ದಿಬ್ಬೂರು ಮನೆಗಳ ಹಂಚಿಕೆಯಲ್ಲಿ ಗೋಲ್‌ಮಾಲ್?

ತುಮಕೂರು

       ತುಮಕೂರು ನಗರದ ಹೊರವಲಯದ ದಿಬ್ಬೂರಿನಲ್ಲಿ ನಗರ ಪ್ರದೇಶದ ವಸತಿರಹಿತರಿಗಾಗಿ ರಾಜೀವ್‌ಗಾಂಧಿ ಆವಾಸ್ ಯೋಜನೆಯಡಿ ನಿರ್ಮಿಸಿರುವ 1200 ಮನೆಗಳಲ್ಲಿ ಬಹುತೇಕ ಹಂಚಿಕೆಯಾಗಿದ್ದು, ಬಾಕಿ ಉಳಿದಿರುವ ಸಣ್ಣ ಸಂಖ್ಯೆಯ ಮನೆಗಳ ಹಂಚಿಕೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆಯೆಂಬ ದಟ್ಟ ಆರೋಪ ಕೇಳಿಬರತೊಡಗಿದೆ.

       1200 ಮನೆಗಳಲ್ಲಿ 131 ಮನೆಗಳ ಹಂಚಿಕೆ ಬಾಕಿ ಉಳಿದಿದ್ದು, ಇದಕ್ಕೆ ಸಂಬಂಧಿಸಿದಂತೆ 250 ಜನ ಫಲಾನುಭವಿಗಳು ಮನೆಗಾಗಿ ಅರ್ಜಿ ಸಲ್ಲಿಸಿ ಬೇಡಿಕೆ ಮಂಡಿಸಿದ್ದರು. ಇದರಲ್ಲಿ 100 ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ, ನಿಯಮಾನುಸಾರ ಮನೆಗಾಗಿ ನಿಗದಿಪಡಿಸಲಾದ ಮೊತ್ತದ ಡಿ.ಡಿ. ಪಾವತಿಸುವಂತೆ ಹಾಗೂ ಮೊದಲು ಪಾವತಿಸಿದವರಿಗೆ ಮೊದಲ ಆದ್ಯತೆ ಎಂದು ಅವರಿಗೆ ಸೂಚಿಸಲಾಗಿತ್ತು.

       ಇವರಲ್ಲೂ ಕೆಲವರು ಡಿ.ಡಿ. ಮೂಲಕ ಮೊತ್ತ ಪಾವತಿಸಲಾಗದೆ ಪರಿತಪಿಸುತ್ತಿದ್ದಾರೆ. ಮಿಕ್ಕುಳಿದ 31 ಮನೆಗಳಿಗಾಗಿ ಇತರ 150 ಜನರಲ್ಲಿ ಪೈಪೋಟಿ ನಡೆಯತೊಡಗಿತು. ಈ ಪೈಪೋಟಿಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಮತ್ತು ಮಧ್ಯವರ್ತಿಗಳು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಹಣ ವಸೂಲು ಮಾಡುತ್ತ ಗೋಲ್‌ಮಾಲ್ ಮಾಡುತ್ತಿದ್ದಾರೆಂಬುದೇ ಈಗಿನ ಪ್ರಮುಖ ಆರೋಪವಾಗಿದೆ.

       ‘‘ಪ್ರಸ್ತುತ 77 ಮನೆಗಳು ಹಂಚಿಕೆ ಆಗಿದ್ದು, ಮಿಕ್ಕ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಅಕ್ರಮ, ಅವ್ಯವಹಾರಗಳು ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಇದನ್ನು ಗಮನಿಸಿ ಈಗ ಕ್ರಮ ಜರುಗಿಸಬೇಕು’’ ಎಂದು ಸಾರ್ವಜನಿಕ ಹೋರಾಟಗಾರರು ಒತ್ತಾಯಿಸತೊಡಗಿದ್ದಾರೆ.

ಅಕ್ರಮ ಹಣ ವಸೂಲು

        ಈ ಮಧ್ಯ ಮತ್ತೊಂದು ಆರೋಪವೂ ಕೇಳಲಾರಂಭಿಸಿದೆ. ಇಲ್ಲಿರುವ 1200 ಮನೆಗಳಲ್ಲಿ ಅನೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ವಿದ್ಯುತ್ ಮೀಟರ್ ಅಳವಡಿಕೆಗೆ ಪ್ರತಿ ಫಲಾನುಭವಿಯಿಂದ ಅಕ್ರಮವಾಗಿ 3000 ರೂ.ಗಳನ್ನು ವಸೂಲು ಮಾಡಲಾಗುತ್ತಿದೆ. ನೀರಿನ ಸಂಪರ್ಕದ ಮೀಟರ್ ಅಳವಡಿಕೆಗೆ ಪ್ರತಿ ಮನೆಯವರಿಂದ 350 ರೂ. ಹಾಗೂ ಮೋಟಾರ್ ಅಳವಡಿಕೆಗೆ ಪ್ರತಿ ಮನೆಯವರಿಂದ 100 ರೂ.ಗಳನ್ನು ಅಕ್ರಮವಾಗಿ ವಸೂಲು ಮಾಡಲಾಗುತ್ತಿದೆ. ಈ ಯಾವ ಮೊತ್ತಕ್ಕೂ ಅಧಿಕೃತ ರಸೀತಿ ಇಲ್ಲ. ಯಾರೋ ಬಂದು ವಸೂಲು ಮಾಡಿ ಹೋಗುತ್ತಿದ್ದು, ಇಲ್ಲೂ ದಂಧೆಕೋರರ ದೊಡ್ಡ ಜಾಲವೇ ಇದೆ ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ.

ಮೂಲ ಸೌಕರ್ಯ ಒದಗಿಸಲು ಪಾಲಿಕೆ ಸದಸ್ಯರ ನಿರ್ಲಕ್ಷೃ?

       1200 ಮನೆಗಳ ಸಂಕೀರ್ಣ ಇರುವ ದಿಬ್ಬೂರಿನ ಈ ಪ್ರದೇಶವು ನಗರದ 6 ನೇ ವಾರ್ಡ್ ವ್ಯಾಪ್ತಿಯಲ್ಲಿದೆ. 1200 ಮನೆಗಳಿರುವ ಇಲ್ಲಿ ನೀರು, ನೈರ್ಮಲ್ಯ, ಬೀದಿದೀಪ ಮೊದಲಾದ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಆದರೆ 6 ನೇ ವಾರ್ಡ್‌ನಿಂದ ಹೊಸದಾಗಿ ಚುನಾಯಿತರಾಗಿರುವ ಮಹಾನಗರ ಪಾಲಿಕೆ ಸದಸ್ಯರು 1200 ಮನೆಗಳ ಈ ಸಂಕೀರ್ಣವನ್ನು ನಿರ್ಲಕ್ಷೃ ಮಾಡುತ್ತಿದ್ದಾರೆಂಬ ಮತ್ತೊಂದು ಗಂಭೀರ ಆರೋಪವೂ ಪಾಲಿಕೆಯ ಒಳಗೆ ಮತ್ತು ಹೊರಗೆ ಕೇಳಿಬರತೊಡಗಿದೆ.

      ‘‘ಇದು ನಮ್ಮ 6 ನೇ ವಾರ್ಡ್ ವ್ಯಾಪ್ತಿಯಲ್ಲಿ ಇದೆಯಾದರೂ, ಇಲ್ಲಿರುವವರು ಮೊನ್ನಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ನಮ್ಮ ಮತದಾರರಾಗಿರಲಿಲ್ಲ. ಬೇರೆ ಬೇರೆ ವಾರ್ಡ್‌ಗಳಿಂದ ಇಲ್ಲಿಗೆ ಬಂದು ಈಗ ವಾಸಿಸುತ್ತಿದ್ದಾರೆ. ಆದ್ದರಿಂದ 6 ನೇ ವಾರ್ಡ್ ವ್ಯಾಪ್ತಿಯ ಸೌಲಭ್ಯಗಳನ್ನು ಇವರಿಗೆ ಕೊಡಲು ಸಾಧ್ಯವಾಗುವುದಿಲ್ಲ. ಈ ವಾರ್ಡ್‌ನ ಪೌರಕಾರ್ಮಿಕರನ್ನು ಅಲ್ಲಿಗೆ ಕಳಿಸಬಾರದು. ಇಲ್ಲಿನ ವಾಲ್ವ್ ಮನ್‌ಗಳನ್ನು ಅಲ್ಲಿಗೆ ಬಳಸಿಕೊಳ್ಳಬಾರದು. ಈ ವಾರ್ಡ್‌ನ ಕಸದ ವಾಹನಗಳನ್ನು ಅಲ್ಲಿ ಉಪಯೋಗಿಸಬಾರದು. ವಿದ್ಯುತ್‌ದೀಪದ ವಿಷಯವೂ ಅಷ್ಟೇ ಎಂದು ಸದರಿ ನೂತನ ಪಾಲಿಕೆ ಸದಸ್ಯರು ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ’’ ಎಂಬ ಆರೋಪವು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

      ‘‘ಈ ಕಾರಣದಿಂದ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳ ಸ್ಥಿತಿ ‘ಬಿಸಿ ತುಪ್ಪ’ದಂತಾಗಿದೆ. ಆದರೂ ಪಾಲಿಕೆಯ ಅಧಿಕಾರಿಗಳು ಸದ್ಯಕ್ಕೆ 6 ನೇ ವಾರ್ಡ್‌ನ ಸಿಬ್ಬಂದಿಗಳನ್ನು ಬಿಟ್ಟು ಬೇರೆ ಸಿಬ್ಬಂದಿಯನ್ನು ಸದರಿ 1200 ಮನೆಗಳ ಸಂಕೀರ್ಣದ ಮೂಲಸೌಕರ್ಯ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ’’ ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap