ಊಟ-ತಿಂಡಿಯಿಲ್ಲದೆ ಬಿಸಿಲಲ್ಲಿ ಕಾದು ಹ್ಶೆರಾಣಾದ ರೈತರು

ಹುಳಿಯಾರು

       ಸಾಲಮನ್ನಾ ಆಗಿರುವ ರೈತರು ಡಿಸೆಂಬರ್ 4 ರ ಒಳಗಾಗಿ ಆಧಾರ್ ಕಾರ್ಡ್ ಸಹಿತಿ ವಿವಿಧ ದಾಖಲಾತಿಗಳನ್ನು ನೀಡುವಂತೆ ಸೂಚನಾ ಫಲಕದಲ್ಲಿ ಹಾಕಿದ ಪರಿಣಾಮ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯ ರೈತರು ಊಟತಿಂಡಿ ಬಿಟ್ಟು ಸರತಿ ಸಾಲಿನಲ್ಲಿ ನಿಂತ ಘಟನೆ ಹುಳಿಯಾರು ಹೋಬಳಿಯ ಯಳನಾಡು ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ನಡೆದಿದೆ.
   
       ರಾಜ್ಯ ಸರ್ಕಾರದ ಸಾಲಮನ್ನಾಕ್ಕಾಗಿ ರೈತರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಲೋನ್ ಪಾಸ್ ಬುಕ್, ಮೊಬೈಲ್ ನಂಬರ್, ಇತ್ತೀಚಿನ ಪಹಣಿ, ಪಾನ್ ಕಾರ್ಡ್ ಹೀಗೆ ವಿವಿಧ ದಾಖಲಾತಿಗಳನ್ನು ಡಿ.4 ರ ಒಳಗಾಗಿ ಬ್ಯಾಂಕ್‍ಗೆ ಸಲ್ಲಿಸುವಂತೆ ಯಳನಡುವಿನ ಕೆಜಿಬಿ ಬ್ಯಾಂಕ್ ಸೂಚನಾ ಫಲಕದಲ್ಲಿ ಹಾಕಲಾಗಿತ್ತು.

      ಡಿ.4 ಕೊನೆ ದಿನವಾಗಿದ್ದು ದಾಖಲಾತಿಗಳನ್ನು ಸಲ್ಲಿಸದಿದ್ದರೆ ಸಾಲಮನ್ನಾ ಆಗುವುದಿಲ್ಲವೆಂದು ಆತಂಕಗೊಂಡ ರೈತರು ಊಟ, ತಿಂಡಿ ಬಿಟ್ಟು ಬೆಳಗ್ಗೆಯಿಂದಲೇ ಕೆಜಿಬಿ ಬ್ಯಾಂಕ್ ಮುಂದೆ ಸರತಿ ಸಾಲಿನಲ್ಲಿ ನಿಂತರು. ಮೊದಲೆ ಇದು ರಾಗಿಯ ಕೊಯ್ಲು ಕಾಲವಾಗಿದ್ದರೂ ರೈತರು ಹೊಲ ಬಿಟ್ಟು ಬ್ಯಾಂಕ್ ಮುಂದೆ ಜಮಾಯಿಸಿದ್ದರು. ಒಂದರ್ಥದಲ್ಲಿ ನೋಟ್ ಬ್ಯಾನ್ ಸಂದರ್ಭದಲ್ಲಿ ಗ್ರಾಹಕರು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದನ್ನು ನೆನಪಿಸುವಂತಿತ್ತು.

        ಯಳನಾಡು ಕೆಜಿಬಿ ಬ್ಯಾಂಕ್‍ಗೆ ಮೋಟಿಹಳ್ಳಿ, ಕೋರಗೆರೆ, ಭಟ್ಟರಹಳ್ಳಿ, ಸಿಂಗಾಪುರ, ಯಳನಾಡು, ತಮ್ಮಡುಹಳ್ಳಿ, ಗೊಲ್ಲರಹಟ್ಟಿ, ಕೆ.ಎಸ್.ಹಳ್ಳಿ, ಡಿಂಕನಹಳ್ಳಿ, ಮರಾಠಿಪಾಳ್ಯ ಹೀಗೆ ಹತ್ತದಿನೈದು ಗ್ರಾಮಗಳು ಒಳಪಡುತ್ತವೆ. ಈ ಗ್ರಾಮಗಳಿಂದ ಯಳನಾಡು ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲದ ಕಾರಣ ರೈತರು ತಮ್ಮತಮ್ಮ ಊರುಗಳಿಂದ ನಡೆದುಕೊಂಡು ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ವೃದ್ಧರು, ಮಹಿಳೆಯರು ಎನ್ನದೆ ಸಾಲ ಮನ್ನಾ ಆಗಿರುವ ರೈತರು ಜಮಾಯಿಸಿದ್ದರು.

        ಸರತಿ ಸಾಲು ತಪ್ಪಿದರೆ ದಾಖಲಾತಿ ಕೊಡುವುದು ಕಷ್ಟವೆಂದು ತಿಂಡಿ, ಊಟ ಎಲ್ಲವನ್ನೂ ಬಿಟ್ಟು ಉರಿಯುವ ಬಿಸಿಲಿನಲ್ಲಿ ಹನಿ ನೀರು ಕುಡಿಯದೆ ಕ್ಯೂ ನಿಂತಿದ್ದ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಯಾರಾದರೊಬ್ಬರು ಬಾಟಲಿ ನೀರು ತಂದರೂ ಸಾಕು, ನಂಗೊಂದು ಹನಿ ಕೊಡಿ ಎಂದು ಕೇಳಿ ಕಿತ್ತಾಡಿ ಕುಡಿಯುತ್ತಿದ್ದ ದೃಶ್ಯ ಮನ ಕಲಕುತ್ತಿತ್ತು.

        ಯಳನಾಡು ಗ್ರಾಮದ ಅರುಣ್ ಅವರು ಹೇಳುವಂತೆ ಎಸ್‍ಬಿಐ ಬ್ಯಾಂಕ್‍ನಲ್ಲಿ ದಾಖಲಾತಿ ನೀಡಲು ಡಿ.30 ಕೊನೆಯ ದಿನವಾಗಿದೆ. ಆದರೆ ಯಳನಾಡು ಕೆಜಿಬಿಯಲ್ಲಿ ಡಿ.4 ಕೊನೆಯ ದಿನವೆಂದು ಡಿ.1 ರಂದು ಸೂಚನಾ ಫಲಕದಲ್ಲಿ ಹಾಕಿದ್ದಾರೆ. ಹಾಗಾಗಿ ರೈತರು ಆತಂಕಗೊಂಡು ದಾಖಲಾತಿ ಸಲ್ಲಿಸಲು ಮಂಗಳವಾರ ನಾ ಮುಂದು ನಾ ಮುಂದು ಎಂದು ಕ್ಯೂ ನಿಂತಿದ್ದರು. ಈ ಬಗ್ಗೆ ಮ್ಯಾನೇಜರ್‍ರವರನ್ನು ಪ್ರಶ್ನಿಸಿದರೆ ನಮ್ಮ ಆದೇಶದಲ್ಲಿ ಡಿ.4 ಇದೆ ಎನ್ನುತ್ತಾರೆ ಎಂದು ವಿವರಿಸಿದರು.

          ಎರಡ್ಮೂರು ದಿನಗಳಲ್ಲಿ ಎಲ್ಲಾ ರೈತರು ದಾಖಲಾತಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನ ಪಹಣಿ ಪಡೆಯಲು ಹೋದರೆ ಸರ್ವರ್ ಬಿಝಿ ಆಗಿ ಹಳೆಯ ಪಹಣಿಯನ್ನು ಅನೇಕರು ತಂದಿದ್ದಾರೆ. ಆದರೆ ಹಳೆ ಪಹಣಿ ಪಡೆಯದೆ ಹಿಂದಿರುಗಿಸುತ್ತಿದ್ದಾರೆ. ಬಹುಮುಖ್ಯವಾಗಿ ಬಹಳಷ್ಟು ರೈತರ ಬಳಿ ಪಾನ್ ಕಾರ್ಡ್ ಇರುವುದಿಲ್ಲ. ಇದನ್ನು ಕಡ್ಡಾಯ ಮಾಡಿರುವುದರಿಂದ ಗಂಟೆಗಟ್ಟಲೆ ಕ್ಯೂ ನಿಂತು ಕೊನೆಗೆ ದಾಖಲಾತಿ ನೀಡಲಾಗದೆ ಹಿಂದಿರುಗುತ್ತಾರೆ ಎಂದು ವಿಷಾದಿಸಿದರು

         ಬ್ಯಾಂಕ್‍ನಲ್ಲಿ 5 ಮಂದಿ ಸಿಬ್ಬಂದಿಯಿದ್ದು, ಇಬ್ಬರನ್ನು ದಾಖಲಾತಿ ಪಡೆಯುವ ಸಲುವಾಗಿ ನೇಮಿಸಿದ್ದರೂ ಸರತಿಯ ಸಾಲು ಕರಗುತ್ತಿಲ್ಲ. ಅಲ್ಲದೆ ಬ್ಯಾಂಕ್‍ನ ಇತರೆ ವಹಿವಾಟಿಗೆ ಗ್ರಹಣ ಬಡಿದಿದ್ದು, ಗ್ರಾಹಕರಿಗೆ ತೊಂದರೆಯಾಗಿತ್ತು. ಬ್ಯಾಂಕ್‍ನವರು ಕೇಳಿರುವ ದಾಖಲಾತಿಗಳನ್ನು ಇನ್ನೂ ಅನೇಕ ರೈತರು ಸಿದ್ಧಪಡಿಸಿಲ್ಲವಾದ್ದರಿಂದ ಕಡೆಯ ದಿನಾಂಕವನ್ನು ವಿಸ್ತರಿಸಿ ರೈತರಿಗೆ ಅನುಕೂಲ ಮಾಡಿ ಎಂಬುದು ಸರತಿಯಲ್ಲಿ ನಿಂತಿದ್ದ ರೈತರ ಒತ್ತಾಯವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap