ನವದೆಹಲಿ
ಪ್ರಪಂಚದಾದ್ಯಂತ 200 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಭಾರತದಲ್ಲೇ 50 ಕೋಟಿ ಹತ್ತಿರದ ಬಳಕೆದಾರರನ್ನು ಹೊಂದಿದೆ. ಇನ್ನು ಕೆಲವೇ ವರ್ಷದಲ್ಲಿ ಈ ಸಂಖ್ಯೆಯನ್ನು ದಾಟಲಿದೆ. ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಈ ಲವ್ಲಿ ಇನ್‌ಸ್ಟಾಂಟ್ ಮೆಸೇಜಿಂಗ್ ಅಪ್ಲಿಕೇಶನ್ ಭಾರತದಲ್ಲಿ ವರ್ಕ್ ಆಗುವುದಿಲ್ಲ ಎಂಬುದನ್ನೊಮ್ಮೆ ಊಹಿಸಿಕೊಳ್ಳಿ.
ಅಮೆರಿಕ ಮೂಲದ ಮೆಟಾ ಕಂಪನಿಯ ವಾಟ್ಸಾಪ್ ಈಗ ಭಾರತದ ಕೇಂದ್ರ ಸರ್ಕಾರದ ಐಟಿ ನಿಯಮದ ವಿರುದ್ಧ ಮುನಿಸಿಕೊಂಡು ಕೋರ್ಟ್ ಮೆಟ್ಟಿಲೇರಿದೆ. ಜಾಲತಾಣಗಳ ಅಪಾಯಕ್ಕೆ ಕಡಿವಾಣ ಹಾಕುವ ಹಿತದೃಷ್ಟಿಯಿಂದ ಭಾರತ ಕೇಂದ್ರ ಸರ್ಕಾರವು ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳೂ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ- 2021’ ಜಾರಿ ಮಾಡಿತ್ತು. ಈ ನೀತಿಯ ಪ್ರಕಾರ, ಭಾರತದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್‌ಗಳು, ಸರ್ಕಾರದ ಅಧಿಕಾರಿಗಳೂ ಕೇಳಿದಾಗ ಮಾಹಿತಿಯ ಮೂಲದ ವಿವರ ನೀಡಬೇಕಾಗುತ್ತದೆ.
ಅಂದರೆ, ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಒಂದು ಸಂದೇಶವನ್ನು ಮೊದಲು ಸೃಷ್ಟಿದವರ ವಿವರವನ್ನು ಸರ್ಕಾರ ಕೇಳಿದಾಗ ಸಂಬಂಧಿತ ಸಂಸ್ಥೆ / ಕಂಪನಿಗಳು ನೀಡಬೇಕು. ಇದರಿಂದಾಗಿ ಸುಳ್ಳು ಸುದ್ದಿ, ಪ್ರಚೋದನಾಕಾರಿ ಬರಹಗಳ ಮೂಲವನ್ನು ಗುರುತಿಸಿ ತಪ್ಪಿತಸ್ಥರನ್ನು ಶೀಘ್ರವೇ ಪತ್ತೆಹಚ್ಚಲು ಸಾಧ್ಯ. ಆದರೆ ಈ ನಿಯಮಲ್ಲೆ ಈಗ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಡೋಂಟ್ ಕೇರ್ ಎಂದಿವೆ.
ಅಪ್ಲಿಕೇಶನ್‌ಗಳು ಹೀಗೆ ಮಾಹಿತಿಯನ್ನು ಕೊಡಲು ಒಪ್ಪಿಕೊಂಡರೆ ಜನರು ಆ ಅಪ್ಲಿಕೇಶನ್ ಬಳಕೆಯನ್ನೇ ನಿಲ್ಲಿಸುವ ಸಾಧ್ಯತೆಯೂ ಇರುತ್ತದೆ. ಅಲ್ಲದೆ, ಬಳಕೆದಾರರ ಖಾಸಗಿತನವನ್ನು ರಕ್ಷಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವ ಅಪ್ಲಿಕೇಶನ್‌ಗಳ ವಿಶ್ವಾಸಾರ್ಹತೆಯೂ ಕುಸಿಯುತ್ತದೆ. ಇದೇ ಕಾರಣಕ್ಕೆ ವಾಟ್ಸಾಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ಹೊಸ ನಿಯಮದ ವಿರುದ್ಧ ದಿಲ್ಲಿ ಉಚ್ಚನ್ಯಾಲಯದ ಮೆಟ್ಟಿಲೇರಿತ್ತು.
ಭಾರತದ ಐಟಿ ನಿಯಮ ‘ಮಾಹಿತಿ ತಂತ್ರಜ್ಞಾನ ನಿಯಮ- 2021’ ಗೆ ಬದ್ಧ ಎಂದರೆ ಈಗ ವಾಟ್ಸಾಪ್ ತನ್ನ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಫೀಚರ್ ತೆಗೆಯಬೇಕು. ಇದು ತನ್ನ ಬಳಕೆದಾರರ ಗೌಪ್ಯತೆ ಹಾಗೂ ಮೂಲಭೂತ ಹಕ್ಕುಗಳನ್ನು ಕಸಿದಂತೆ, ಭಾರತದ ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಅಡಿಯಲ್ಲೂ ಬಳಕೆದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತೆ, ಹಾಗಾಗಿ ಈ ನಿಯಮವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂಬುದಾಗಿ ವಾಟ್ಸಾಪ್ ತನ್ನ ವಾದವನ್ನು ದೆಹಲಿ ಹೈಕೋರ್ಟ್ ಕೋರ್ಟ್ ಮುಂದೆ ಇಟ್ಟಿತ್ತು. ಅಷ್ಟೆ ಅಲ್ಲದೇ, ಜಗತ್ತಿನ ಬೇರೆಲ್ಲೂ ಈ ರೀತಿಯ ನಿಯಮಗಳು ಇಲ್ಲ ಎಂದೂ ವಾದಿಸಿತ್ತು
ದೆಹಲಿ ಉಚ್ಚನ್ಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ಜಸ್ಟೀಸ್ ಪ್ರೀತಮ್‌ಸಿಂಗ್ ಅರೋರಾ ಅವರನ್ನೊಳಗೊಂಡ ಪೀಠದ ಮುಂದೆ ವಾಟ್ಸಾಪ್ ಪರವಾಗಿ ವಾದಿಸುತ್ತಿರುವ ವಕೀಲ ತೇಜಸ್ ಕರಿಯಾ ಅವರು, ‘ಬಳಕೆದಾರರು ವಿಶ್ವಾಸದಿಂದ ವಾಟ್ಸಾಪ್ ಬಳಸುತ್ತಾರೆ. ಸರ್ಕಾರದ ನಿಯಮಕ್ಕೆ ಅನುಗುಣವಾಗಿ ಎಂಡ್ ಟು ಎಂಡ್ ಎನ್‌ಕ್ರಿಪ್ಯನ್ ತೆಗೆಯಬೇಕಾದರೆ ವಾಟ್ಸಾಪ್ ಭಾರತದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ’ ಎಂದು ಹೇಳಿದ್ದಾರೆ. ಭಾರತವನ್ನು ಬಿಟ್ಟು ಹೋಗುತ್ತೇವೆಯೇ ಹೊರತು, ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಹೇಳಿರುವ ವಾಟ್ಸಾಪ್ ನ ಈ ನಿಲುವು ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸದ್ಯ, ದಿಲ್ಲಿ ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 14 ಕ್ಕೆ ಮುಂದೂಡಿದೆ
ಎನ್‌ಕ್ರಿಪ್ಶನ್ ತೆಗೆದು ಹಾಕದೆ ಸಂದೇಶದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದಾದರೆ ವಾಟ್ಸಾಪ್ ಅದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಹಿಡಿಯಬೇಕು. ಅಥವಾ ಪರ್ಯಾಯ ಮಾರ್ಗವನ್ನು ತಿಳಿಸಬೇಕು. ವಾಟ್ಸಾಪ್ ಬಳಕೆದಾರರ ಮಾಹಿತಿಯನ್ನು ಬಳಸಿಕೊಂಡು ಹಣ ಮಾಡುತ್ತಿದೆ. ಹೀಗಿರುವಾಗ ಬಳಕೆದಾರರ ಗೌಪ್ಯತೆಯನ್ನು ರಚಿಸುವುದಾಗಿ ಹೇಳುವುದಕ್ಕೆ ವಾಟ್ಸಾಪ್‌ಗೆ ಕಾನೂನುಬದ್ಧ ಅರ್ಹತೆ ಇಲ್ಲ.
ಇದಲ್ಲದೆ ಫೇಸ್‌ಬುಕ್‌ನ ಮೇಲೆ ನಿಯಂತ್ರಣ ಹೇರುವ ಪ್ರಯತ್ನಗಳು ಹಲವು ರಾಷ್ಟ್ರಗಳಲ್ಲಿ ನಡೆಯುತ್ತಿದೆ ಎಂದು ವಾದ ಮಂಡಿಸಿರುವ ಕೇಂದ್ರವು, ಕೋಮುಗಲಭೆಗಳಂತಹ ಸನ್ನಿವೇಶಗಳಲ್ಲಿ ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವುದು ಅತ್ಯಗತ್ಯ ಎಂದು ವಾದ ಮುಂದಿಟ್ಟಿದೆ
ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಮೂಲಕ ಬಳಕೆದಾರರ ಖಾಸಗಿತನವನ್ನು ರಕ್ಷಿಸುತ್ತೇವೆ ಎಂದು ವಾಟ್ಸಾಪ್ ಹೇಳುತ್ತದೆ. ಅದರೆ ವಾಟ್ಸಾಪ್ ಚಾಟ್‌ನಲ್ಲಿ ಯಾವುದಾದರೂ ಪ್ರಾಡಕ್ಟ್‌ಗಳ ವಿಚಾರ ಪ್ರಸ್ತಾಪಿಸಿದರೆ ಅದೇ ಪ್ರಾಡಕ್ಟ್ ಜಾಹೀರಾತುಗಳು ಫೇಸ್‌ಬುಕ್‌ನಲ್ಲಿ ಕಾಣಸಿಕೊಳ್ಳಲು ಆರಂಭಿಸುತ್ತವೆ. ಅಲ್ಲದೇ, ಗೂಗಲ್ ಸಹ ಈ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ.
ಸಂದೇಶ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ಮೂರನೇ ವ್ಯಕ್ತ, ತಂತ್ರಜ್ಞಾನದ ಪ್ರವೇಶ ಅಥವಾ ಕದ್ದಾಲಿಕೆಗೆ ಆಸ್ಪದ ಇಲ್ಲವೆಂದಾದಲ್ಲಿ ಫೇಸ್‌ಬುಕ್ ಮತ್ತು ಗೂಗಲ್‌ಗಳಿಗೆ ಖಾಸಗಿ ಮಾತುಕತೆಗಳ ನಡುವೆ ಉಲ್ಲೇಖಿಸಿದ ಉತ್ಪನ್ನಗಳ ಬಗ್ಗೆ ತಿಳಿಸುವವರು ಯಾರು? ಅಪ್ಲಿಕೇಶನ್ ನ ಆಲ್ಗಾರಿದಮ್ಮೇ ಈ ಕೆಲಸ ಮಾಡುತ್ತದೆ ಎಂದಾದರೂ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನುವುದು ಎಲ್ಲಿದೆ ಹೇಳಿ? ಎನ್ನುವ ಪ್ರಶ್ನೆಗೆ ವಾಟ್ಸಾಪ್ ಉತ್ತರ ಕೊಡಬೇಕಾಗುತ್ತದೆ ಅಲ್ಲವೇ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ