ತೈಲ ಬೆಲೆ ನಿರ್ವಹಣೆಗೆ ಬಿಡೆನ್ ಮಾತನಾಡಲಿಚ್ಚಿಸಿದರೆ ಸೌದಿ ಮತ್ತು ಯುಎಇ ಮುಖ ತಿರುಗಿಸಿಕೊಂಡವೇಕೆ?

ರಷ್ಯದ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವ ತರಾತುರಿಯಲ್ಲಿ ಅಲ್ಲಿಂದ ಬರುವ ಕಚ್ಚಾತೈಲವನ್ನು ಮುಂಚೂಣಿಯಲ್ಲಿ ನಿಂತು ನಿರ್ಬಂಧಿಸಿದವರು ಅಮೆರಿಕ ಮತ್ತು ಇಂಗ್ಲೆಂಡ್.

ಹಾಗೆ ನೋಡಿದರೆ ರಷ್ಯ ರಫ್ತು ಮಾಡುವ ಕಚ್ಚಾತೈಲದಲ್ಲಿ ಅಮೆರಿಕ ಕೇವಲ ಶೇ.1 ಪಾಲನ್ನು ಮಾತ್ರ ಆಮದು ಮಾಡಿಕೊಳ್ಳುತ್ತದೆ. ಆದರೆ, ಅದರಾಚೆಗೆ ಯುದ್ಧದ ಕಾರಣದಿಂದ ಅವ್ಯವಸ್ಥೆಗೆ ಒಳಗಾಗಿರುವ ಪೂರೈಕೆ ಸರಪಳಿ ಹಾಗೂ ಡಾಲರ್ ಪ್ರತಿಬಂಧಗಳಿಂದ ಉಂಟಾಗಿರುವ ಮುಗ್ಗಟ್ಟಿನಿಂದಾಗಿ ರಷ್ಯದ ಕಚ್ಚಾತೈಲ ಪೂರೈಕೆಗೆ ಹೊಡೆತ ಬಿತ್ತು.

ಆದರೀಗ, ಇದರ ಬಿಸಿಯನ್ನು ಖುದ್ದು ಅಮೆರಿಕವೇ ಅನುಭವಿಸಬೇಕಾದ ವ್ಯಂಗ್ಯವೊಂದು ಎದುರಿಗಿದೆ. ಏಕೆಂದರೆ, ರಷ್ಯವನ್ನು ಪ್ರತಿಬಂಧಿಸುವುದಕ್ಕೆ ಹೋಗಿ ಅಂತಾರಾಷ್ಟ್ರೀಯಮಟ್ಟದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗಿದೆ. ಅದಾಗಲೇ ತೀವ್ರ ಹಣದುಬ್ಬರ ಎದುರಿಸುತ್ತಿರುವ ಅಮೆರಿಕದಲ್ಲಿ ಇದು ಮತ್ತೆ ಬೆಲೆ ಏರಿಕೆಗೆ ಕಾರಣವಾಗುತ್ತಿದೆ.

ಇವೆಲ್ಲವುದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ಅಮೆರಿಕ ಅಧ್ಯಕ್ಷ ಜೊ ಬಿಡೆನ್ ತಮ್ಮ ಮಿತ್ರರಾದ ಸೌದಿ ಅರೆಬಿಯಾ ಹಾಗೂ ಯುಎಇಗಳನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸಿದ್ದಾರೆ. ನಿಮ್ಮ ತೈಲ ಉತ್ಪಾದನೆಯನ್ನು ಹೆಚ್ಚಿಸಿ ಆ ಮೂಲಕ ಬೆಲೆಯಲ್ಲಿ ಸ್ಥಿರತೆ ತನ್ನಿ ಎಂದು ಕೇಳಿಕೊಳ್ಳುವುದು ಬಿಡೆನ್ ಉದ್ದೇಶವಾಗಿತ್ತು.

ಕ್ರೂರ ವ್ಯಂಗ್ಯ ಏನು ಗೊತ್ತಾ?

ಸೌದಿ ಅರೇಬಿಯ ಮತ್ತು ಯುಎಇಯ ರಾಜರು ಬಿಡೆನ್ ಕರೆಯನ್ನು ಸ್ವೀಕರಿಸುವುದಕ್ಕೇ ಒಪ್ಪಿಲ್ಲ. ಹಾಗಂತ ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಪ್ರಮುಖ ಪಾಶ್ಚಾತ್ಯ ಪತ್ರಿಕೆಗಳೆಲ್ಲ ವರದಿ ಮಾಡಿವೆ.

ಬಿಡೆನ್ ಈ ಮೊದಲಿನಿಂದಲೂ ಸೌದಿಗೆ ನೀಡಬೇಕಾದ ಗೌರವ ಕಡಿಮೆ ಮಾಡಿದ್ದು, ಗಲ್ಫ್ ರಾಷ್ಟ್ರಗಳು ವಿರೋಧಿಸಿಕೊಂಡಿರುವ ಇರಾನ್ ಜತೆ ಮತ್ತೆ ನ್ಯೂಕ್ಲಿಯರ್ ಒಪ್ಪಂದದ ಮಾತುಕತೆಗೆ ಜೀವ ಕೊಡಲು ಮುಂದಾಗಿರುವುದು, ಯಾವ ವೆನಿಜುವೆಲಾವನ್ನು ಕೆಟ್ಟದ್ದೆಂದು ಬಿಂಬಿಸಿ ಅಲ್ಲಿನ ತೈಲಕ್ಕೆ ನಿರ್ಬಂಧ ಹೇರಲಾಗಿತ್ತೋ ಅದಕ್ಕೀಗ ಏಕಾಏಕಿ ಒಳ್ಳೇತನದ ಪ್ರಮಾಣಪತ್ರ ಕೊಡುತ್ತ ಮತ್ತೆ ವ್ಯವಹಾರಕ್ಕಿಳಿದಿರುವ ಅಮೆರಿಕದ ದ್ವಂದ್ವ ನೀತಿ ಇವೆಲ್ಲವೂ ಸೌದಿ ಮತ್ತು ಯುಎಇ ಈ ಬಗೆಯ ತಣ್ಣನೆಯ ಪ್ರತಿಕ್ರಿಯೆ ಕೊಡುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ, ರಷ್ಯವನ್ನು ಏಕಾಂಗಿಯಾಗಿಸುತ್ತೇನೆ ಎಂದು ಹೊರಟ ಅಮೆರಿಕವು ಒಳಗೊಳಗೇ ತಾನು ಏಕಾಂಗಿಯಾಗುತ್ತಿದೆಯಾ ಎಂಬುದು ಸದ್ಯದ ಪ್ರಶ್ನೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link