ಅಂಗನವಾಡಿ ನೌಕರರಿಂದ ಅಹೋರಾತ್ರಿ ಹೋರಾಟ ಚಳುವಳಿ : ಎ ಆರ್ ಎಂ ಇಸ್ಮಾಯಿಲ್

ಬಳ್ಳಾರಿ

    ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಕಾರ್ಮಿಕರಿಗೆ ಲಭ್ಯವಾದ ಎಲ್ಲ ಕಾನೂನು ಬದ್ಧ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸಿ ಜುಲೈ 5 ಮತ್ತು 6 ರಂದು ಅಹೋರಾತ್ರಿ ಹೋರಾಟ ಚಳುವಳಿಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನ ಎಆರ್‍ಎಂ ಇಸ್ಮಾಯಿಲ್ ತಿಳಿಸಿದ್ದಾರೆ.

     ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಳೆದ ನಾಲ್ಕು ದಶಕದ ಹಿಂದೆಯೇ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಮಕ್ಕಳು ಮತ್ತು ಮಹಿಳೆಯರು ಅಪೌಷ್ಠಿಕತೆಯಿಂದ ಮುಕ್ತರಾಗಲು ಈ ಯೋಜನೆ ಜಾರಿಗೆ ತಂದಿದ್ದರು.

     ಅಂಗನವಾಡಿ ಕಾರ್ಯಕರ್ತೆಯರು ಅಂದಿನಿಂದ ಇಂದಿನವರೆಗೂ ಲಕ್ಷಾನುಗಟ್ಟಲೆ ಗರ್ಭಿಣಿ ಬಾಣಂತಿಯರು, ಕಿಶೋರಿಯರಿಗೆ ಆರೋಗ್ಯ ರಕ್ಷಣೆ ಮತ್ತು ಪೌಷ್ಠಿಕ ಆಹಾರ ಒದಗಿಸುತ್ತಿದ್ದಾರೆ. ಶಾಲಾಪೂರ್ವ ಶಿಕ್ಷಣ ಎಂಬ ಆದ್ಯಕ್ಷರ ನೀಡಲು ಸತತ ಸೇವೆ ಮಾಡುತ್ತಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ಶಿಶು ಅಭಿವೃದ್ದಿ ಯೋಜನೆ ಅನುದಾನದಲ್ಲಿ ರೂ.10 ಸಾವಿರ ಕೋಟಿಯಷ್ಟು ಕಡಿತ ಮಾಡಿರುವುದು ನೋವಿನ ಸಂಗತಿಯಾಗಿದೆ.

      ತಮ್ಮ ಅನೇಕ ಸಮಸ್ಯೆಗಳ ನಡುವೆಯೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರ್ಕಾರದ ನಿರ್ದೇಶನದಂತೆ ತಮ್ಮ ತಮ್ಮ ಕೇಂದ್ರಗಳಲ್ಲಿ ಸ್ವಚ್ಛತೆ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವಿತರಣೆ, ಮಕ್ಕಳ ತೂಕ ಮಾಡಿ ಪೌಷ್ಠಿಕತೆ ಗಮನಿಸುವುದು, ಅವರ ಲಾಲನೆ-ಪಾಲನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರಗಳು ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಅಧಿಸೂಚನೆ ಹೊರಡಿಸಿವೆ. ಅಂಗನವಾಡಿ ಕೇಂದ್ರದಲ್ಲಿಯೇ ಎಲ್‍ಕೆಜಿ, ಯುಕೆಜಿಗಳನ್ನು ನಡೆಸಿದಲ್ಲಿ ಯೋಜನೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

      ಇನ್ನು ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ರಕ್ಷಣೆ ಇಲ್ಲ. ಸಾಮಾನ್ಯ ನೌಕರರಿಗೂ ಸಿಗುವ ಭವಿಷ್ಯ ನಿಧಿ, ಜೀವ ವಿಮಾ, ಉಪಧನ ಪರಿಹಾರ, ಕಾರ್ಮಿಕ ನಷ್ಟ ಪರಿಹಾರಗಳು ದೊರೆಯುತ್ತಿಲ್ಲ. ಈ ಕಾರಣಕ್ಕಾಗಿ ಈ ಅಹೋರಾತ್ರಿ ಹೋರಾಟ ಚಳುವಳಿ ಹಮ್ಮಿಕೊಂಡಿರುವುದಾಗಿ ಹೇಳಿದರು.

        ಫೆಡರೇಷನ್ ನ ರಾಜ್ಯ ಕಾರ್ಯದರ್ಶಿ ಎಸ್.ಅರ್ಕಾಣಿ, ಜಿಲ್ಲಾಧ್ಯಕ್ಷೆ ಶಿವಗಂಗಮ್ಮ, ಪದಾಧಿಕಾರಿಗಳಾದ ಇ.ಮಂಗಮ್ಮ, ಶಾಂತಮ್ಮ, ರತ್ನ, ಈರಮ್ಮ ಹಿರೇಮಠ, ಕಲಾವತಿ, ಮಂಗಳಗೌರಿ, ಬಿಕೆ ಶಾರದಾ, ಶ್ರೀದೇವಿ, ವನಜಾಕ್ಷಿ, ಮಾರ್ಗರೇಟ್, ಎರ್ರೆಮ್ಮ, ಕೊಂಡಮ್ಮ, ವರಲಕ್ಷ್ಮಿ, ಆದಿಮೂರ್ತಿ ಮತ್ತು ಕಟ್ಟೆಬಸಪ್ಪ ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link