ಬೆಂಗಳೂರು:
ಪ್ರಸಕ್ತ ವರ್ಷದ ಹಜ್ ಯಾತ್ರಿಕರ ಅಂತಿಮ ಹಂತದ ತಂಡಕ್ಕೆ ಗುರುವಾರ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಅವರು ಶುಭ ಕೋರಿ ಬೀಳ್ಕೊಟ್ಟರು.
ಹಜ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಈ ಬಾರಿಯ ಹಜ್ ಯಾತ್ರೆ ಎಲ್ಲರ ಸಹಕಾರದಿಂದ ವ್ಯವಸ್ಥಿತ ಆಯೋಜನೆಯಿಂದ ಯಶಸ್ವಿ ಆಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಜೂನ್ 6 ರಂದು ಆರಂಭ ಗೊಂಡ ಪವಿತ್ರ ಹಜ್ ಯಾತ್ರೆ ಪ್ರಕ್ರಿಯೆ ಇದುವರೆಗೂ ಸುಸೂತ್ರವಾಗಿ ನೆರವೇರಿದೆ. ಒಂದೂವರೆ ತಿಂಗಳ ಕಾಲ ನೂರಾರು ಸ್ವಯಂ ಸೇವಕರು ನಿರಂತರವಾಗಿ ಹಗಲಿರುಳು ಶ್ರಮಿಸಿದ್ದಾರೆ. ಹಜ್ ಸಮಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಹಜ್ ಯಾತ್ರಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ. ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಬಾರಿ 6200 ಮಂದಿ ಹಜ್ ಯಾತ್ರೆ ಕೈಗೊಂಡಿದ್ದು ಕೊನೆಯ ದಿನವಾದ ಇಂದು 140 ಯಾತ್ರಿಕರು ಹೊರಟಿದ್ದಾರೆ. ಒಟ್ಟು 51 ವಿಮಾನಗಳಲ್ಲಿ ಯಾತ್ರಿಕರು ಹೊರಟಿದ್ದಾರೆ. ಇದೊಂದು ಪುಣ್ಯದ ಕೆಲಸ, ನಿತ್ಯ ಯಾತ್ರಿಕರು ಹಾಗೂ ಅವರ ಕುಟುಂಬ ವರ್ಗ ಸೇರಿ 35 ಸಾವಿರ ಮಂದಿ ಸೇರಿ ಒಟ್ಟು 6 ಲಕ್ಷ ಜನರಿಗೆ ಊಟ -ತಿಂಡಿ ನನ್ನ ವೈಯಕ್ತಿಕ ವೆಚ್ಚದಲ್ಲಿ ಮಾಡುವ ಅವಕಾಶ ಒದಗಿ ಬಂದಿದ್ದು ನನ್ನ ಪುಣ್ಯ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಯಾತ್ರಿಗಳಿಂದ ಆಶೀರ್ವಾದ ಪಡೆಯಲಾಯಿತು.
ಹಜ್ ಸಚಿವ ರಹೀಮ್ ಖಾನ್, ಪರಿಷತ್ ಸದಸ್ಯ ಬಿ. ಎಂ. ಫಾರೂಕ್, ಹಜ್ ಸಮಿತಿ ಅಧ್ಯಕ್ಷ ರೌಫುದ್ದಿನ್ ಕಚೇರಿವಾಲಾ, ಮಾಜಿ ಅಧ್ಯಕ್ಷ ಜುಲ್ಫಿಕರ್ ಅಹಮದ್ ಟಿಪ್ಪು , ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫಾರಾಜ್ ಖಾನ್ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ