ಯೋಗ ಜ್ಞಾನ ಮಾತ್ರವಲ್ಲ ವಿಜ್ಞಾನ ಕೂಡ ಹೌದು :ಮೋದಿ

ಶ್ರೀನಗರ: 

     ಇಡೀ ಜಗತ್ತಿನ ಒಳಿತಿಗಾಗಿ ಇರುವ ಯೋಗವನ್ನು ಪ್ರಬಲ ವಿಷಯವಾಗಿ ಇಂದು ಜಗತ್ತು ನೋಡುತ್ತಿದೆ. ಭೂತಕಾಲದ ವಿಷಯಗಳನ್ನು ಬಿಟ್ಟು ಪ್ರಚಲಿತದಲ್ಲಿ ನೆಮ್ಮದಿಯಿಂದ ಆರೋಗ್ಯಯುತವಾಗಿ ಹೇಗೆ ಬದುಕಬೇಕೆಂಬುದನ್ನು ಯೋಗ ನಮಗೆ ತೋರಿಸಿಕೊಟ್ಟು ಬದುಕಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

     ಶ್ರೀನಗರದ ಶೇರ್-ಐ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC) ನಲ್ಲಿ ನಡೆದ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸ್ವತಃ ಯೋಗಾಭ್ಯಾಸ ಮಾಡಿದ ನಂತರ ಸಭಿಕರು ಮತ್ತು ಯೋಗಪಟುಗಳನ್ನುದ್ದೇಶಿಸಿ ಮಾತನಾಡಿದ ಅವರು ಯೋಗವು, ಸುತ್ತಲಿನ ಜಗತ್ತಿನ ಅಭಿವೃದ್ಧಿ ಮೇಲೆ ತಮ್ಮ ಪ್ರಗತಿ ಸಂಬಂಧ ಹೊಂದಿದೆ ಎಂಬುದನ್ನು ಯೋಗ ಮೂಲಕ ಜನರು ಅರ್ಥಮಾಡಿಕೊಂಡಿದ್ದಾರೆ ಎಂದರು.

   ಯೋಗವು ಜನರ ಭೂತಕಾಲದ ಅನಗತ್ಯ ವಿಷಯಗಳನ್ನು ಬಿಟ್ಟು ಪ್ರಸ್ತುತ ಕ್ಷಣದಲ್ಲಿ ಬದುಕಲು ಸಹಾಯ ಮಾಡುತ್ತದೆ ಎಂದರು. ನಮ್ಮ ಮನಸ್ಸಿನೊಳಗೆ ಶಾಂತಿ ನೆಲೆಸಿದಾಗ ನಮ್ಮ ಸುತ್ತಮುತ್ತಲಿರುವವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಯೋಗವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ತೋರಿಸುತ್ತಿದೆ ಎಂದರು.

    ಯೋಗವು ಜ್ಞಾನ ಮಾತ್ರವಲ್ಲ ವಿಜ್ಞಾನವು ಕೂಡ ಆಗಿದೆ, ಇಂದು ಮಾಹಿತಿ ಸಂಪನ್ಮೂಲಗಳ ಪ್ರವಾಹವೇ ಇದೆ ಅಂತಹ ಪರಿಸ್ಥಿತಿಯಲ್ಲಿ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ, ಇದರ ಪರಿಹಾರವು ಯೋಗದಲ್ಲಿದೆ ಎಂದರು.

    130ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಅಮೆರಿಕದ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆ ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತು. ಯೋಗಾಸನದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ, ಯೋಗ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಯೋಗಾಭ್ಯಾಸದಿಂದ ಅನೇಕ ರೋಗಗಳಿಗೆ ಮುಕ್ತಿ ಸಿಗಲಿದೆ, ರೋಗಗಳು ಗುಣಮುಖವಾಗುವ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಹೇಳಿದರು.

    ಆರೋಗ್ಯ ರಕ್ಷಣೆ, ಸಮಾಜ ಸ್ವಾಸ್ಥ್ಯ ಕಾಪಾಡಲು ಯೋಗ ಅತ್ಯಗತ್ಯ,ಯೋಗ ದಿನನಿತ್ಯದ ಜೀವನಕ್ಕೆ ಸಹಾಯಕವಾಗಲಿದೆ ಎಂದರು. ಪ್ರಪಂಚದ ಎಲ್ಲಾ ಹಿರಿಯ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ನನ್ನೊಂದಿಗೆ ಯೋಗದ ಬಗ್ಗೆ ಚರ್ಚಿಸುತ್ತಾರೆ. ಇದು ಪ್ರಪಂಚದ ಜನರ ದೈನಂದಿನ ಜೀವನದ ಭಾಗವಾಗುತ್ತಿದೆ. ಸೌದಿ ಅರೇಬಿಯಾ ಇದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಿದೆ. ಜರ್ಮನಿಯಲ್ಲಿ 1.5 ಕೋಟಿ ಜನರು ಯೋಗಾಭ್ಯಾಸವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.

    ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಎಸ್‌ಕೆಐಸಿಸಿಯ ಹುಲ್ಲುಹಾಸಿನ ಮೇಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆದರೆ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದ್ದರಿಂದ ನಂತರ ಮನೆಯೊಳಗೆ ಯೋಗಾಭ್ಯಾಸದ ಸ್ಥಳವನ್ನು ಸ್ಥಳಾಂತರಿಸಬೇಕಾಯಿತು.

   ಮುಂಜಾನೆ ಮಳೆಯಿಂದಾಗಿ ದಾಲ್ ಸರೋವರದ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಗಳಿಗೆ ಅಡ್ಡಿಯಾಯಿತು ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರ ಕಣಿವೆಯಾದ್ಯಂತ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದು, ಬಯಲು ಯೋಗ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    10 ವರ್ಷಗಳ ಹಿಂದೆ 2014ರಲ್ಲಿ ವಿಶ್ವಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು. ಅಂದಿನಿಂದ ಇದನ್ನು ವಿವಿಧ ವಿಷಯಗಳಲ್ಲಿ ಆಚರಿಸಲಾಗುತ್ತಿದೆ. 2024 ರ ಯೋಗ ದಿನದ ಧ್ಯೇಯವಾಕ್ಯ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap