ಲತಾ ಅವಿವಾಹಿತರಾಗಿಯೇ ಉಳಿದಿದ್ದೇಕೆ? ಅವರ ಬಾಳಲ್ಲಿ ಬಂದಿದ್ದ ಆ ವ್ಯಕ್ತಿ ಯಾರು? ಗಾನಕೋಗಿಲೆಯ ದುರಂತಮಯ ಬದುಕಿನ ಕಥೆಯಿದು.

ಮುಂಬೈ: 

        ದೇಶ- ವಿದೇಶಗಳಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿ ಮಾಡಿ,ದಾದಾಸಾಹೇಬ್ ಫಾಲ್ಕೆ, ಪದ್ಮಭೂಷಣ, ಭಾರತರತ್ನದಂಥ ಅತ್ಯುನ್ನತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಂಗೀತ ಲೋಕವನ್ನು ತ್ಯಜಿಸಿಹೋದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರ ವೈಯಕ್ತಿಕ ಬದುಕು ಮಾತ್ರ ನೋವಿನಿಂದ ಕೂಡಿದ್ದು.

10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿ ಸಂಗೀತಪ್ರಿಯರಿಗೆ ರಸದೌತಣ ನೀಡಿದ್ದ, ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಪಡೆದ ಈ ಕಲಾವಿದೆಯ ಬಾಳು ಮಾತ್ರ ಒಂದು ರೀತಿಯ ದುರಂತ ಕಥೆಯೇ!

ಹೌದು. ಲತಾ ಮಂಗೇಶ್ಕರ್‌ ಕೊನೆಯವರೆಗೂ ಅವಿವಾಹಿತೆಯಾಗಿಯೇ ಉಳಿದುಬಿಟ್ಟರು. ಇದಕ್ಕೆ ಅವರ ಬಾಲ್ಯದ ದಿನಗಳೂ ಕಾರಣವಾದರೆ, ಯೌವನದಲ್ಲಿ ಅವರ ಬಾಳಲ್ಲಿ ಬಂದ ಆ ವ್ಯಕ್ತಿಯೂ ಕಾರಣವಾಗಿಬಿಟ್ಟರು.

ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿಯಾಗಿ ಮಧ್ಯಪ್ರದೇಶದ ಇಂದೋರಿನಲ್ಲಿ 1929ರ ಸೆಪ್ಟೆಂಬರ್‌ 28ರಂದು ಜನಿಸಿದ್ದ ಲತಾ ಮಂಗೇಶ್ಕರ್‌ ಅವರು ಮನೆಯಲ್ಲಿ ಹಿರಿಯ ಮಗಳು.

ಇವರ ತಾಯಿ ತೀರಿಕೊಂಡ ಮೇಲೆ ತಂದೆ ಇನ್ನೊಂದು ಮದುವೆಯಾದರು. ಒಟ್ಟೂ ನಾಲ್ವರು ಹೆಣ್ಣುಮಕ್ಕಳು (ಲತಾ, ಆಶಾ, ಮೀನಾ, ಉಷಾ) ಮತ್ತು ಓರ್ವ ಗಂಡು ಮಗ (ಹೃದಯನಾಥ್) ಈ ಕುಟುಂಬದಲ್ಲಿ ಜನಿಸಿದರು.

ತಮ್ಮ 13ನೇ ವಯಸ್ಸಿಗೇ ಲತಾ ತಂದೆಯನ್ನು ಕಳೆದುಕೊಂಡರು. ಹಿರಿಯವಳಾಗಿದ್ದ ಇವರಿಗೆ ಅಮ್ಮನ ಜತೆಗೆ ಮೂವರು ತಂಗಿಯರು ಹಾಗೂ ತಮ್ಮನ ಜವಾಬ್ದಾರಿಯನ್ನು ಹೊರುವ ಅನಿವಾರ್ಯತೆ ಉಂಟಾಯಿತು. ತಾವು ಶಾಲೆಯನ್ನು ತೊರೆದರೂ ತಮ್ಮ ಮತ್ತು ತಂಗಿಯರ ವಿದ್ಯಾಭ್ಯಾಸಕ್ಕಾಗಿ ನಾಟಕ, ಅಭಿನಯಗಳಲ್ಲಿ ತೊಡಗಿಸಿಕೊಂಡರು.

ಆರಂಭದಲ್ಲಿ ಇವರಿಗೆ ಸೋಲೇ ಉಂಟಾಗಿತ್ತು. ಆದರೆ ಛಲ ಬಿಡದ ಲತಾ, ಸಂಸಾರವನ್ನು ಸರಿದೂಗಿಸಿಕೊಳ್ಳಲು ಹೆಣಗಾಡಿದರು. ನಂತರ ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗಿ, ಗಾಯಕಿಯಾಗಿ ಪ್ರಸಿದ್ಧಿ ಪಡೆದರು.

ತಮ್ಮ-ತಂಗಿಯರಿಗೆ ಮದುವೆ ಮಾಡಿದರು. ಅವರೆಲ್ಲರ ಜೀವನ ಒಂದು ಹಂತಕ್ಕೆ ಬರುವಷ್ಟರಲ್ಲಿ ಲತಾ ಅವರಿಗೆ ವಯಸ್ಸಾಗಿತ್ತು. ತಮ್ಮ ಮತ್ತು ತಂಗಿಯರ ಮಕ್ಕಳ ಆರೈಕೆ ಮಾಡಿ ತಮ್ಮ ಜೀವವನ್ನು ತ್ಯಾಗ ಮಾಡಿ ತ್ಯಾಗಮಯಿಯಾಗಿಬಿಟ್ಟರು.

ಆ ವ್ಯಕ್ತಿ ಯಾರು?

ಇದೂ ಒಂದು ಕಾರಣವಾದರೆ, ಲತಾ ಮಂಗೇಶ್ಕರ್‌ ಬದುಕಲ್ಲಿ ಬಂದ ಆ ವ್ಯಕ್ತಿ ಕೂಡ ಇವರು ಕೊನೆಯವರೆಗೂ ಮದುವೆಯಾಗದೇ ಇರಲು ನಿರ್ಧರಿಸಿರುವ ಹಿಂದೆ ಒಬ್ಬ ವ್ಯಕ್ತಿಯೂ ಕಾರಣವಾಗಿದ್ದಾರೆ. ಅವರೇ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಮಹಾರಾಜ ರಾಜ್ ಸಿಂಗ್ ಡುಂಗರ್​ಪುರ್.

ಲತಾ ಅವರು ಕ್ರಿಕೆಟ್‌ ಪ್ರಿಯರು. ಅದರಂತೆಯೇ ಅವರಿಗೆ ರಾಜ್‌ ಸಿಂಗ್‌ ಡುಂಗರ್​ಪುರ್ ಅವರ ಮೇಲೆ ಪ್ರೀತಿಯುಂಟಾಗಿತ್ತು. ಲತಾ ಅವರ ತಮ್ಮ ಹೃದಯನಾಥ್ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಡುಂಗರ್​ಪುರ್ ಸ್ನೇಹಿತರಾಗಿದ್ದರಿಂದ ಮನೆಯಲ್ಲಿಯೇ ಇಬ್ಬರೂ ಸಿಗುತ್ತಿದ್ದರು. ಆಗ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ರಾಜ್ ಸಿಂಗ್ ರಾಜಸ್ಥಾನದ ರಾಜಮನೆತನಕ್ಕೆ ಸೇರಿದವರಾಗಿದ್ದರು.

ಡುಂಗರ್‌ಪುರದ ಅಂದಿನ ಆಡಳಿತಗಾರರಾಗಿದ್ದ ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜಿಯವರ ಮಗ. ಇವರ ಪ್ರೀತಿಯ ವಿಷಯ ರಾಜ್ ಸಿಂಗ್ ಮನೆಯರಿಗೂ ತಿಳಿದಿತ್ತು. ಆದರೆ , ರಾಜ ವಂಶಸ್ಥರಾಗಿದ್ದ ರಾಜ್ ಸಿಂಗ್ ಜನಸಾಮಾನ್ಯರನ್ನು ಮದುವೆಯಾಗುವಂತಿಲ್ಲ ಎಂಬ ನಿಯಮ ಇದ್ದುದರಿಂದ ಅವರ ವಿವಾಹ ಸಾಧ್ಯವಾಗಲೇ ಇಲ್ಲ. ಇದು ಲತಾ ಹಾಗೂ ರಾಜ್‌ ಸಿಂಗ್‌ ಇಬ್ಬರನ್ನೂ ಬಹಳ ಕುಗ್ಗಿಸಿಬಿಟ್ಟಿತ್ತು.

ಇದು ಎಷ್ಟರಮಟ್ಟಿಗೆ ಎಂದರೆ ಇತ್ತ ಲತಾ ಮಂಗೇಶ್ಕರ್ ಬೇರೆ ಯಾರನ್ನೂ ಮದುವೆಯಾಗದಿದ್ದರೆ ರಾಜ್ ಸಿಂಗ್ ಕೂಡ ಅವಿವಾಹಿತರಾಗಿಯೇ ಉಳಿದುಬಿಟ್ಟರು. ತಾನು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂದು ರಾಜ್‌ ಸಿಂಗ್‌ ಅಪ್ಪನ ಮುಂದೆ ಪ್ರತಿಜ್ಞೆ ಮಾಡಿದರು. ಹೀಗಾಗಿ, ಕೊನೆಯವರೆಗೂ ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಉತ್ತಮ ಸ್ನೇಹಿತರಾಗೇ ಉಳಿದರು.

2009ರ ಸೆಪ್ಟೆಂಬರ್ 12ರಂದು ರಾಜ್ ಸಿಂಗ್ ಡುಂಗರ್​ಪುರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಮುಂಬೈನಲ್ಲಿ ನಿಧನರಾದರು. ಒಮ್ಮೆ ಸಂದರ್ಶನವೊಂದರಲ್ಲಿ ಲತಾ ಮಂಗೇಶ್ಕರ್ ಅವರ ಮದುವೆಯ ಬಗ್ಗೆ ಕೇಳಿದ್ದ ಪ್ರಶ್ನೆಗೆ ಅವರು, ‘ನಮ್ಮ ಜೀವನದಲ್ಲಿ ಎಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತದೆ.

ಏನಾಗುತ್ತದೆಯೋ ಅದೆಲ್ಲವೂ ಒಳ್ಳೆಯದೇ ಆಗುತ್ತದೆ, ನಮ್ಮ ಜೀವನದಲ್ಲಿ ಏನು ನಡೆಯುವುದಿಲ್ಲವೋ ಅದೂ ಕೂಡ ಒಳ್ಳೆಯದಕ್ಕೇ ಆಗಿರುತ್ತದೆ. ಸುಮಾರು ನಾಲ್ಕೈದು ದಶಕಗಳ ಹಿಂದೆ ನೀವು ಇದನ್ನು ಕೇಳಿದ್ದರೆ, ಬಹುಶಃ ನಿಮಗೆ ಬೇರೆ ಉತ್ತರ ಸಿಗುತ್ತಿತ್ತು. ಆದರೆ ಇಂದು ನನಗೆ ಅಂತಹ ಆಲೋಚನೆಗಳಿಗೆ ಅವಕಾಶವಿಲ್ಲ’ ಎಂದು ಹೇಳಿದ್ದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap