ಪ್ರಯಾಗರಾಜ್:
ವಸಂತ ಪಂಚಮಿ ಹಿನ್ನೆಲೆಯಲ್ಲಿ ಸೋಮವಾರ ಮಹಾಕುಂಭ ಮೇಳದಲ್ಲಿ ಮೂರನೇ ಅಮೃತ ಸ್ನಾನ ಆರಂಭವಾಗಿದ್ದು, ಸಂಗಮದಲ್ಲಿ ಸಾಧು ಸಂತರು, ತೃತೀಯ ಲಿಂಗಿಗಳು ಸೇರಿದಂತೆ ಸಾವಿರಾರು ಭಕ್ತರು ಮಿಂದೆದ್ದರು.
ಪವಿತ್ರ ಸ್ನಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಹಾಕುಂಭ ನಗರದತ್ತ ಆಗಮಿಸುತ್ತಿದ್ದು, ಸ್ಥಳೀಯ ಆಡಳಿತ ಬಿಗಿ ಕ್ರಮಗಳನ್ನು ಕೈಗೊಂಡು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಸ್ನಾನ ಮಾಡಲು ಬಂದ ಭಕ್ತರು ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಕ್ತರು ಕುಣಿದು ಕುಪ್ಪಳಿಸುತ್ತಿದ್ದು, ಇಡೀ ವಾತಾವರಣ ಭಕ್ತಿಮಯವಾಗಿದೆ.
ಸಂಗಮ್ ದಡದಲ್ಲಿ ಸ್ನಾನ ಮಾಡುವುದು ಅದ್ಭುತ ಅನುಭವವಾಗಿದೆ ಎಂದು ತೃತೀಯ ಲಿಂಗಿಗಳು ಹೇಳಿದರು. ಇಂತಹ ಮಂಗಳಕರ ದೃಶ್ಯವನ್ನು ಎಲ್ಲಿಯೂ ನೋಡಿಲ್ಲ ಎಂದು ತೃತೀಯಲಿಂಗಿ ಸಮುದಾಯದವರು ಹೇಳಿದ್ದಾರೆ. ಎಲ್ಲರೂ ಮಹಾಕುಂಭಕ್ಕೆ ಬರಬೇಕು ಮತ್ತು ಪವಿತ್ರ ಸ್ನಾನ ಮಾಡುವ ಮೂಲಕ ದೇವರ ವರ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೆ, ತೃತೀಯಲಿಂಗಿ ಸಮುದಾಯದ ಜೊತೆಗೆ ಇತರ ಭಕ್ತರು ಕೂಡಾ ಘಟ್ಟಗಳ ಮೇಲೆ ಹಾಡುತ್ತಾ, ಕುಣಿಯುತ್ತಾ ಮಹಾಕುಂಭ ಮೇಳದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂತಹ ಪವಿತ್ರ ಧಾರ್ಮಿಕ ಕಾರ್ಯಕ್ರಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕಂಡುಬರುವುದಿಲ್ಲ ಎಂದು ತೃತೀಯ ಲಿಂಗಿಗಳು ಹೇಳಿದ್ದಾರೆ. ಸಂಗಮದಲ್ಲಿ ಬೆಳಗ್ಗೆಯೇ ಸ್ನಾನ ಮಾಡಿದ್ದು, ಎಲ್ಲಾರ ಆರೋಗ್ಯ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದ್ದೇವು ಎಂದು ತೃತೀಯ ಲಿಂಗಿ ಬಿಸಾಖ ಕಿನ್ನರ ಹೇಳಿದರು.








