ಐಸ್‌ಲ್ಯಾಂಡ್ ನಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ…!

ನವದೆಹಲಿ:

    ಜಗತ್ತಿನಾದ್ಯಂತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದ ಐಸ್ ಲ್ಯಾಂಡ್ ನಲ್ಲಿ ಇದೀಗ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಕಳೆದ ಡಿಸೆಂಬರ್ ನಿಂದ ಈ ವರೆಗೂ ಸತತ 7 ಬಾರಿ ಜ್ವಾಲಾಮುಖಿ ಸ್ಫೋಟವಾಗಿ ಲಾವಾರಸ ಹರಿಯುತ್ತಿದೆ. ಐಸ್ ಲ್ಯಾಂಡ್ ನ ರಿಕ್‌ಜೇನ್ಸ್‌ ಪ್ರಾಂತ್ಯದ ಗ್ರಿಂಡ್‌ವಿಕ್‌ ಗ್ರಾಮದಲ್ಲಿರುವ ಸುಂಧ್ನುಕಗಿಗರ್‌ ಜ್ವಾಲಾಮುಖಿ ಬುಧವಾರ ರಾತ್ರಿ ಸ್ಫೋಟಿಸಿದ್ದು, ಮೀನುಗಾರಿಕೆಯನ್ನೇ ನಂಬಿರುವ ಗ್ರಾಮದಲ್ಲಿ ಲಾವಾರಸ ಹರಿಯುತ್ತಿದೆ.

   2024ರಲ್ಲಿ ಏಳನೇ ಬಾರಿ ಇಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರನ್ನು ಸ್ಥಳಾಂತರಗೊಳಿಸಲಾಗಿದೆ. ಈ ವರೆಗೂ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಆಸ್ತಿ-ಪಾಸ್ತಿ ನಷ್ಟದ ಕುರಿತು ಈಗಷ್ಟೇ ಮಾಹಿತಿ ಕಲೆಹಾಕಬೇಕಿದೆ ಎಂದು ಐಸ್‌ಲ್ಯಾಂಡ್‌ನ ಹವಾಮಾನ ಇಲಾಖೆ ವರದಿ ಮಾಡಿದೆ.

   2021ರವರೆಗೂ ಕಳೆದ ಒಂದು ಶತಮಾನದಲ್ಲಿ ಈ ಪ್ರಾಂತ್ಯದಲ್ಲಿ ಜ್ವಾಲಾಮುಖಿ ಸ್ಫೋಟಿಸಿರಲಿಲ್ಲ. 2021ರ ನಂತರದಲ್ಲಿ ಇಲ್ಲಿ ಭೂಕಂಪನ ಆರಂಭಗೊಂಡಿತು. ಬಳಿಕ ನಿರಂತರವಾಗಿ ಇಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದು, ಡಿಸೆಂಬರ್ ನಿಂದ ಈ ವರೆಗೂ ಇಲ್ಲಿ ಬರೊಬ್ಬರಿ 7 ಬಾರಿ ಜ್ವಾಲಾಮುಖಿ ಸ್ಫೋಟವಾಗಿದೆ. 

  ಬುಧವಾರ ಸಂಭವಿಸಿದ ಜ್ವಾಲಾಮುಖಿಯಿಂದಾಗಿ ಕೆಂಪು ಹಾಗೂ ಕಿತ್ತಳೆ ಬಣ್ಣದ ಲಾವಾರಸವು ದಟ್ಟ ಹೊಗೆಯೊಂದಿಗೆ ಹರಿಯುತ್ತಿರುವುದು ಕಂಡುಬಂದಿದೆ.ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಜ್ವಾಲಾಮುಖಿಗೆ ಹೋಲಿಸಿದಲ್ಲಿ ಇದರ ಪ್ರಮಾಣ ಚಿಕ್ಕದು. ಮುನ್ನೆಚ್ಚರಿಕೆಯ ಕ್ರಮವಾಗಿ ನಾಲ್ಕು ಸಾವಿರ ನಿವಾಸಿಗಳನ್ನು ಗ್ರಾಮದಿಂದ ವರ್ಷದ ಹಿಂದೆಯೇ ಸ್ಥಳಾಂತರಿಸಲಾಗಿದೆ.

  ಜ್ವಾಲಾಮುಖಿಯ ನಿರಂತರ ಸ್ಫೋಟದಿಂದಾಗಿ ಇಲ್ಲಿರುವ ಬಹುತೇಕ ಮನೆಗಳ ಮಾರಾಟವಾಗಿದೆ. ಲಾವಾರಸ ಹರಿದು ಮೂರು ಮನೆಗಳು ಸುಟ್ಟಿವೆ. ಐರೋಪ್ಯ ರಾಷ್ಟ್ರಗಳಲ್ಲಿ ಐಸ್‌ಲ್ಯಾಂಡ್‌ನಲ್ಲೇ ಗರಿಷ್ಠ 33 ಸಕ್ರಿಯ ಜ್ವಾಲಾಮುಖಿಗಳಿವೆ ಎಂದು ವರದಿಯಾಗಿದೆ.

Recent Articles

spot_img

Related Stories

Share via
Copy link
Powered by Social Snap