ಮಿಡಿಗೇಶಿ:

ಐ.ಡಿ.ಹಳ್ಳಿಯ ನಕಲಿ ಕ್ಲಿನಿಕ್ನ ವಿಶಾಲಾಕ್ಷಿ ವಿರುದ್ದ ಪ್ರಕರಣ ದಾಖಲು
ಮಧುಗಿರಿ ತಾಲ್ಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಜನ ಸಾಮಾನ್ಯರ ಜೀವಗಳ ಬಗ್ಗೆ ಚೆಲ್ಲಾಟ ನಡೆಸುತ್ತಿದ್ದಾರೆಂಬ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ಬಿ.ಎನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು ಹಾಗೂ ಡಾ. ಮಹಿಮಾ ಕಾರ್ಯಕ್ರಮಾಧಿಕಾರಿ, ಎ.ಐ,ಸಿ.ಐ ಅಜಯ್ ರಾಜ್.ಡಿ ಶಹ, ಮಮತ ವಿ ಎ.ಡಿ.ಸಿ.2 ಮತ್ತು ಸಿಬ್ಬಂದಿ ವರ್ಗದವರು ಡಿ. 08ರಂದು ಪರಿಶೀಲನೆಗಾಗಿ ಮಿಡಿಗೇಶಿಗೆ ಭೇಟಿ ನೀಡಿದ್ದರು. ಸುಳಿವರಿತ ಕ್ಲಿನಿಕ್ಗಳ ಮತ್ತು ಮೆಡಿಕಲ್ ಶಾಪ್ಗಳ ಮಾಲೀಕರು ಅಂಗಡಿ ಬಂದ್ ಮಾಡಿದ್ದರು. ಆಗ ಸದರಿ ಅಂಗಡಿಗಳ ಫೋಟೋ ಕ್ಲಿಕ್ಕಿಸಿ ಕೊಂಡಿರುವುದಲ್ಲದೆ, ಕೆಲ ಕ್ಲಿನಿಕ್ಗಳ ನಾಮಫಲಕಗಳನ್ನು ತೆಗೆದುಕೊಂಡಿರುವ ಬಗ್ಗೆ ವರದಿಯಾಗಿರುತ್ತದೆ.
ಐ.ಡಿ.ಹಳ್ಳಿ ಗ್ರಾಮಕ್ಕೂ ಡಿ.ಹೆಚ್.ಓ ತಂಡ ಭೇಟಿ ನೀಡಿದ್ದು, ಅಲ್ಲಿ ವಿಶಾಲಾಕ್ಷಿ ಎನ್ನುವ ಮಹಿಳೆ ಕ್ಲಿನಿಕ್ ತೆರೆದಿದ್ದುದನ್ನು ಕಂಡು ವಿಚಾರಣೆಗೆ ಒಳಪಡಿಸಿದಾಗ, ಸ್ಪಷ್ಟ ಉತ್ತರ ಸಿಗದಿದ್ದರಿಂದ ಸದರಿ ಮಹಿಳೆ ವಿರುದ್ಧ ಡಿ.ಹೆಚ್.ಓ ಡಾ ನಾಗೇಂದ್ರಪ್ಪ ಬಿ.ಎನ್ ರವರು ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ನೀಡಿದ್ದು, ಮಿಡಿಗೇಶಿ ಪೋಲೀಸ್ ಠಾಣಾಧಿಕಾರಿ ನವೀನ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ತಾಲ್ಲೂಕಿನಲ್ಲಿ ಒಟ್ಟು 22 ನಕಲಿ ವೈದ್ಯರ ಮಾಹಿತಿಯಿದ್ದು, ನಾಲ್ಕು ಜನರ ಮೇಲೆ ಪ್ರಕರಣ ಈಗಾಗಲೇ ದಾಖಲಾಗಿ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ. ಅದರಲ್ಲಿನ ಒಂದು ಪ್ರಕರಣದಲ್ಲಿ ನೋಟೀಸ್ ನೀಡಿದ ತಕ್ಷಣ ಕ್ಲಿನಿಕ್ ತೆರವುಗೊಳಿಸಿ ದ್ದಾರೆ. ಇನ್ನುಳಿದ 17 ರಲ್ಲಿ ಎರಡು ಸಂಚಾರಿ ಕ್ಲಿನಿಕ್ಗಳಾಗಿರುತ್ತವೆ. ಉಳಿದ 15 ಕ್ಲಿನಿಕ್ನವರು ತಲೆ ಮರೆಸಿಕೊಂಡು ಓಡುತ್ತಿದ್ದಾರೆ. ಅವರ ಪತ್ತೆಗೆ ಕ್ರಮ ಕೈಗೊಳ್ಳುವು ದಾಗಿ ಡಿ.ಹೆಚ್.ಓ ಡಾ.ನಾಗೇಂದ್ರಪ್ಪ ಮತ್ತು ಟಿ.ಹೆಚ್.ಓ ಡಾ. ರಮೇಶ್ ಬಾಬು ಪತ್ರಿಕೆಗೆ ತಿಳಿಸಿದ್ದಾರೆ. ನಕಲಿ ವೈದ್ಯರ ಹಾವಳಿ ನಿಲ್ಲುವ ತನಕ ಮತ್ತೆ ಮತ್ತೆ ದಾಳಿ ಮುಂದುವರೆಸುವುದಾಗಿ ತಿಳಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








