಮರು ಪರೀಕ್ಷೆ ನಡೆಸಲು ಮುಂದಾಗದೇ ತಪ್ಪು ಕೀ ಉತ್ತರಗಳನ್ವಯವೇ ಫಲಿತಾಂಶ ಪ್ರಕಟಿಸಿ ತನ್ನ ಮೊಂಡುತನ ಪ್ರದರ್ಶಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹಿಂದಿಯಲ್ಲಿ ಪ್ರಶ್ನೆ ಕೇಳಿದ್ದ ಸಂಸ್ಥೆ :

ಪದವಿ ಕಾಲೇಜು ಪ್ರಾಧ್ಯಾಪಕರ ಅರ್ಹತೆಗಾಗಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಅಂದರೆ ಮೇ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗವು (ಯುಜಿಸಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು (ಎನ್‍ಇಟಿ-ನೆಟ್) ಆನ್‍ಲೈನ್ ಮೂಲಕ ನಡೆಸುತ್ತದೆ.

ಕೊರೋನಾ ಸೋಂಕಿನಿಂದಾಗಿ 2020 ರ ಡಿಸೆಂಬರ್ ಹಾಗೂ 2021 ರ ಮೇ ತಿಂಗಳಲ್ಲಿ ನಡೆಯಬೇಕಿದ್ದ ನೆಟ್ ಪರೀಕ್ಷೆ ಮುಂದೂಡಲಾಗಿತ್ತು. ಈ ಬಗ್ಗೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿ ಈ ಎರಡೂ ಪರೀಕ್ಷೆಗಳನ್ನು 2021 ರ ನ. 26 ರಂದು ಏಕ ಕಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆದರೆ, ಈ ಪರೀಕ್ಷೆ ವೇಳೆ ಐಚ್ಛಿಕ ಕನ್ನಡ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ-2 ರಲ್ಲಿ ಕೇವಲ 13 ಪ್ರಶ್ನೆಗಳು ಮಾತ್ರ ಕನ್ನಡ ಭಾಷೆಯಲ್ಲಿದ್ದು, ಉಳಿದಂತೆ ಒಟ್ಟು 87 ಪ್ರಶ್ನೆಗಳನ್ನು ಹಿಂದಿಯಲ್ಲಿ ಕೇಳಲಾಗಿತ್ತು.

ಈ ಸಂಬಂಧ ಪರೀಕ್ಷಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಆರಂಭಗೊಂಡ ಮೂರು ಗಂಟೆಗಳ ನಂತರ ಹಿಂದಿ ಭಾಷೆಯಲ್ಲಿದ್ದ ಪ್ರಶ್ನೆ ಪತ್ರಿಕೆಯನ್ನು ವಾಪಸ್ ಪಡೆದು, ಕನ್ನಡ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿತ್ತು. ಈ ಪ್ರಶ್ನೆ ಪತ್ರಿಕೆಯಲ್ಲೂ 30 ಕ್ಕೂ ಹೆಚ್ಚು ಪ್ರಶ್ನೆಗಳು ಪುನರಾವರ್ತನೆಗೊಂಡಿದ್ದವು.

ಮರು ಪರೀಕ್ಷೆ ನಂತರವೂ ಎಡವಟ್ಟು :

ಪರೀಕ್ಷಾ ವೇಳೆ ಸರ್ವರ್‍ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಅಭ್ಯರ್ಥಿಗಳು ಉತ್ತರ ಪತ್ರಿಕೆಯನ್ನು ಸಬ್‍ಮಿಟ್ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಸುಮಾರು 3 ಗಂಟೆ ನಡೆಯಬೇಕಿದ್ದ ಪರೀಕ್ಷೆಯನ್ನು 9 ರಿಂದ 10 ಗಂಟೆಗಳ ಕಾಲ ನಡೆಸಲಾಗಿತ್ತು. ಆದರೂ, ಬಹುತೇಕ ಅಭ್ಯರ್ಥಿಗಳು ಉತ್ತರ ಪತ್ರಿಕೆಯನ್ನು ಸಬ್‍ಮಿಟ್ ಮಾಡಲಾಗದೇ ಕೈ ಚೆಲ್ಲಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ ಐಚ್ಛಿಕ ಕನ್ನಡ ವಿಷಯಕ್ಕೆ ಮರು ಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದರು. ಹಾಗಾಗಿ, 2021 ರ ಡಿ. 4 ರಂದು ಯುಜಿಸಿ ಮರು ಪರೀಕ್ಷೆ ಹಮ್ಮಿಕೊಂಡಿತ್ತು.

ಆದರೆ, ಐಚ್ಛಿಕ ಕನ್ನಡ ವಿಷಯವನ್ನು ತೆಗೆದುಕೊಂಡಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಮರು ಪರೀಕ್ಷೆಗೆ ಅವಕಾಶ ನೀಡದೆ, ನ. 21 ರಂದು ನಡೆಸಲಾಗಿದ್ದ ಪರೀಕ್ಷೆ ವೇಳೆ ಉತ್ತರ ಪತ್ರಿಕೆಯನ್ನು ಆನ್‍ಲೈನ್‍ನಲ್ಲಿ ಸಬ್‍ಮಿಟ್ ಮಾಡದ ಅಭ್ಯರ್ಥಿಗಳಿಗೆ ಮಾತ್ರ ಮರು ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಆದರೇ ಮರು ಪರೀಕ್ಷೆ

ದುಬಾರಿ ಮರು ಮೌಲ್ಯಮಾಪನ ಶುಲ್ಕ :

ಕಳೆದ ವಾರ ಯುಜಿಸಿ ಪ್ರಕಟಗೊಳಿಸಿದ್ದ ತಪ್ಪು ಉತ್ತರಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ಬರೆದ ಕನ್ನಡ ವಿಷಯದ ಯಾವ ಅಭ್ಯರ್ಥಿಗಳು ಸಹ ಯುಜಿಸಿಗೆ ಆಕ್ಷೇಪ ಸಲ್ಲಿಸಿ ಸವಾಲು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿಲ್ಲ ಎನ್ನಲಾಗುತ್ತಿದೆ.

ಇದಕ್ಕೆ ಕಾರಣ ದುಬಾರಿ ಮರು ಮೌಲ್ಯ ಮಾಪನ ಶುಲ್ಕ. ಹೌದು, ಯುಜಿಸಿಯ ತಪ್ಪು ಕೀ ಉತ್ತರಗಳನ್ನು ಪ್ರಶ್ನಿಸಬೇಕಾದರೇ ಅಭ್ಯರ್ಥಿಯು ಪ್ರಶ್ನಿಸುವ ಪ್ರತಿ ತಪ್ಪು ಉತ್ತರಕ್ಕೆ 1,000 ರೂ. ಹಣ ಶುಲ್ಕ ಪಾವತಿಸಬೇಕು.

ಅಂದರೇ ಯುಜಿಸಿ ಈಗ ಪ್ರಕಟಿಸಿರುವ 40 ತಪ್ಪು ಉತ್ತಗಳನ್ನು ಪ್ರಶ್ನಿಸಲು ಅಭ್ಯರ್ಥಿ 40,000 ರೂ. ಶುಲ್ಕ ಪಾವತಿಸಬೇಕು. ಕನ್ನಡ ಎಂಎ ಮಾಡುವವರಲ್ಲಿ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಬಡತನ ಹಾಗೂ ಗ್ರಾಮೀಣ ಪ್ರದೇಶದ ಹಿನ್ನೆಲೆಯುಳ್ಳವರು ಹಾಗಾಗಿ ಸಾವಿರಾರು ರೂಪಾಯಿ ಮರು ಮೌಲ್ಯ ಮಾಪನ ಶುಲ್ಕ ಇವರಿಗೆ ದುಬಾರಿಯೇ ಸರಿ.

ಮರು ಪರೀಕ್ಷೆಗೆ ಒತ್ತಾಯ :

ಐಚ್ಛಿಕ ಕನ್ನಡ ವಿಷಯದಲ್ಲಿ ಹಿಂದಿ ಪ್ರಶ್ನೆಗಳನ್ನು ಕೇಳುವ ಮೂಲಕ ಗೊಂದಲ ಸೃಷ್ಟಿಸಿದ್ದ ಯುಜಿಸಿ ಎಲ್ಲಾ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಹೇಳಿ, ಕೆಲವೇ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಿದೆ. ಪ್ರಶ್ನೆ ಪತ್ರಿಕೆ-2 ರಲ್ಲಿ 30 ಅಂಕಗಳಿಗೆ ಪುನರಾವರ್ತಿತ ಪ್ರಶ್ನೆಗಳನ್ನೇ ಕೇಳಿದ್ದರೂ ಅತ್ಯಂತ ಕಡಿಮೆ ಅಂಕಗಳನ್ನು ನೀಡಿದೆ.

ಕೋವಿಡ್‍ನಿಂದಾಗಿ ಕಳೆದ ಎರಡು ವರ್ಷಗಳಿಂದ ನೆಟ್ ಪರೀಕ್ಷೆ ನಡೆಯದೇ ಅಭ್ಯರ್ಥಿಗಳು ಪರಿತಪಿಸುವಂತಾಗಿತ್ತು. ಇದೀಗ ಪ್ರಕಟಗೊಂಡಿರುವ ಫಲಿತಾಂಶವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಮುಖ್ಯವಾಗಿ ಐಚ್ಛಿಕ ಕನ್ನಡ ವಿಷಯಕ್ಕೆ ಮರು ಪರೀಕ್ಷೆ ನಡೆಸಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಈ ಸಲದ ಯುಜಿಸಿ ನೆಟ್ ಪರೀಕ್ಷೆಯಲ್ಲಿ ತಪ್ಪು ಉತ್ತರ ಬರೆದವರು ಪಾಸಾಗಿದ್ದಾರೆ. ಸರಿ ಉತ್ತರ ಬರೆದವರು ಫೇಲ್ ಆಗಿದ್ದಾರೆ. ವರ್ಷವಿಡೀ ಓದಿ ಚೆನ್ನಾಗಿ ಪರೀಕ್ಷೆ ಬರೆದರು ಅನುತ್ತೀರ್ಣಗೊಂಡಿದ್ದೇನೆ. ಇದಕ್ಕೆ ಎನ್‍ಟಿಎಯ ತಪ್ಪು ಉತ್ತರಗಳು ಕಾರಣ. ಎರಡೆರಡೂ ಪರಿಕ್ಷಾ ಸಂಸ್ಥೆಗಳು ನಡೆಸುವ ಈ ಪರೀಕ್ಷೆ ಕಾಟಾಚಾರದ ವಸ್ತುವಾಗಿದ್ದು ದುರಂತ. ಮತ್ತೆ ಮರು ಪರೀಕ್ಷೆಗೆ ಆಗ್ರಹಿಸುತ್ತೇನೆ.

-ಮಂಜುನಾಥ್, ಪರೀಕ್ಷೆ ಬರೆದ ಅಭ್ಯರ್ಥ

ಪರೀಕ್ಷೆ 2 ವರ್ಷ ತಡವಾಗಿ ಆಯಿತು. ನಂತರ ಕನ್ನಡಿಗ ಅಭ್ಯರ್ಥಿಗಳಿಗೆ ದೂರದ ಅನಂತಪುರ, ಹೈದರಾಬಾದ್ ಪರಿಕ್ಷಾ ಕೇಂದ್ರಗಳನ್ನು ನಿಯೋಜಿಸಲಾಯಿತು.

ಪರೀಕ್ಷೆಯಲ್ಲಿ ಹಿಂದಿ ಹೇರಿಕೆ, ತಪ್ಪು ಉತ್ತರ ಪ್ರಕಟ, ದುಬಾರಿ ಮರು ಮೌಲ್ಯಮಾಪನ ಶುಲ್ಕ. ಒಂದೇ ಎರಡೇ… ಯುಜಿಸಿ ಮತ್ತು ಎನ್‍ಟಿಎ ಸಂಸ್ಥೆಗಳ ತಪ್ಪುಗಳಿಂದಾಗಿ ಕನ್ನಡ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಯಲ್ಲಿದೆ. ಮರುಪರೀಕ್ಷೆಗೆ ನಮ್ಮ ಎಂಪಿಗಳು ಧ್ವನಿ ಎತ್ತಲಿ.

-ಖಾಜಾಸಾಬ್, ಪರೀಕ್ಷೆ ಬರೆದ ಅಭ್ಯರ್ಥಿ

ಎನ್‍ಇಟಿ ಕನ್ನಡ ಪರೀಕ್ಷೆಯಲ್ಲಿ ಹಿಂದಿ ಹೇರಿಕೆ ಹಾಗೂ ತಪ್ಪು ಉತ್ತರ ಪ್ರಕಟಿಸಿರುವುದಕ್ಕೆ ಸಂಬಂಧಿಸಿದಂತೆ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂದು ಪ್ರಾಧಿಕಾರದಿಂದ ಯುಜಿಸಿಗೆ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಆದರೇ ಅವರಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಸೋಮವಾರ ಮತ್ತೆ ಯುಜಿಸಿ ಅಧ್ಯಕ್ಷರು ಮತ್ತು ಕೇಂದ್ರ ಶಿಕ್ಷಣ ಮಂತ್ರಿಗಳನ್ನು ಸಂಪರ್ಕಿಸುತ್ತೇನೆ.

-ಟಿ.ಎಸ್.ನಾಗಾಭರಣ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕೇಂದ್ರದ ಬಜೆಟ್ ಅಧಿವೇಶನದ ವೇಳೆ ನೆಟ್ ಪರಿಕ್ಷೆ ಸಮಸ್ಯೆ ಕುರಿತು ಕೇಂದ್ರ ಶಿಕ್ಷಣ ಖಾತೆ ಸಚಿವರ ಗಮನ ಸೆಳೆದು, ಮರು ಪರೀಕ್ಷೆ ನಡೆಸಲು ಆಗ್ರಹಿಸಿದ್ದೆ ಹಾಗೂ ಈ ಮರು ಪರೀಕ್ಷೆ ಕುರಿತು ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಸಹ ಪ್ರಶ್ನಿಸಿದ್ದೆ.

ಆದರೇ ಇಲಾಖೆಯಿಂದ ಈವರೆÉಗೂ ಉತ್ತರ ಬಂದಿಲ್ಲ. ಸೋಮವಾರ ದೆಹಲಿಗೆ ತೆರಳುತ್ತಿದ್ದು ಆಗಿರುವ ತಪ್ಪನ್ನು ಸರಿಪಡಿಸಲು ಸಂಬಂಧಿಸಿದವರನ್ನು ಪುನಃ ಪ್ರಶ್ನಿಸಿ ಉತ್ತರ ಪಡೆಯುತ್ತೇನೆ. ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ.

-ಡಾ.ಎಲ್.ಹನುಂತಯ್ಯ, ಕನ್ನಡ ಕವಿ ಮತ್ತು ರಾಜ್ಯಸಭಾ ಸದಸ್ಯರು

            -ಚಿದಾನಂದ್ ಹುಳಿಯಾರು

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap