ಕಲಬುರಗಿ:
ಪರೀಕ್ಷೆ ಬರೆಯುವುದಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ಪ್ರಕೃತಿ ವೈಪರೀತ್ಯವನ್ನೇ ದಿಟ್ಟವಾಗಿ ಎದುರಿಸಿ ನಿಂತ ಘಟನೆ ಕಲಬುರಗಿಯಿಂದ ವರದಿಯಾಗಿದೆ. ಈಕೆ ಪರೀಕ್ಷೆ ಬರೆಯುವುದಕ್ಕಾಗಿ, ಉಕ್ಕಿ ಹರಿಯುತ್ತಿದ್ದ ನದಿಯನ್ನೇ ಪ್ರಾಣದ ಹಂಗು ತೊರೆದು ದಾಟಿ ಹೋಗಿದ್ದಾಳೆ. ಆಕೆಗೆ ಆಕೆಯ ತಂದೆ ನೆರವಾಗಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸಂಗಾವಿ (ಟಿ) ಗ್ರಾಮದಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿವೆ.
ಬಿಎ ಪೈನಲ್ ಇಯರ್ ವಿದ್ಯಾರ್ಥಿನಿ ರಾಣಿಯಿಂದ ಈ ಸಾಹಸ ನಡೆದಿದೆ. ಈಕೆ ಸೇಡಂ ಪಟ್ಟಣಕ್ಕೆ ಹೋಗಿ ಬಿಎ 6ನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಿತ್ತು. ಆದರೆ ಮುಂಜಾನೆ ಜೋರಾಗಿ ಮಳೆ ಬಂದ ಪರಿಣಾಮ ಕಾಗಿಣಾ ನದಿ ಉಕ್ಕಿ ಹರಿದಿದ್ದು, ಸೇತುವೆಯ ಮೇಲೆ ಸೊಂಟದ ಮಟ್ಟ ನೀರು ಬಂದಿದೆ. ಸೇಡಂ ಪಟ್ಟಣಕ್ಕೆ ತೆರಳಬೇಕಿದ್ದರೆ ಬಸ್ಸು ಹಿಡಿಯಬೇಕಿದ್ದು, ಅದು ಸೇತುವೆಯ ಆ ಕಡೆಗಿದೆ. ವಾಹನ ಚಾಲಕರು ಉಕ್ಕಿ ಹರಿಯುವ ನದಿ ದಾಟಲು ಒಪ್ಪಿಲ್ಲ. ಈ ಸಂದರ್ಭದಲ್ಲಿ ಯುವತಿ ಧೈರ್ಯ ಮಾಡಿ ಸೇತುವೆ ದಾಟಲು ಮುಂದಾಗಿದ್ದಾಳೆ.
ಆಗ ತಂದೆ ಆಕೆಗೆ ನೆರವಾಗಿದ್ದಾರೆ. ತಂದೆಯ ಕೈಹಿಡಿದು ಆಕೆ ಕಾಗಿಣಾ ನದಿ ದಾಟಿದ್ದು, ಬ್ಯಾಗ್ ಹೆಗಲಿಗೆ ಹಾಕಿಕೊಂಡು, ಮಗಳ ಕೈಹಿಡಿದು ನದಿ ದಾಟಿಸಿದ್ದಾರೆ. ನಂತರ ಪರೀಕ್ಷೆ ಬರೆದಿದ್ದಾಳೆ. ತಂದೆ- ಮಗಳು ಉಕ್ಕಿ ಹರಿಯುತ್ತಿರುವ ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
