ನವದೆಹಲಿ :
ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್‌ಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದೀಗ ಈ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದರಂತೆ ಡಬ್ಲ್ಯುಪಿಎಲ್ನ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 15 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಕದನಕ್ಕೆ ವಡೋದರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಟಂಬಿ ಕ್ರೀಡಾಂಗಣ ಆತಿಥ್ಯವಹಿಸಲಿದೆ.
ಈ ಬಾರಿ ಬಿಸಿಸಿಐ ಡಬ್ಲ್ಯುಪಿಎಲ್ ವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಲೀಗ್‌ನ ಮೊದಲ ಸೀಸನ್ ಮುಂಬೈನ ಎರಡು ವಿಭಿನ್ನ ಮೈದಾನಗಳಲ್ಲಿ ಮಾತ್ರ ನಡೆದಿದ್ದರೆ, ಕೊನೆಯ ಸೀಸನ್ ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆದಿತ್ತು. ಇದೀಗ 4 ಸ್ಥಳಗಳಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಈ ಬಾರಿಯ ಲೀಗ್ ಲಕ್ನೋ, ಮುಂಬೈ, ವಡೋದರಾ ಮತ್ತು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, 30 ದಿನಗಳಲ್ಲಿ 22 ಪಂದ್ಯಗಳು ನಡೆಯಲಿವೆ.
ಪ್ರತಿ ಬಾರಿಯಂತೆ ಈ ಬಾರಿಯೂ ಹಾಲಿ ಚಾಂಪಿಯನ್‌ಗಳ ನಡುವಿನ ಪಂದ್ಯದೊಂದಿಗೆ ಹೊಸ ಸೀಸನ್ ಆರಂಭವಾಗಲಿದೆ. ಕಳೆದ ಸೀಸನ್ನ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೆಬ್ರವರಿ 14 ರಂದು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಪಂದ್ಯಾವಳಿಯ ಮೊದಲ 6 ಪಂದ್ಯಗಳು ಬರೋಡದಲ್ಲಿಯೇ ನಡೆಯಲಿದ್ದು, ನಂತರ ಫೆಬ್ರವರಿ 21 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಟೂರ್ನಿಯ 8 ಪಂದ್ಯಗಳು ನಡೆಯಲಿವೆ. ಮಾರ್ಚ್ 3 ರಿಂದ ಲಕ್ನೋದಲ್ಲಿ ಪಂದ್ಯಗಳು ಪ್ರಾರಂಭವಾಗಲಿದ್ದು, ಈ ಮೈದಾನದಲ್ಲಿ 4 ಪಂದ್ಯಗಳು ನಡೆಯಲಿವೆ. ಅಂತಿಮವಾಗಿ ಮುಂಬೈನ ಐತಿಹಾಸಿಕ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಕೊನೆಗೊಳ್ಳಲಿದೆ. ಇದೇ ಮೈದಾನದಲ್ಲೇ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ ಕೊನೆಯ 4 ಪಂದ್ಯಗಳು ನಡೆಯಲಿವೆ.
ಈ ವರ್ಷ ಟೂರ್ನಿ ನಡೆಯುವ ದಿನಗಳನ್ನು ಹೆಚ್ಚು ಮಾಡಲಾಗಿದ್ದು, ಈ ಮೂಲಕ ಆಟಗಾರ್ತಿಯರಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯಾವಕಾಶ ಸಿಗಲಿದೆ. ಕಳೆದ ಬಾರಿ ಈ ಟೂರ್ನಿ 24 ದಿನಗಳ ಕಾಲ ನಡೆದಿತ್ತು. ಆದರೆ ಈ ಬಾರಿ ಈ ಟೂರ್ನಿಯನ್ನು 30 ದಿನಗಳಿಗೆ ವಿಸ್ತರಿಸಲಾಗಿದೆ. ಪಂದ್ಯಾವಳಿಯು ಫೆಬ್ರವರಿ 14 ರಿಂದ ಪ್ರಾರಂಭವಾಗಿ ಮಾರ್ಚ್ 15 ರವರೆಗೆ ನಡೆಯಲಿದೆ. ದಿನವೊಂದಕ್ಕೆ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಲಾಗುತ್ತದೆ. ಹೀಗಾಗಿ ಈ ಬಾರಿ ಡಬಲ್ ಹೆಡರ್ ಪಂದ್ಯಗಳು ಅಂದರೆ ಒಂದು ದಿನದಲ್ಲಿ 2 ಪಂದ್ಯಗಳು ನಡೆಯುವುದಿಲ್ಲ. ಆದ್ದರಿಂದ ಈ ಅವಧಿಯಲ್ಲಿ ತಂಡಗಳು ಒಟ್ಟು 8 ದಿನಗಳ ವಿಶ್ರಾಂತಿ ದಿನಗಳನ್ನು ಪಡೆಯುತ್ತವೆ. ಅಲ್ಲದೆ, ಪ್ರತಿ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
