ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹ

ಚಿತ್ರದುರ್ಗ:

         ಇಪ್ಪತ್ತೈದು ಲಕ್ಷ ರೂ.ಗಳ ಹಗರಣದಲ್ಲಿ ಸಿಲುಕಿರುವ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು ಹಾಗೂ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿರುವ ಹೊಸದುರ್ಗ ಠಾಣೆ ಸಬ್‍ಇನ್ಸ್‍ಪೆಕ್ಟರ್‍ನನ್ನು ಸೇವೆಯಿಂದ ಅಮಾನತ್ತುಗೊಳಿಸಿ ವಿಚಾರಣೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ.ಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

         ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ರಾಜ್ಯದ ಜನರ ಹಿತಕಾಯುವ ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿರವರಿಗೆ ಸೇರಿದ 25 ಲಕ್ಷದ 75 ಸಾವಿರ ರೂ.ಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಹಣವಿರುವ ಕವರ್ ಮೇಲೆ ಸಚಿವ ಪುಟ್ಟರಂಗಶೆಟ್ಟಿ ಎಂದು ಬರೆಯಲಾಗಿದೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು ? ಎಂದು ಪ್ರಶ್ನಿಸಿದ ಜಿ.ಹೆಚ್.ತಿಪ್ಪಾರೆಡ್ಡಿ ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

        ಇನ್ನು ಮೂರು ಸೂಟ್‍ಕೇಸ್‍ಗಳು ಎಲ್ಲಿ ಹೋದವೋ ಗೊತ್ತಿಲ್ಲ. ಸಚಿವ ಪುಟ್ಟರಂಗಶೆಟ್ಟಿ ತಮ್ಮ ಇಲಾಖೆಯ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕಾಂಗ್ರೆಸ್‍ನ ಅನೇಕ ಶಾಸಕರು, ಸಚಿವರು ಪುಟ್ಟರಂಗಶೆಟ್ಟಿ ನೆರವಿಗೆ ನಿಂತಿರುವುದು ಹಾಸ್ಯಾಸ್ಪದ ಎಂದು ಗೇಲಿ ಮಾಡಿದ ಶಾಸಕರು ಕೆ.ಪಿ.ಸಿ.ಸಿ.ರಾಜ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಇದೇನು ಪುಟಪೋಸಿ 25 ಲಕ್ಷ ರೂ.ಎಂದು ಹಗುರವಾಗಿ ಮಾತನಾಡಿ ಸಾರ್ವಜನಿಕರಿಂದ ಟೀಕೆಗಳು ಬಂದ ಮೇಲೆ ಕ್ಷಮೆ ಯಾಚಿಸಿರುವುದು ಇನ್ನು ನಾಚಿಕೆಗೇಡಿನ ಸಂಗತಿ ಎಂದು ಗೇಲಿ ಮಾಡಿದರು.

          ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದ ಎಲ್ಲಾ ಹಗರಣಗಳನ್ನು ಮುಚ್ಚಿಕೊಳ್ಳಲು ಎ.ಸಿ.ಬಿ.ನೇಮಿಸಿಕೊಂಡು ಸ್ವಲ್ಪ ದಿನಗಳ ನಂತರ ಕ್ಲೀನ್‍ಚಿಟ್ ಕೊಡುವ ಪರಿಪಾಠ ಬೆಳೆಸಿಕೊಂಡಿದ್ದು, ಈಗಿನ ರಾಜ್ಯ ಸಮ್ಮಿಶ್ರ ಸರ್ಕಾರ ಅದನ್ನೆ ಮುಂದುವರೆಸಿಕೊಂಡು ಹೋಗುತ್ತಿದೆ. ಅಮೇರಿಕಾ-ಇರಾನ್ ನಡುವಿನ ದ್ವೇಷದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವಾಗಿದ್ದರಿಂದ ಅನಿವಾರ್ಯವಾಗಿ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಹೆಚ್ಚಿಸಬೇಕಾಯಿತು. ಇದನ್ನು ವಿರೋಧಿಸಿ ಕಳೆದ ಆರು ತಿಂಗಳ ಹಿಂದೆ ಕಾಂಗ್ರೆಸ್‍ನವರು ಭಾರತ್ ಬಂದ್‍ಗೆ ಕರೆ ನೀಡಿ ದೇಶದ ಜನತೆಗೆ ತಪ್ಪು ಸಂದೇಶ ರವಾನಿಸಿದರು. ಅದೇ ಈಗ ಪ್ರಧಾನಿ ಮೋದಿರವರ ಸತತ ಪರಿಶ್ರಮದಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆ ಲೀಟರ್‍ಗೆ ಹದಿನೈದು ರೂ.ಇಳಿಕೆಯಾಗಿದ್ದರೂ ರಾಜ್ಯ ಸರ್ಕಾರ ಸೆಸ್ ನೆಪದಲ್ಲಿ ಎರಡು ರೂ.ಹೆಚ್ಚಿಸಿ ರಾಜ್ಯದ ಜನರ ಮೇಲೆ ಭಾರ ಹೊರಿಸಿದೆ. ರೈತರ ಹದಿನೆಂಟು ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ರೈತರಿಗೆ ಇದುವರೆವಿಗೂ ಬೆಂಬಲ ಬೆಲೆ ನಿಗಧಿಪಡಿಸಿಲ್ಲ ಎಂದು ರಾಜ್ಯ ಮೈತ್ರಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

        ಕೇಂದ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಲ್ಲಿದ್ದಲು ಹಗರಣದಲ್ಲಿ ಮೂರು ಲಕ್ಷ ಕೋಟಿ ರೂ., ಟು ಜಿ.ಸ್ಪೆಕ್ಟ್ರಂನಲ್ಲಿ ಮೂರು ಲಕ್ಷ ಕೋಟಿ ರೂ., ಗೋದಾವರಿ ಬೇಸಿನ್‍ನಲ್ಲಿ ಎರಡುವರೆ ಲಕ್ಷ ಕೋಟಿ ರೂ., ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ನಲವತ್ತು ಸಾವಿರ ಕೋಟಿ ರೂ. ಲೂಟಿ ಹೊಡೆದು ಭ್ರಷ್ಟಾಚಾರದಲ್ಲಿ ಮುಳಗಿರುವುದರಿಂದ ಬಿಜೆಪಿ.ಯನ್ನು ಟೀಕಿಸುವ ನೈತಿಕತೆ ಇಲ್ಲ. ಸೋನಿಯಾಗಾಂಧಿ, ರಾಹುಲ್‍ಗಾಂಧಿ ಹಾಗೂ ಸೋನಿಯಾಗಾಂಧಿ ಅಳಿಯ ರಾಬರ್ಟ್‍ವಾದ್ರಾ ಇವರುಗಳು ಸೇರಿಕೊಂಡು ನ್ಯಾಷನಲ್ ಹೆರಾಲ್ಡ್, ಅಗಸ್ತಾ ಹೆಲಿಕ್ಯಾಪ್ಟರ್‍ನಲ್ಲಿ ಹಗರಣವೆಸಗಿದ್ದಾರೆ. ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್‍ಭೀಮ ಯೋಜನೆಯ ಹಣವನ್ನು ರಾಜ್ಯ ಸರ್ಕಾರದ ಅಧಿಕಾರಿಗಳು, ಇನ್ಸುರೆನ್ಸ್ ಕಂಪನಿಯವರು ಸೇರಿಕೊಂಡು ಲಪಟಾಯಿಸುತ್ತಿದ್ದಾರೆ ಇದರಿಂದ ಅನ್ನದಾತ ರೈತ ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದಾನೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

          ಹೊಸದುರ್ಗದಲ್ಲಿ ಮರಳು ಮಾಫಿಯ ನಡೆಯುತ್ತಿರುವುದನ್ನು ನಿಯಂತ್ರಿಸುವಂತೆ ಅನೇಕ ಬಾರಿ ಹೋರಾಟ, ಪ್ರತಿಭಟನೆಗಳನ್ನು ನಡೆಸಿ ಕೊನೆಗೆ ಮನನೊಂದು ಠಾಣೆ ಎದುರಿನಲ್ಲೇ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ಕಾರಣವಾಗಿರುವ ಸಬ್‍ಇನ್ಸ್‍ಪೆಕ್ಟರ್‍ನನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು. ಆಶ್ರಯ, ಅಂಬೇಡ್ಕರ್, ಬಸವವಸತಿ ಯೋಜನೆಯಡಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಸಾವಿರಾರು ಮನೆಗಳು ಮಂಜೂರಾಗಿರುವುದರಿಂದ ಬಡವರು ಎತ್ತಿನಗಾಡಿ, ಸಿಮೆಂಟ್‍ಚೀಲದಲ್ಲಿ ಮರಳುಗಳನ್ನು ತುಂಬಿಕೊಂಡು ಹೋಗುವವರ ಮೇಲೆ ಕೇಸು ದಾಖಲಿಸುತ್ತಿರುವ ಪೊಲೀಸರು ರಾತ್ರೋ ರಾತ್ರಿ ಲಾರಿಗಳಲ್ಲಿ ಲೋಡ್‍ಗಟ್ಟಲೆ ಮರಳುಗಳು ಹೊರ ಊರುಗಳಿಗೆ ಹೋಗುವುದನ್ನು ಮೊದಲು ನಿಲ್ಲಿಸಲಿ. ಶಾಸಕ ಗೂಳಿಹಟ್ಟಿ ಡಿ.ಶೇಖರ್ ಬಡವರ ಪರವಾಗಿರುವುದು ತಪ್ಪೇ? ಎಂದು ಶಾಸಕರು ಪೋಲಿಸರ ದೌರ್ಜನ್ಯವನ್ನು ಖಂಡಿಸಿದರು.

          ವಿಭಾಗೀಯ ಸಹಪ್ರಭಾರಿ ಜಿ.ಎಂ.ಸುರೇಶ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ರತ್ನಮ್ಮ, ವಕ್ತಾರನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನರೇಂದ್ರ, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್‍ಸಿದ್ದಾಪುರ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ರೇಖ, ಶಂಭು, ನವೀನ್ ಚಾಲುಕ್ಯ, ವೀರೇಶ್, ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಭಾಸ್ಕರ್, ಹರೀಶ್, ಶಶಿ, ತಾರಕೇಶ್ವರಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap